Connect with us

ರಾಜಕೀಯ

ಜೈ ಹಿಂದ್, ಜೈ ಕರ್ನಾಟಕ

Published

on

ಪ್ರಾಥಮಿಕ ಶಾಲಾ ದಿನಗಳು ನೆನಪಾಗುತ್ತಿವೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ರಾಜ್ಯೋತ್ಸವ ದಿನಗಳಂದು ನಮ್ಮೊಳಗೆ ಎಲ್ಲಿಲ್ಲದ ಹುಮ್ಮಸ್ಸು ರೂಪುಗೊಳ್ಳುತ್ತಿತ್ತು. ಭಾಷಣ, ಗಾಯನ ಹೀಗೆ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಮುಖ್ಯವಾಗಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಗೆಲ್ಲುವ ತವಕವಿರುತ್ತಿತ್ತು. ಆ ದಿನಗಳಲ್ಲಿ ಅಪ್ಪ ಬರೆದುಕೊಡುತ್ತಿದ್ದ ಎರಡು ಪುಟಗಳ ಭಾಷಣವನ್ನು ಓದಿಕೊಳ್ಳಬೇಕಾಗುತ್ತಿತ್ತು. ಅವರು ಅದರೊಳಗಿನ ತಿರುಳನ್ನು ಹೇಳಿಕೊಡುತ್ತಿದ್ದರು. ಅದನ್ನಷ್ಟೇ ತಿಳಿದುಕೊಂಡು ಭಾಷಣದ ವೇಳೆ ಆ ಕ್ಷಣಕ್ಕೆ ವ್ಯಕ್ತಪಡಿಸಬೇಕು ಎಂದು ಸಲಹೆ ನೀಡುತ್ತಿದ್ದರು. ಆದರೆ, ನಾವು ಆ ಪ್ರತಿಯೊಳಗಿನ ಪ್ರತಿ ವಾಕ್ಯ, ಪದಗಳನ್ನು ಉರುಹೊಡೆದು ನೆನಪಿನಲ್ಲಿರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೆವೇ ಹೊರತು ಅವರು ಹೇಳಿದ ಹಾಗೆ ಇಡೀ ಪ್ರತಿಯಲ್ಲಿನ ಮಹತ್ವದ ಅಂಶಗಳನ್ನು ಮನನ ಮಾಡಿಕೊಳ್ಳುತ್ತಿರಲಿಲ್ಲ. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹ, ನಾನೇ ಮೊದಲ ಬಹುಮಾನ ಗೆಲ್ಲಬೇಕು ಎಂಬ ಆಸೆಯೇನೋ ಇರುತ್ತಿತ್ತು. ಆ ಕ್ಷಣಕ್ಕೆ ಉರುಹೊಡೆದ ಪದ, ವಾಕ್ಯಗಳು ನೆನಪಾಗದಿದ್ದರೆ ಎಂಬ ಭಯವೂ ಇತ್ತು. ಇದರ ಮಧ್ಯೆಯೂ ಖುಷಿ ನೀಡುತ್ತಿದ್ದ ಸಂಗತಿ ಎಂದರೆ ಭಾಷಣವು ಕೊನೆಗೊಳ್ಳುವ ಸಂದರ್ಭದಲ್ಲಿ ನಾವು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದ ‘ಜೈ ಹಿಂದ್, ಜೈ ಕರ್ನಾಟಕ’ ಉದ್ಘೋಷ. ಕೊನೆಗೂ ಭಾಷಣ ಮುಗಿಯಿತು ಎಂಬ ನಿರಾಳ ಭಾವವೂ ಸೇರಿ ಆ ಧ್ವನಿಗೆ ಶಕ್ತಿ ಬರುತ್ತಿತ್ತು.

