ದಿನದ ಸುದ್ದಿ
ಚಿತ್ರದುರ್ಗ ಜಿಲ್ಲೆಗೆ ಜಗಳೂರು ಸೇರ್ಪಡೆ; ಕಾವೇರಿದ ಹೋರಾಟ
ಸುದ್ದಿದಿನ ದಾವಣಗೆರೆ: ಶತಮಾನದಲ್ಲಿ ಏಳು ದಶಕ ಬರ ಕಂಡಿರುವ ಜಗಳೂರು ತಾಲೂಕಿನಲ್ಲಿ ಈಗ ಚಿತ್ರದುರ್ಗ ಜಿಲ್ಲೆಗೆ ಸೇರಬೇಕೆಂಬ ಹೋರಾಟದ ಕಾವು ತೀವ್ರವಾಗುತ್ತಿದೆ. ಸಾಮಾಜಿಕ, ಆರ್ಥಿಕ ಸೌಲಭ್ಯಗಳಿಂದ ಜಗಳೂರು ದಾವಣಗೆರೆ ಜಿಲ್ಲೆಯಾಗುವ ಮೊದಲು ಚಿತ್ರದುರ್ಗ ಜಿಲ್ಲೆಯಲ್ಲಿತ್ತು. ದಾವಣಗೆರೆ ಜಿಲ್ಲೆಯಲ್ಲೇ ಅತಿ ಹಿಂದುಳಿದ, ಬರಪೀಡಿತ ಪ್ರದೇಶವಾದ ಜಗಳೂರು ತಾಲ್ಲೂಕನ್ನು ಸರ್ಕಾರಗಳು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಇದು ಜಗಳೂರು ತಾಲೂಕಿನ ಜನರಲ್ಲಿ ಹೋರಾಟಕ್ಕೆ ಸಜ್ಜಾಗಲು ಕಾರಣವಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಚನ್ನಗಿರಿ, ಹೊನ್ನಾಳಿ, ಹರಿಹರ, ದಾವಣಗೆರೆ, ಹರಪನಹಳ್ಳಿ, ಜಗಳೂರು ಸೇರಿ ಆರು ತಾಲೂಕುಗಳಿವೆ. ಜಗಳೂರು ಹೊರತು ಪಡಿಸಿ ಉಳಿದ ತಾಲೂಕುಗಳಿಗೆ ಅಭಿವೃದ್ಧಿಯಲ್ಲಿ ಮುಂದಿವೆ. ಆದರೆ, ಜಗಳೂರು ಎಲ್ಲದ್ದಕ್ಕೂ ದಾವಣಗೆರೆ, ಚಿತ್ರದುರ್ಗ ಅಲಂಬಿಸಬೇಕಿದೆ. ದಾವಣಗೆರೆ ೫೦ ಕಿಮೀ, ಚಿತ್ರದುರ್ಗ ೪೦ ಕಿಮೀ ಅಂತರದಲ್ಲಿವೆ. ಆದರೆ, ಅಂತರಕ್ಕಿಂತ ಹೆಚ್ಚಾಗಿ ಜಗಳೂರು ತಾಲೂಕಿನ ಜನತೆ ಚಿತ್ರದುರ್ಗ ಜಿಲ್ಲೆಯೊಂದಿಗೆ ಭಾವನಾತ್ಮಕ, ವೈವಾಹಿಕ ಸಂಬಂಧ ಬೆಸೆದುಕೊಂಡಿದೆ.
ಜಗಳೂರಿಗಿಲ್ಲ ಜಲಮೂಲ
ಜಗಳೂರು ತಾಲೂಕಿನಲ್ಲಿ ಯಾವುದೇ ಜಲಮೂಲಗಳಿಲ್ಲ. ಬರಪೀಡಿತ ತಾಲೂಕು ಆಗಿರುವುದರಿಂದ ಅಂತರ್ಜಲವೂ ಅಷ್ಟಕಷ್ಟೇ, ಒಂದು ಕೊಳವೆಬಾವಿ ಹಾಕಿಸಿದರೆ 800ರಿಂದ 1000 ಅಡಿಯಲ್ಲಿ ನೀರು ಸಿಗುತ್ತದೆ. ಇದಕ್ಕೆ ಲಕ್ಷಾಂತರ ರೂಪಾಯಿ ಸುರಿಯಬೇಕು. ಆರ್ಥಿಕ ಹಿಂದುಳಿದ ಜನರು ಇರುವುದರಿಂದ ಕೊಳವೆಬಾವಿಗೆ ಲಕ್ಷಾಂತರ ಸುರಿದರೆ ಅವರ ಜೀವನ ಪಾತಾಳಕ್ಕಿಳಿಯುತ್ತಿದೆ. ಸೌಲಭ್ಯ ವಂಚಿತ, ಬರಪೀಡಿತ ಜಗಳೂರು ತಾಲ್ಲೂಕನ್ನು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರಿಸಲು ಹೋರಾಟ ಚುರುಕು ಪಡೆದುಕೊಳ್ಳುತ್ತಿದೆ.
