ದಿನದ ಸುದ್ದಿ

ಜಗದ ಗುರು ಡಾ.ಬಿ.ಆರ್. ಅಂಬೇಡ್ಕರ್..!

Published

on

  • ಸನಾವುಲ್ಲಾ ನವಿಲೇಹಾಳು

ಶಿಕ್ಷಣವು ತನ್ನೆದುರಿಗೆ ತೆರದ ಅವಕಾಶಗಳ ಸ್ವರ್ಣಚಿತ್ರ ಎಂದು ಮನಗಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ131 ನೆ ಜನ್ಮದಿನದ ಈ ಸಂದರ್ಭದಲ್ಲಿ, ನಮ್ಮ ದೇಶ ಎತ್ತಸಾಗುತ್ತಿದೆ? ಸಂವಿಧಾನ ನಮಗೆ ಎಷ್ಟರ ಮಟ್ಟಿಗೆ ತಿಳಿದಿದೆ ಎಂದು ನಮ್ಮನ್ನು ನಾವೆ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

ಈಗ ನನ್ನ ಕಣ್ಣೆದರಿಗೆ ಇರುವ ಬಹುಪಾಲು ಜನರು ಸ್ವತಂತ್ರ ನಂತರ ಅಥವಾ ಸಂವಿಧಾನ ಹುಟ್ಟಿದ ನಂತರ ಹುಟ್ಟಿದವರಿರಬಹುದು ಎಂದು ಭಾವಿಸಿದ್ದೇನೆ, ಹಾಗಾಗಿ ನಮ್ಮ ದೇಶಕ್ಕೆ ಈ ತೆರೆನಾದ ಸಂವಿಧಾನ ಬೇಕು ಎಂಬ ಅಂಬೇಡ್ಕರ್ ಅವರ ದನಿಯ ಹಿಂದಿನ ಅನುಭವ ಮತ್ತು ಸಂಕಟ ನಮಗ್ಯಾರಿಗೂ ಇರಲಾರದು, ಇದನ್ನು ಅರ್ಥಮಾಡಿಕೊಳ್ಳ ಬೇಕಾದರೆ ನಾವು ಅಂಬೇಡ್ಕರ್ ಅವರ ಬದುಕನ್ನ ಅಧ್ಯಾಯನ ಮಾಡಬೇಕಾಗಿದೆ,ನಂತರ ಸಂವಿಧಾನ ನಮಗೆ ಅರ್ಥವಾಗ ಬಹುದು.

ದೇಶ ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದರೂ ಜನರು ಹಿಂದಿಗಿಂತಲೂ ಇಂದು ಮೌಡ್ಯರಾಗುತ್ತಿರುವುದು ಆಧುನಿಕ ಜಗತ್ತು ನಾಚಿಕೆ ಪಟ್ಟುಕೊಳ್ಳಬೇಕಾದ ಸಂಗತಿ. ಆದರೆ ಎಲ್ಲಾ ಧರ್ಮೀಯರು ಮತ್ತೆ ಧರ್ಮಾಂದತೆಗೆ ಒಳಗಾಗುತ್ತಿದ್ದಾರೆ, ಜಾತಿವಿನಾಶ, ಅಂತರ್ಜಾತಿ ವಿವಾಹದ ಮಾತಿರಲಿ ಒಂದು ಧರ್ಮದವನು ಮತ್ತೊಂದು ಧರ್ಮದವನೊಂದಿಗೆ ಮಾತನಾಡುವುದು, ಸಾಮಾಜಿಕವಾಗಿ ಬೆರೆಯುವುದು ಧರ್ಮವಿರೋಧಿನೆಲೆ ಎಂದು ಬಿಂಬಿಸುವ ಮೂಲಭೂತವಾದಿಗಳ ಸಂಖ್ಯೆ ಹೆಚ್ಚುತ್ತಿದೆ.

ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಸ್ನೇಹತ್ವ ಧರ್ಮವನ್ನು ದಾಟುತ್ತಿಲ್ಲ, ಧರ್ಮವನ್ನು ದಾಟಿದ ಗಂಡು-ಹೆಣ್ಣು ಒಟ್ಟಿಗೆ ಸ್ನೇಹದಿಂದ ನಡೆದುಕೊಳ್ಳುವಂತಿಲ್ಲ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಧುನಿಕ ಭಾರತವಿದೆ. ಧರ್ಮ ಪ್ರಜ್ಞೆಯನ್ನು ಬೋಧಿಸಬೇಕು, ಮೂಢನಂಬಿಕೆಯನ್ನಾಗಲಿ ಅಥವಾ ಅತೀಂದ್ರಿಯ ಶಕ್ತಿಗಳನ್ನಾಗಲಿ ನಂಬಿಸಬಾರದು, ಧರ್ಮ ಕರುಣೆಯನ್ನು ಬೋಧಿಸಬೇಕು, ಸಮಾನತೆಯನ್ನು ಕಲಿಸಬೇಕು, ಮನುಷ್ಯನಿಗೆ ಭೂಮಿಯ ಮೇಲೆ ಸುಖ ಸಂತೋಷದಿಂದ ಬದುಕುವುದಕ್ಕೆ ಬೇಕಾಗಿರುವುದು ಅದೇನೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರೆ ಅಭಿಪ್ರಾಯ ಪಟ್ಟಿದ್ದಾರೆ. ದೇವರಾಗಲಿ, ಆತ್ಮವಾಗಲಿ ಸಮಾಜವನ್ನು ಬದುಕಿಸುವುದಕ್ಕೆ ಆಗುವುದಿಲ್ಲ ಎಂಬುದು ಇದರ ಅರ್ಥ.

ಒಂದು ಧರ್ಮದ ತತ್ವಮೀಮಾಂಸೆ ಏನೇ ಇರಬಹುದು ಆದರೆ ಆ ಧರ್ಮವು ಯಾವ ರೀತಿಯ ಆಚರಣೆಗಳನ್ನು ನಂಬಿಕೊಂಡಿದೆ ಹಾಗೂ ಆ ಧರ್ಮದ ಅನುಯಾಯಿಗಳು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದು ಆ ಧರ್ಮದ ನೆಲೆಗಟ್ಟನ್ನು ತಿಳಿಸುತ್ತದೆ. ಆದರೆ ಈ ಕಾಲದಲ್ಲೂ ಕೂಡ ಜಾತಿಪದ್ದತಿಯನ್ನು ಸಮರ್ಥಿಸುವವರು ಇರುವುದು ಬೇಸರದ ಸಂಗತಿ, ಅವರು ಕೊಡುವ ಸಮರ್ಥನೆಗಳು ಹಲವಾರು.

ಆದರೆ ಅಂಬೇಡ್ಕರ್ ಅವರು ಹೇಳುವಂತೆ: ಜಾತಿಪದ್ದತಿ ಕೇವಲ ಶ್ರಮ ವಿಭಜನೆಯಾಗಿರದೆ ಶ್ರಮಜೀವಿಗಳ ವಿಭಾಗವೂ ಆಗಿದೆ. ಸುಧಾರಿತ ಸಮಾಜಕ್ಕೆ ಶ್ರಮ ವಿಭಜನೆ ಅವಶ್ಯಕವೆಂಬುದು ನಿರ್ವಿವಾದ. ಆದರೆ ಶ್ರಮ ವಿಭಜನೆಯಲ್ಲಿ ವಿವಿಧ ಶ್ರಮಿಕ ವರ್ಗಗಳು ಒಂದನ್ನೊಂದು ಸೇರದಂತೆ ಪ್ರತ್ಯೇಕವಾಗಿ ವಿಭಜನೆಗೊಂಡಿರುವುದು ಯಾವ ಸುಧಾರಿತ ಸಮಾಜದಲ್ಲಿಯೂ ಕಾಣದು. (ಅಂ.ಬರಹಗಳು ಮತ್ತು ಭಾಷಣಗಳು ಸಂ.೧.ಪು ೫೮).

