ದಿನದ ಸುದ್ದಿ

ಜಮ್ಮು-ಕಾಶ್ಮೀರ ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆ ಅಂತಿಮ; ಗೆಜೆಟ್‌ನಲ್ಲಿ ಆದೇಶ ಪ್ರಕಟ

Published

on

ಸುದ್ದಿದಿನ ಡೆಸ್ಕ್ : ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕ್ಷೇತ್ರ ಪುನರ್ ವಿಂಗಡಣೆ ಆದೇಶವನ್ನು ಇಂದು ಅಂತಿಮಗೊಳಿಸಲಾಗಿದೆ.

ಅಲ್ಲಿನ 90 ವಿಧಾನಸಭಾ ಕ್ಷೇತ್ರಗಳ ಪೈಕಿ ಜಮ್ಮು ಪ್ರಾಂತ್ಯಕ್ಕೆ 43 ಹಾಗೂ ಕಾಶ್ಮೀರಕ್ಕೆ 47 ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ. 9ವಿಧಾನಸಭಾ ಕ್ಷೇತ್ರಗಳನ್ನು ಪರಿಶಿಷ್ಟ ಬುಡಕಟ್ಟು – ಎಸ್‌ಟಿ ವರ್ಗಕ್ಕೆ ಮೀಸಲಾಗಿಟ್ಟಿದ್ದು, ಈ ಪೈಕಿ ಆರು ಕ್ಷೇತ್ರಗಳು ಜಮ್ಮು ಪ್ರಾಂತ್ಯದಲ್ಲಿ ಹಾಗೂ ಮೂರು ಕ್ಷೇತ್ರಗಳು ಕಾಶ್ಮೀರದಲ್ಲಿ ಇರಲಿವೆ.

ಜಮ್ಮು-ಕಾಶ್ಮೀರದಲ್ಲಿ ಐದು ಸಂಸದೀಯ ಕ್ಷೇತ್ರಗಳನ್ನು ನಿಗದಿ ಮಾಡಲಾಗಿದ್ದು, 18ವಿಧಾನಸಭಾ ಕ್ಷೇತ್ರಗಳಿಗೆ ಒಂದು ಸಂಸದೀಯ ಕ್ಷೇತ್ರ ನಿಗದಿಪಡಿಸಲಾಗಿದೆ. ಸ್ಥಳೀಯ ಪ್ರಾತಿನಿಧ್ಯ ಬೇಡಿಕೆ ಅನುಸಾರ ಕೆಲವು ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಬದಲಾಯಿಸಲಾಗಿದೆ.

ಪುನರ್ ವಿಂಗಡಣಾ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ರಂಜನ್ ಪ್ರಕಾಶ್ ದೇಸಾಯಿ, ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ಜಮ್ಮು-ಕಾಶ್ಮೀರ ಚುನಾವಣಾ ಆಯುಕ್ತ ಕೆ.ಕೆ. ಶರ್ಮಾ ಅವರು ದೆಹಲಿಯಲ್ಲಿ ಗುರುವಾರ ಸಭೆ ಸೇರಿ, ಪುನರ್ ವಿಂಗಡಣಾ ಆದೇಶ ಅಂತಿಮಗೊಳಿಸಿದ್ದು, ಗೆಜೆಟ್ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಪುನರ್ ವಿಂಗಡಣಾ ಆಯೋಗದ ಸಹ ಸದಸ್ಯರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ನಾಗರಿಕ ಸಮಾಜದ ಗುಂಪುಗಳು, ನಾಗರಿಕರು ಮುಂತಾದವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಪುನರ್ ವಿಂಗಡಣೆ ಮಾಡಲಾಗಿದೆ. ಈ ಮುನ್ನ 1981ರ ಜನಗಣತಿ ಆಧರಿಸಿ1995 ರಲ್ಲಿ ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version