ಮೊದಲ ಪುಟದಲ್ಲಿ ಉಲ್ಲೇಖಿಸಲ್ಪಟ್ಟ ವಾಕ್ಯ, ಪದಗಳು ಸುಲಭವಾಗಿ ನೆನಪಾಗುತ್ತಿದ್ದವು. ಆದರ್ಶ ವ್ಯಕ್ತಿತ್ವಗಳ ಹೆಸರುಗಳನ್ನು ಕ್ರಮಾನುಗತವಾಗಿ ಪ್ರಸ್ತುತಪಡಿಸುತ್ತಿದ್ದೆವು. ಆದರೆ, ತದನಂತರದ ಪುಟದ ವಾಕ್ಯಗಳನ್ನು ಹೇಳುವಾಗ ದ್ವಂದ್ವವಾಗುತ್ತಿತ್ತು. ಭಾಷಣ ಪ್ರತಿಯ ವಿಚಾರಗಳನ್ನು ಸಂಪೂರ್ಣವಾಗಿ ಗೊತ್ತುಮಾಡಿಕೊಳ್ಳದೇ ಕೇವಲ ಉರುಹೊಡೆದ ಕಾರಣಕ್ಕೇ ಈ ಸಮಸ್ಯೆ ಎಂಬುದು ಆಮೇಲೆ ಮನದಟ್ಟಾಯಿತು. ಹಾಗೆ ಮನದಟ್ಟಾದರೂ ಉರುಹೊಡೆದು ಓದಿಕೊಳ್ಳುವ ರೂಢಿಗತ ಅಭ್ಯಾಸ ಬಹುದಿನಗಳ ಕಾಲ ಮುಂದುವರೆದಿತ್ತು. ತೊದಲು ಮಾತು ಪರಿಪೂರ್ಣತೆಯ ಹಂತ ತಲುಪುವವರೆಗಿನ ಅವಧಿ, ನಮ್ಮೊಳಗೆ ಭಾಷೆಯ ಆಕೃತಿಗಳು ಆವರಿಸಿಕೊಳ್ಳುವ ರೀತಿ, ಆ ಮೂಲಕ ನಮಗೆ ಹರಿದುಬರುವ ಮಾಹಿತಿ, ಜ್ಞಾನ – ಇವೆಲ್ಲವೂ ಪ್ರಾಥಮಿಕ ಶಾಲಾ ದಿನಗಳಲ್ಲಿ ಕ್ರಮೇಣ ಅರಿವಿಗೆಟುಕಿದ್ದವು. ನಮ್ಮ ಗಮನವೆಲ್ಲವೂ ಶಾಲೆ, ತರಗತಿ, ಟೀಚರ್ಸ್, ಸ್ನೇಹಿತರು, ಆಟ, ರಜೆಗಳು ಆರಂಭವಾಗುವ ತಿಂಗಳು, ಓದುವ ಅವಧಿಯ ನಂತರ ಆಟಕ್ಕೆ ಹೋಗುವ ಕುತೂಹಲದ ಕಡೆಗೇ ಕೇಂದ್ರೀಕೃತವಾಗಿರುತ್ತಿತ್ತು. ರಾಜಕೀಯವು ಬಾಲ್ಯದ ಪ್ರಜ್ಞೆಯ ಆವರಣದ ಆಚೆಗೇ ಇರುತ್ತಿತ್ತು.

ಈಗ ಹಾಗಲ್ಲ. ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಭಾಷೆ ಯಾವುದಾಗಿರಬೇಕು ಎನ್ನುವುದನ್ನು ವಿವೇಚನಾರಹಿತವಾಗಿ ನಿರ್ಧರಿಸಿಬಿಡುವ ವಿಚಿತ್ರ ರಾಜಕಾರಣವು ಮಕ್ಕಳ ಕಲಿಕೆಯ ಸ್ವಾತಂತ್ರ್ಯದ ಮೇಲೆ ದಾಳಿಗೈಯ್ಯುತ್ತಿದೆ. ತರಗತಿಯೊಳಗೆ ಪಠ್ಯವಾಗಿ ಕಲಿಯಲ್ಪಡುವ ಸಂಗತಿಗಳು ರಾಜಕೀಯ ಬಣ್ಣ ಪಡೆಯುತ್ತಿವೆ. ಮೇಷ್ಟ್ರು ಹಾಜರಾತಿ ದೃಢೀಕರಿಸಿಕೊಳ್ಳಲು ನಮ್ಮ ಹೆಸರು ಕೂಗಿದ ತಕ್ಷಣ ಎಸ್ ಸರ್, ಪ್ರೆಸೆಂಟ್ ಸರ್, ಇದೀನಿ ಸಾರ್ ಎಂದು ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನು ಅಧಿಕಾರ ರಾಜಕಾರಣ ಕಿತ್ತುಕೊಳ್ಳುವುದರ ಕಡೆಗೆ ಆಸಕ್ತಿ ತೋರುತ್ತಿದೆ. ಯಾರು ಹೇಳಲಿ ಬಿಡಲಿ, ಮೇರಾ ಭಾರತ್ ಮಹಾನ್ ಎಂಬ ಹೆಮ್ಮೆಯ ಭಾವವು ರಾಷ್ಟ್ರೀಯ ಉತ್ಸವಗಳ ಮೂಲಕ ಮಕ್ಕಳಲ್ಲಿ ಮೇಳೈಸಿರುತ್ತದೆ. ನಮ್ಮ ನೆಲ, ಜಲದ ಕುರಿತಾದ ಅಭಿಮಾನವನ್ನು ಅಷ್ಟು ಸುಲಭವಾಗಿ ನಮ್ಮಿಂದ ದೂರಮಾಡಲಾಗದು. ಎಸ್ ಸರ್, ಪ್ರೆಸೆಂಟ್ ಸರ್ ಎನ್ನುವ ಬದಲು ಜೈ ಹಿಂದ್ ಹೇಳಬೇಕು ಎನ್ನುವ ಆಡಳಿತಾತ್ಮಕ ನಿಯಮಾವಳಿ ರೂಪಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನ ರಾಷ್ಟ್ರದ ಕುರಿತಾದ ಅಭಿಮಾನ ಮತ್ತು ಹೆಮ್ಮೆಯ ಭಾವದ ಸಹಜತೆಯನ್ನು ಒಡೆಯುತ್ತದೆ.