ಜಾತಿಪದ್ದತಿ ಶ್ರಮಿಕರ ವಿಭಾಗ ಮಾತ್ರವಲ್ಲ ಅದರಲ್ಲಿ ವಿಭಾಗಗೊಂಡ ವರ್ಗಗಳು, ಕೆಳವರ್ಗ, ಅದಕ್ಕೂ ಕೆಳವರ್ಗ, ಹೀಗೆ ಬಂದು ನಿಚ್ಚೋಚ್ಚಶ್ರೇಣಿಯನ್ನು ಹೊಂದಿವೆ, ಇಂತಹ ಉಚ್ಚ, ನೀಚ ವರ್ಗಿಕರಣ ಬೇರೆಯಾವ ದೇಶದಲ್ಲಿಯೂ ಶ್ರಮವಿಭಾಗದ ಅಂಗವಾಗಿಲ್ಲ. ವ್ಯೆಕ್ತಿಯ ಅಭಿರುಚಿ ಸಾಮರ್ಥ್ಯಗಳನ್ನು ಗಮನಿಸುವ ಬದಲಾಗಿ ಆತನ ತಂದೆ ತಾಯಿಗಳ ಸಾಮಾಜಿಕ ಸ್ಥಾನಮಾನಕ್ಕೆ ಅನುಸಾರವಾಗಿ ಅವನಿಗೆ ಇಂತಹ ಕೆಲಸ ಎಂದು ನಿಗದಿಪಡಿಸಲಾಗುತ್ತದೆ.ಜಾತಿ ಪದ್ದತಿಯಿಂದ ಈ ವೃತ್ತಿವಿಭಜನೆ ಅಥವಾ ಕೆಲಸಗಳ ನೇಮಕವು ಖಂಡಿತವಾಗಿ ವಿನಾಶಕಾರಿಯಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ನಮಗೆ ಜಾತ್ಯಾತೀತವಾಗಿ , ಸಮಾನತೆಯಿಂದ, ಸಮತೆಯಿಂದ, ಸಹೋಧರತೆಯಿಂದ ಬದುಕುವುದನ್ನು ಕಲಿಸುತ್ತದೆ, ಇಂದು ಅಂಬೇಡ್ಕರ್ ನಮಗೆ ಸಂವಿಧಾನರೂಪದಲ್ಲಿ ಎಲ್ಲಾ ಧರ್ಮಗಳ ಆಚೆಯಿರುವ ‘ಮಾನವಧರ್ಮ’ವನ್ನು ಕೊಟ್ಟಿರುವಂತದ್ದು, ಮನುಷ್ಯರನ್ನು ಮನುಷ್ಯರಂತೆ ಕಾಣುವುದನ್ನು ಕಲಿಸಿರುವಂತದ್ದನ್ನು ನಾವು ಅರ್ಥೈಸಿಕೊಂಡು ನಡೆಯಬೇಕಾಗಿದೆ.

ಅಂಬೇಡ್ಕರ್ ಅವರಿಗೆ ಈ ತರಹದ ಆಲೋಚನೆ ಕೇವಲ ಶಿಕ್ಷಣದಿಂದ ಬಂದದ್ದಲ್ಲ ಸ್ವತ: ಅವರು ಇದನ್ನೆಲ್ಲಾ ತಮ್ಮ ಜೀವನದಲ್ಲಿ ಅನುಭವಿಸಿದ್ದರಿಂದ ಬಂದಿರುವಂತದ್ದು, ಮನುಧರ್ಮ ದಲ್ಲಿದ್ದಂತಹ ಸಾಮಾಜಿಕ, ಧಾರ್ಮಿಕ, ಆಚರಣೆಗಳಿಂದ ನೋವುಂಡವರು ಅಂಬೇಡ್ಕರ್.

ಹಾಗಾಗಿ ಇಂತಹ ಒಂದು ವ್ಯವಸ್ಥೆಯ ವಿರುದ್ದ ತಿರುಗಿಬಿದ್ದು ತಾನು ಅನುಭವಿಸಿದ ಸಂಕಟ, ನೋವು,ಅವಮಾನಗಳು ನನ್ನ ಮುಂದಿನ ತಲೆಮಾರು ಅನುಭವಿಸ ಬಾರದು ಎಂಬುದು ಅಂಬೇಡ್ಕರ್ ಅವರ ಕನಸ್ಸಾಗಿತ್ತು. ಆದರೆ ಇವತ್ತು ನಾವು ಯಾವ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆಂದು ಆಲೋಚಿಸಿದರೆ ಅಂದಿನ ಆಚರಣೆ,ಸಂಪ್ರದಾಯ, ಧಾರ್ಮಿಕ ನಂಬಿಕೆಗಳ ವಿರುದ್ದ ತಿರುಗಿಬೀಳಲು ಅಂಬೇಡ್ಕರ್ ಅವರ ಹೋರಾಟ ಎಷ್ಟು ಮುಖ್ಯವಾಗಿತ್ತೊ, ಇಂದು ಅವರ ಜಾತಿ ಮತ್ತು ಧರ್ಮದ ಬಗೆಗಿನ ಧೋರಣೆಯನ್ನ ಅಷ್ಟೆ ಮುಖ್ಯವಾಗಿ ಪ್ರಸ್ತುತ ಪಡಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version