ಮಳೆ ಬಾರದೇ ಬಿತ್ತಿದ ಬೆಳೆಗಳು ಒಣಗಿ ಹೋಗಿದ್ದರೂ ಸಹ ದಾವಣಗೆರೆ ಜಿಲ್ಲೆಯಲ್ಲೇ ಅತಿ ಹಿಂದುಳಿದ, ಬರಪೀಡಿತ ಪ್ರದೇಶವಾದ ಜಗಳೂರು ತಾಲ್ಲೂಕನ್ನು ಸರ್ಕಾರಗಳು ಬರಪೀಡಿತ ದೇಶವೆಂದು ಘೋಷಣೆ ಮಾಡಿಲ್ಲ. ನೀರಾವರಿ ಪ್ರದೇಶ ಹೊಂದಿರುವ ಹರಿಹರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡುವ ಮೂಲಕ ತಾಲ್ಲೂಕಿಗೆ ಮಲತಾಯಿ ಧೋರಣೆ ಮಾಡಿದೆ.
ಬಳ್ಳಾರಿಗೆ ಸೇರಿದ ಹರಪನಹಳ್ಳಿ; ಜಗಳೂರು ಕ್ಯಾತೆ
ಭಾಗಶಃ ನೀರಾವರಿ ಭೂಮಿ ಹೊಂದಿರುವ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿದೆ. ಹರಪನಹಳ್ಳಿ ತಾಲೂಕಿನ ಜನತೆಗೆ ಹೈದರಾಬಾದ್ ಕರ್ನಾಟಕ ಸೌಲಭ್ಯ ಸಿಗಲಿದೆ. ಇದನ್ನೇ ಮುಂದಿಟ್ಟುಕೊಂಡಿರುವ ಜಗಳೂರು ತಾಲೂಕಿನ ಮುಖಂಡರು ನಮ್ಮನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಬಿಡಿ ಎಂಬ ಪಟ್ಟಹಿಡಿದಿದ್ದಾರೆ. ಜಗಳೂರು ತಾಲೂಕು ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳು, ವಿದರ್ಭ ಪ್ಯಾಕೇಜ್, ನಂಜುಂಡುಪ್ಪ ವರದಿಯ ಸೌಲಭ್ಯಗಳಿಂದ ವಂಚಿತವಾಗಿದೆ. ಚಿತ್ರದುರ್ಗ ಜಿಲ್ಲೆಗೆ ಸೇರಿಸಿದರೆ ನಮಗೆ ಈ ಸೌಲಭ್ಯ ಸಿಗಲಿದೆ ಎಂಬ ಆಶಯ ಹೊಂದಿದ್ದಾರೆ.
ಹೋರಾಟಕ್ಕೆ ಮಾಜಿ ಬೆಂಬಲ, ಹಾಲಿ ಶಾಸಕರಿಂದ ಕಾದು ನೋಡುವ ತಂತ್ರ
ಚಿತ್ರದುರ್ಗ ಜಿಲ್ಲೆಗೆ ಜಗಳೂರು ತಾಲೂಕು ಸೇರಿಸಲು ರೂಪಿಸುತ್ತಿರುವ ಹೋರಾಟಕ್ಕೆ ಮಾಜಿ ಶಾಸಕ ಎಚ್.ಪಿ. ರಾಜೇಶ್ ಬೆಂಬಲ ಸೂಚಿಸಿದ್ದಾರೆ. ಆದರೆ, ಹಾಲಿ ಶಾಸಕ ಎಸ್.ವಿ. ರಾಮಚಂದ್ರ ಕಾದು ನೋಡುವ ತಂತ್ರ ಬಳಸಿದ್ದು, ಇತ್ತ ಬೆಂಬಲವೂ ಇಲ್ಲ, ಅತ್ತ ವಿರೋಧವೂ ಇಲ್ಲ ಎಂಬಂತೆ ತಟಸ್ಥರಾಗಿದ್ದಾರೆ. ಆದರೆ, ಮಾಜಿ ಶಾಸಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಜಗಳೂರು ತಾಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರಿಸಿ ಇಪ್ಪತ್ತು ವರ್ಷಗಳಾದರೂ ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸುವುದು ಅನಿವಾರ್ಯ ಎಂಬ ಅಭಿಪ್ರಾಯ ಹೊಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401