ಶಿಕ್ಷಣವು ವಿದ್ಯಾರ್ಥಿಕೇಂದ್ರಿತವಾಗಿರಬೇಕೇ ಹೊರತು ಅಧಿಕಾರಕೇಂದ್ರಿತ ಅತಾರ್ಕಿಕ ನಿರ್ಧಾರಗಳ ತಿವಿತಕ್ಕೀಡಾಗಬಾರದು. ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ – ಹೀಗೆ ಒಂದೊಂದು ಹಂತದಲ್ಲೂ ವಿದ್ಯಾರ್ಥಿಗಳ ಕಲಿಕೆಯು ಹೊಸ ಆಯಾಮ ಪಡೆದುಕೊಳ್ಳುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ಒಳಿತು-ಕೆಡಕುಗಳ ವಿವೇಚನೆಯು ಹಂತಹಂತವಾಗಿಯೇ ಜೊತೆಯಾಗುತ್ತಾ ಹೋಗುತ್ತದೆ. ಶಿಕ್ಷಕರು, ಪಠ್ಯ ಮತ್ತು ಹಿರಿಯರ ಸಾಂದರ್ಭಿಕ ಮಾತುಗಳ ನೆರವಿನೊಂದಿಗೆ ಅವರು ವಿವೇಚನೆಯನ್ನು ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಇಂಥ ವಿವೇಚನೆಯನ್ನು ಗಟ್ಟಿಗೊಳಿಸುವ ಹಾಗೆಯೇ ಶಿಕ್ಷಣವು ಪುನರ್‍ಸ್ವರೂಪವನ್ನು ಪಡೆದುಕೊಳ್ಳುತ್ತಿರಬೇಕು. ಈ ಸಾಧ್ಯತೆಯು ಎಷ್ಟು ಬೇಗ ಅನುಷ್ಠಾನಗೊಳ್ಳುತ್ತದೋ ಅಷ್ಟೇ ತೀವ್ರಗತಿಯಲ್ಲಿ ಶಿಕ್ಷಣ ವಲಯದಲ್ಲಿನ ಸುಧಾರಣೆಯ ಪ್ರಕ್ರಿಯೆ ಚಾಲ್ತಿಗೆ ಬರುತ್ತದೆ. ಈ ವಿಷಯದಲ್ಲಿ ಅಧ್ಯಾಪಕವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರ ಪ್ರತಿಕ್ರಿಯೆಗಳನ್ನು ಆಧರಿಸಿಯೇ ಶಾಸಕಾಂಗ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ ಇಲಾಖೆಯನ್ನು ಪ್ರತಿನಿಧಿಸುವ ಉನ್ನತ ಹಂತದ ಅಧಿಕಾರಿಗಳು ಈ ವಿಷಯದಲ್ಲಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

ಇಂಥ ಇಚ್ಛಾಶಕ್ತಿಯು ಬೆರಳೆಣಿಕೆಯ ಅಧಿಕಾರಿಗಳಲ್ಲಿ ಮಾತ್ರ ಇದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಅಧಿಕಾರಿಗಳ ನಿರ್ಲಿಪ್ತ ದೃಷ್ಟಿಕೋನವು ಶಾಸಕಾಂಗವನ್ನು ಪ್ರತಿನಿಧಿಸುವ ರಾಜಕಾರಣಿಗಳ ಅತಾರ್ಕಿಕ ನಿರ್ಧಾರ ಮತ್ತು ಲಾಬಿಗಳಿಗೆ ಶಿಕ್ಷಣ ವಲಯವು ಮಣಿಯಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ದೂರಗಾಮಿ ಪರಿಣಾಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅಮೂಲ್ಯ ವಾರ್ಷಿಕ ಯೋಜನೆಗಳನ್ನು ರೂಪಿಸುವ ಬದಲು ಅವರು ಯಥಾಸ್ಥಿತಿಯನ್ನಷ್ಟೇ ಮುಂದುವರೆಸುತ್ತಿದ್ದಾರೆ. ಈ ಬಗೆಯ ತಮ್ಮ ಮಿತಿಯು ಚರ್ಚೆಗೊಳಗಾಗುತ್ತಿದೆ ಎಂಬ ಸುಳಿವು ಸಿಕ್ಕಾಕ್ಷಣವೇ ಜನಪ್ರಿಯ ಧಾಟಿಯ ವಿವಾದಗಳಿಗೆ ಸರಕು ಒದಗಿಸಬಲ್ಲ ವಿವೇಚನಾರಹಿತ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಲಾಭದ ಹಸಿವಿನಿಂದ ಬಳಲುವ ಸುದ್ದಿಮಾಧ್ಯಮಗಳಿಗೆ ಬಂಡವಾಳ ದುಡಿಯುವ ವಿವಾದದ ಸರಕನ್ನು ಒದಗಿಸುತ್ತಾರೆ. ಪರ ಮತ್ತು ವಿರೋಧಗಳ ಭಾವಾವೇಶದ ಗದ್ದಲದಲ್ಲಿ ಶಿಕ್ಷಣ ವಲಯದಲ್ಲಿ ಕಾಣಲೇಬೇಕಾದ ಸುಧಾರಣೆಯ ಹೆಜ್ಜೆಗಳ ವಿಸ್ತøತ ಚರ್ಚೆಯೇ ನಡೆಯುವುದಿಲ್ಲ. ಆ ಚರ್ಚೆಯಿಲ್ಲದೇ ಇಡೀ ವೃತ್ತಾಂತ ಕೊನೆಗೊಳ್ಳುತ್ತದೆ. ಜನರೂ ಆ ಕ್ಷಣದ ವಿವಾದಾತ್ಮಕ ಸಂಗತಿಯನ್ನು ಮರೆತುಬಿಡುತ್ತಾರೆ. ಚುನಾವಣೆ ಹತ್ತಿರವಾದಾಗ ಇಂಥದ್ದೇ ವಿವಾದೋದ್ಯಮದ ಲಾಭದ ಹವಣಿಗೆಯ ಭಾವೋನ್ಮಾದದ ವಿಷಯಗಳು ಮುನ್ನೆಲೆಗೆ ಬರುತ್ತವೆ.

ತರಗತಿಯಲ್ಲಿರುವ ಮಕ್ಕಳು ಮೇಷ್ಟ್ರು ಹೆಸರು ಹೇಳಿದಾಗ ಎಸ್ ಸರ್ ಎನ್ನುವ ಬದಲು ಜೈಹಿಂದ್ ಎಂದು ಹೇಳಬಹುದು. ಅದು ಕ್ರಿಯೆಯೊಂದಕ್ಕೆ ದಕ್ಕುವ ನಿರ್ದಿಷ್ಟ ಪ್ರತಿಕ್ರಿಯೆಯಾಗುತ್ತದಷ್ಟೇ. ನನ್ನ ಹೆಸರು ಹೇಳಿದ ತಕ್ಷಣ ನಾನು ಕ್ಲಾಸ್‍ನಲ್ಲಿದ್ದೇನೆ ಎಂಬುದನ್ನು ಸ್ಪಷ್ಟಪಡಿಸುವುದಕ್ಕೆ ಎಸ್ ಸರ್ ಅಥವಾ ಪ್ರೆಸೆಂಟ್ ಸರ್ ಎನ್ನುವ ಪ್ರತಿಕ್ರಿಯೆ ಬಳಕೆಯಾಗುತ್ತದೆ. ಗುರುಗಳು ಹೆಸರು ಕೂಗುವುದು, ವಿದ್ಯಾರ್ಥಿಗಳು ಓಗೊಡುವುದು – ಇವೆರಡೂ ತರಗತಿಯಲ್ಲಿ ನಡೆಯುವ ಅತ್ಯಂತ ಸಹಜ ಆಡಳಿತಾತ್ಮಕ ಕ್ರಿಯೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವುಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಕ್ರಿಯೆಯನ್ನಾಗಿಯೂ ಇದನ್ನು ನೋಡಬಹುದು. ರೆಗ್ಯುಲರ್ ಆಗಿ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಎಸ್ ಸರ್ ಎಂದು ಹೇಳದಿದ್ದರೆ ಶಿಕ್ಷಕರಿಗೆ ಕಸಿವಿಸಿಯಾಗುತ್ತದೆ. ಯಾಕೆ ಬಂದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ತರಗತಿಗೆ ಚಕ್ಕರ್ ಹೊಡೆಯುವುದನ್ನೇ ಪ್ರವೃತ್ತಿಯಾಗಿಸಿಕೊಂಡವರ ಕುರಿತೂ ಕಾಳಜಿ ಇರುತ್ತದೆ. ಅವರು ಎಷ್ಟೋ ದಿನಗಳ ನಂತರ ಹಾಜರಾಗಿ ಎಸ್ ಸರ್ ಎಂದಾಗ ಪ್ರೀತಿಯಿಂದ ಗದರಿ ಇನ್ಮೇಲಿಂದ ರೆಗ್ಯುಲರ್ ಆಗಿ ಕ್ಲಾಸ್ ಅಟೆಂಡ್ ಆಗಬೇಕು ಎಂದು ಹೇಳುತ್ತಾರೆ. ಇಂಥದ್ದೊಂದು ಶೈಕ್ಷಣಿಕ ಬಾಂಧವ್ಯದ ಆಯಾಮವಿರುವ ಈ ಕ್ರಿಯೆಯನ್ನು ಆಡಳಿತಾತ್ಮಕ ನಿಯಮ ಮತ್ತು ದೇಶಪ್ರೇಮದ ಪರಿಧಿಯ ಕಡ್ಡಾಯ ಆವರಣದೊಳಗೆ ತರುವುದು ಮಕ್ಕಳ ವಿವೇಚನೆಯ ಯಾನದ ಸಕಾರಾತ್ಮಕತೆಯ ದೃಷ್ಟಿಯಿಂದ ಅಪಾಯಕಾರಿ ಎಂದೆನ್ನಿಸುತ್ತದೆ.

ಹಿಂದೆಲ್ಲಾ ಪೆನ್ನು, ನೋಟ್ ಬುಕ್‍ಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದ ‘ಮೇರಾ ಭಾರತ್ ಮಹಾನ್’ ಎಂಬ ಒಕ್ಕಣೆಯು ನಮ್ಮೊಳಗೆ ಹೆಮ್ಮೆ ಮೂಡಿಸುತ್ತಿತ್ತು. ನಾವು ಕ್ಲಾಸ್‍ನಲ್ಲಿ ಕೇಳಿಸಿಕೊಳ್ಳುತ್ತಿದ್ದ ಉದಾತ್ತ ಯೋಚನೆಗಳು, ಆದರ್ಶ ವ್ಯಕ್ತಿತ್ವಗಳ ಕೊಡುಗೆಗಳ ಬಗ್ಗೆ ತಿಳಿದುಕೊಂಡ ಸಂದರ್ಭದಲ್ಲಿ ಈ ಒಕ್ಕಣೆ ಕಾಣಿಸಿಕೊಂಡಾಗ ನಮ್ಮೊಳಗಿನ ಹೆಮ್ಮೆಯ ಭಾವ ಇಮ್ಮಡಿಗೊಳ್ಳುತ್ತಿತ್ತು. ಇದನ್ನು ನೋಡಲೇಬೇಕೆಂಬ, ಹೆಮ್ಮೆಯ ಭಾವ ಮೂಡಿಸಿಕೊಳ್ಳಲೇಬೇಕು ಎನ್ನುವ ಕಡ್ಡಾಯ ನಿಯಮವಿರಲಿಲ್ಲ. ಆದಾಗ್ಯೂ ಇದು ನಮ್ಮೊಳಗೆ ಆಪ್ತವಾಗಿ ಬೆರೆತುಹೋಗಿತ್ತು. ಉಳಿದೆಲ್ಲ ದೇಶಗಳಿಗಿಂತ ನಮ್ಮ ದೇಶ ಮಹಾನ್ ಎನ್ನುವ ಭಾವ ಅತ್ಯಂತ ಸಂಯಮಪೂರ್ಣವಾಗಿ ನಮ್ಮ ಪ್ರಜ್ಞೆಯೊಳಗೆ ಮೇಳೈಸಿತ್ತು. ಹೆಮ್ಮೆ ಪಟ್ಟುಕೊಳ್ಳುವಂಥ ದೇಶದಲ್ಲಿ ಸಮಸ್ಯೆಗಳೂ ಇವೆ, ಅವುಗಳ ನಿವಾರಣೆಯ ಕಡೆಗೆ ಕಾಳಜಿಪೂರ್ವಕ ಹೆಜ್ಜೆಗಳನ್ನಿಡುತ್ತಲೇ ಇಡೀ ದೇಶವನ್ನು ಮಹಾನ್ ಅಗಿಸುವ ಉದಾತ್ತ ಪ್ರಯತ್ನಗಳ ಕಡೆಗೆ ಗಮನವಿರಬೇಕು ಎಂಬ ಎಚ್ಚರವನ್ನೂ ರೂಢಿಸಿತ್ತು. ಅಧಿಕಾರ ರಾಜಕಾರಣದ ಮೊಗಸಾಲೆಯಿಂದ ಹೊರಟ ನಿರ್ದಿಷ್ಟ ನಿಲುವು ಆಡಳಿತಾತ್ಮಕ ತೀರ್ಮಾನವಾಗಿ ತರಗತಿಗಳ ಒಳಗೆ ಪ್ರವೇಶಿಸಿ ಮಕ್ಕಳಿಂದ ದೇಶದ ಬಗ್ಗೆ ಜೈಕಾರ ಮೊಳಗಬೇಕು ಎಂಬ ಕಾರ್ಯಸೂಚಿ ಅನುಷ್ಠಾನಗೊಂಡರೆ ಅದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕುಚಿತ ಗೋಡೆಗಳನ್ನು ಸೃಷ್ಟಿಸಬಹುದು. ಅಂಥ ಗೋಡೆಗಳು ಸೃಷ್ಟಿಯಾದರೆ ತರಗತಿಯ ವಿವೇಚನಾತ್ಮಕ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ.

ಜೈಹಿಂದ್ ಎಂಬ ಪ್ರತಿಕ್ರಿಯೆ ಕಡ್ಡಾಯವಾಗಿ ಅನುಷ್ಠಾನಗೊಂಡರೆ ಅದರಲ್ಲಿ ತಪ್ಪು ಹುಡುಕುವುದೇಕೆ? ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ನಾಡಗೀತೆ ಕಡ್ಡಾಯವಾಗಿ ಶಾಲಾ-ಕಾಲೇಜುಗಳ ಆರಂಭಕ್ಕಿಂತ ಮುನ್ನ ಮೊಳಗುತ್ತಿರುವಾಗ ಇದಕ್ಕೆ ಆಕ್ಷೇಪವೇಕೆ? ಎಂಬ ಪ್ರಶ್ನೆಗಳು ಎದುರಾಗಬಹುದು. ಕುವೆಂಪು ವಿರಚಿತ ಈ ನಾಡಗೀತೆಯು ಕಡ್ಡಾಯ ಪಾಲನೆಯ ನಿಯಮದೊಂದಿಗೆ ಮೊಳಗುವುದಕ್ಕೂ ಜೈಹಿಂದ್ ಎಂಬ ಪ್ರತಿಕ್ರಿಯೆಯು ತರಗತಿಯ ಒಳಗೆ ವ್ಯಕ್ತವಾಗುವುದಕ್ಕೂ ವ್ಯತ್ಯಾಸವಿದೆ. ನಾಡಗೀತೆಯ ಧ್ವನಿಸುರುಳಿ ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಳಗುವಾಗ ಅದರೊಳಗಿನ ವೈವಿಧ್ಯಮಯ ಸದಾಶಯಗಳ ಸಾಲುಗಳು ವಿದ್ಯಾರ್ಥಿಗಳ ವಿವೇಚನೆಯನ್ನು ವಿಸ್ತರಿಸುತ್ತಿರುತ್ತವೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಈ ದೇಶದ ವೈಶಿಷ್ಟ್ಯತೆಯನ್ನು ಮನದಟ್ಟು ಮಾಡಿಕೊಡುತ್ತವೆ. ಅಷ್ಟೇ ಅಲ್ಲ, ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಈ ನೆಲವನ್ನು ನೋಡುವ ಸೌಜನ್ಯವನ್ನು ನಮ್ಮದಾಗಿಸಿಕೊಳ್ಳುವ ಒತ್ತಾಸೆ ಮೂಡಿಸುತ್ತವೆ. ಜೈ ಹಿಂದ್ ಎನ್ನುವ ಪ್ರತಿಕ್ರಿಯೆಯು ಕ್ಷಣಾರ್ಧದಲ್ಲಿ ಭಾರತದ ಪರವಾದ ಜಯಕಾರ ಹೇಳುವ ಮಹತ್ವದ ಸಂದರ್ಭವನ್ನು ಸೃಷ್ಟಿಸಬಹುದು. ಆದರೆ, ಈ ಜಯಕಾರದ ಸಾಂದಭಿರ್ಕತೆಯು ನಕಾರಾತ್ಮಕ ದೃಷ್ಟಿಕೋನಗಳಿಗೆ ಪ್ರಚೋದನೆಯನ್ನು ನೀಡಿ ಭಾರತವೇ ಗ್ರೇಟ್ ಎಂಬ ಶ್ರೇಷ್ಠತೆಯ ವ್ಯಸನದ ಸಂಕುಚಿತತೆಯನ್ನು ಬಿತ್ತಿಬಿಡಬಹುದು. ಉಳಿದೆಲ್ಲ ದೇಶಗಳ ವಿಶೇಷತೆಯನ್ನು ಅಲ್ಲಗಳೆಯುವ ವಿತಂಡವಾದಿ ಸ್ವಭಾವವನ್ನು ನೆಲೆಗೊಳಿಸಿಬಿಡಬಹುದು. ತರಗತಿ ಇಂಥ ಸಂಕುಚಿತತೆಯ ಮೂಲನೆಲೆಯಾಗಬಾರದು ಎಂಬ ವಿವೇಕ ರಾಜಕೀಯ ಪಕ್ಷಗಳು ಮತ್ತು ಅಧಿಕಾರ ಕೇಂದ್ರಗಳನ್ನು ಪ್ರತಿನಿಧಿಸುವವರೊಳಗಿರಬೇಕು. ಈ ವಿವೇಕ ಇಲ್ಲದಿರುವುದರಿಂದಲೇ ಅಧಿಕಾರರೂಢ ಪಕ್ಷಗಳು ಶಿಕ್ಷಣ ವಲಯವನ್ನು ತಮ್ಮ ರಾಜಕೀಯ ಲಾಭದ ಕಾರ್ಯತಂತ್ರದ ಭಾಗವಾಗಿ ನೋಡುತ್ತವೆ. ವಿರೋಧ ಪಕ್ಷಗಳೂ ಅದನ್ನು ರಾಜಕೀಯ ವಿವಾದ ಉಂಟುಮಾಡುವುದಕ್ಕಷ್ಟೇ ಬಳಸಿಕೊಂಡುಬಿಡುತ್ತವೆ. ತಾತ್ವಿಕ ಚರ್ಚೆ ಹುಟ್ಟುಹಾಕಿ ಗಮನಾರ್ಹ ಶೈಕ್ಷಣಿಕ ಬದಲಾವಣೆಯ ಚಿಂತನೆಯನ್ನು ಕೊಡುಗೆಯನ್ನಾಗಿ ನೀಡುವುದಿಲ್ಲ.

ಚುನಾವಣೆ ಸನ್ನಿಹಿತವಾಗುತ್ತಿರುವಾಗ ಜನಪ್ರಿಯವೆನ್ನಿಸುವ ಭಾವುಕ ಸಂಗತಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ತಳುಕುಹಾಕಿ ತೀರ್ಮಾನಗಳನ್ನು ಘೋಷಿಸುವ ಅವಸರದ ಪ್ರವೃತ್ತಿಯ ಬದಲು ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಹಂತದವರೆಗಿನ ಶೈಕ್ಷಣಿಕ ಕಲಿಕೆ ಮತ್ತು ತರಗತಿಗಳ ಸ್ವರೂಪವನ್ನು ಬದಲಾಯಿಸುವುದರ ಬಗ್ಗೆ ರಚನಾತ್ಮಕ ಚಿಂತನೆ ಹೊಳೆಸಿಕೊಳ್ಳಬೇಕಿದೆ. ಶಾಸಕಾಂಗ ಮತ್ತು ಕಾರ್ಯಾಂಗ ದೂರದರ್ಶಿತ್ವದ ಶ್ರದ್ಧೆಯೊಂದಿಗೆ ಇಂಥ ಕಾರ್ಯವನ್ನು ನಿರ್ವಹಿಸಬೇಕಿದೆ. ಹಳ್ಳಿಗಳಲ್ಲಿ ಶಾಲೆಗಳಿಲ್ಲ. ಶಾಲೆಗಳಿದ್ದರೂ ಶಿಕ್ಷಕರಿಲ್ಲ. ಶಿಕ್ಷಕರಿದ್ದರೂ ಅವರಿಗೆ ಉನ್ನತಾಧಿಕಾರಿ ವಲಯದಿಂದ ಹರಿದುಬರುವ ಆದೇಶಗಳ ಒತ್ತಡದ ಉಸಿರುಗಟ್ಟುವ ಪರಿಸ್ಥಿತಿ. ಮೂಲಭೂತ ಸೌಕರ್ಯಗಳಿಲ್ಲದ ಸ್ಥಿತಿಯಲ್ಲಿ ತರಗತಿಯನ್ನು ನಿರ್ವಹಿಸುವ ಅನಿವಾರ್ಯತೆ. ಹಳ್ಳಿ ರಾಜಕಾರಣದ ವಿಚಿತ್ರ ಸಿಕ್ಕುಗಳಲ್ಲಿ ಬಂಧಿಯಾಗುತ್ತಲೇ, ಮಾನಸಿಕವಾಗಿ ನರಳುತ್ತಲೇ ಪಾಠ ಮಾಡಬೇಕಾದ ಸಂದಿಗ್ಧತೆ. ಹೆಚ್ಚು ಸಂಖ್ಯೆಯಲ್ಲಿ ಮಕ್ಕಳಿರುವ ತರಗತಿಯನ್ನು ನಿಭಾಯಿಸುವ ಸವಾಲು. ಆಡಳಿತಾತ್ಮಕ ಕಿರಿಕಿರಿಗಳ ಭಾರದಲ್ಲಿ ಶಿಕ್ಷಕರ ಬೌದ್ಧಿಕ ಶಕ್ತಿ ನಲುಗುತ್ತಿದೆ. ಖಾಸಗಿ ಶಾಲೆ-ಕಾಲೇಜುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸರ್ಕಾರಿ ಶಾಲೆಗಳಲ್ಲಿ ಕಲಿಯಲು ಬರುವ ಮಕ್ಕಳ ಶಿಕ್ಷಣದ ಸಾಧ್ಯತೆಗಳಿಗೆ ವ್ಯಾಪಕ ಆದ್ಯತೆ ಸಿಗುತ್ತಲೇ ಇಲ್ಲ. ಮೌಲಿಕ ಕಲಿಕೆ, ವೃತ್ತಿಪರ ಅವಕಾಶಗಳು ಮತ್ತು ಅಭಿವೃದ್ಧಿ – ಈ ಮೂರೂ ಅಂಶಗಳನ್ನು ಆಧರಿಸಿದ ಸಮಗ್ರ ನೀತಿಯನ್ನು ರೂಪಿಸಿ ವ್ಯವಸ್ಥಿತ ಅನುಷ್ಠಾನ ಸಾಧ್ಯವಾಗಿಸಬೇಕು. ಹಾಗಾದಾಗ ಮಾತ್ರ ಶಿಕ್ಷಣ, ಶಿಕ್ಷಕರು, ತರಗತಿ ಮತ್ತು ವಿದ್ಯಾರ್ಥಿಗಳು ಚುನಾವಣಾ ಅಖಾಡದ ಕಾರ್ಯತಂತ್ರಗಳಿಗೆ ಬಲಿಯಾಗುವುದಿಲ್ಲ. ಪ್ರತಿ ಚುನಾವಣೆಯೂ ಶಿಕ್ಷಣ ರಂಗದ ಸಬಲೀಕರಣದ ಚಿಂತನೆಗಳಿಗೆ ವೇದಿಕೆಯನ್ನು ಒದಗಿಸಬೇಕು. ಚಿಂತನೆಯ ಮಾದರಿ ಲಭ್ಯವಾಗುತ್ತಿರಬೇಕು. ಅದಕ್ಕನುಗುಣವಾಗಿ ತರಗತಿಗಳು ಪ್ರಬುದ್ಧ ನೆಲೆಗಳಾಗಿ ಪರಿವರ್ತಿತವಾಗಬೇಕು. ಇಡೀ ಶಿಕ್ಷಣ ವಲಯವು ದೇಶದ ಉಜ್ವಲ ಭವಿಷ್ಯಕ್ಕೆ ನೆರವಾಗುವ ಅಮೂಲ್ಯ ಸಂಪನ್ಮೂಲವಾಗಬೇಕು.

-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.

ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.

ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.

ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.

ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.

ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು....

ದಿನದ ಸುದ್ದಿ1 day ago

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ...

ದಿನದ ಸುದ್ದಿ3 days ago

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ...

ದಿನದ ಸುದ್ದಿ4 days ago

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು...

ದಿನದ ಸುದ್ದಿ5 days ago

ಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು

ಸುದ್ದಿದಿನ,ದಾವಣಗೆರೆ:ನಗರದ ಜಿಎಂ ವಿಶ್ವವಿದ್ಯಾನಿಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ 1.12 2025 ರಂದು ರಂಗೋತ್ಸವ -2025 ರ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆಯನ್ನು ಏರ್ಪಡಿಸಲಾಗಿತ್ತು. ಜಿಎಂ ವಿಶ್ವವಿದ್ಯಾಲಯದ ಎಲ್ಲಾ...

ದಿನದ ಸುದ್ದಿ5 days ago

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು. ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ...

ದಿನದ ಸುದ್ದಿ5 days ago

ದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ

ಸುದ್ದಿದಿನ,ದಾವಣಗೆರೆ:ಕಾರ್ಮಿಕರಿಗೆ ತ್ವರಿತವಾಗಿ, ಕೆಲಸದ ಸ್ಥಳಗಳಲ್ಲೇ ವೈದ್ಯಕೀಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ‘ಸಂಚಾರಿ ಆರೋಗ್ಯ ಘಟಕ’ (ಮೊಬೈಲ್ ಮೆಡಿಕಲ್ ಯುನಿಟ್) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಕಾರ್ಮಿಕರು ಇದರ...

ದಿನದ ಸುದ್ದಿ5 days ago

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಅಭಾ ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ ಮೀನುಮಾರಾಟಗಾರರಿಂದ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ1 week ago

ಎಂನರೇಗಾ ಯೋಜನೆ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಹರಿಹರ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಇಚ್ಛಿಸುವ ರೈತರಿಂದ...

ದಿನದ ಸುದ್ದಿ2 weeks ago

ಅಡ್ಡ ಬಂದ ನಾಯಿ ಉಳಿಸಲು ಹೋಗಿ ಕಾರು ಪಲ್ಟಿ : ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ

ಸುದ್ದಿದಿನಡೆಸ್ಕ್:ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಂಬಂಧಿಕರ ಮದುವೆಗೆಂದು ವಿಜಯಪುರಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ...

Trending