ದಿನದ ಸುದ್ದಿ

ಜಮ್ಮು-ಕಾಶ್ಮೀರದ ತ್ವರಿತ ಅಭಿವೃದ್ಧಿಗಾಗಿ 20ಸಾವಿರ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಉಪಕ್ರಮಗಳಿಗೆ ಪ್ರಧಾನಮಂತ್ರಿ ಶಿಲಾನ್ಯಾಸ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಜಮ್ಮು-ಕಾಶ್ಮೀರದಲ್ಲಿ ತ್ವರಿತ ಗತಿಯ ಅಭಿವೃದ್ಧಿಗಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಉಪಕ್ರಮಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ನೆರವೇರಿಸಿದರು.

ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯಿತ್‌ನಲ್ಲಿ ದೇಶದ ಎಲ್ಲ ಗ್ರಾಮ ಸಭೆಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಅಭಿವೃದ್ಧಿ ಉಪಕ್ರಮಗಳು ಜಮ್ಮು-ಕಾಶ್ಮೀರದ ಅಭಿವೃದ್ಧಿಯನ್ನು ಹೆಚ್ಚಿಸಲಿವೆ ಎಂದರು. ಕಾಶ್ಮೀರದಲ್ಲಿ ಇಂದು ಪಂಚಾಯಿತಿರಾಜ್ ದಿನ ಆಚರಿಸುತ್ತಿರುವುದು ಬದಲಾವಣೆಯ ಸಂಕೇತ ಎಂದು ಬಣ್ಣಿಸಿದರು.

ಪ್ರಜಾಪ್ರಭುತ್ವ ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರು ಮಟ್ಟಕ್ಕೆ ತಲುಪಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಇಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಮೀಸಲಾತಿಯ ಪ್ರಯೋಜನದಿಂದ ವಂಚಿತವಾದ ಜನರು ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮೀಸಲಾತಿಯ ಪ್ರಯೋಜನ ಹೊಂದುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ದೆಹಲಿ-ಅಮೃತ್‌ಸರ್-ಕತ್ರಾ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು. ಸಾಂಬಾದ ಪಲ್ಲಿ ಗ್ರಾಮದಲ್ಲಿ 108 ಜನೌಷಧಿ ಕೇಂದ್ರಗಳೊಂದಿಗೆ 500 ಕಿಲೋ ವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಲೋಕಾರ್ಪಣೆಗೊಳಿಸಿದರು.

ಸುಮಾರು ಮೂರು ಸಾವಿರದ 100ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬನಿಹಾಲ್-ಕಾಜಿಗುಂಡ್ ಸುರಂಗಮಾರ್ಗವನ್ನು ಉದ್ಘಾಟಿಸಿದರು.8.45 ಕಿಲೋ ಮೀಟರ್ ಉದ್ದದ ಈ ಸುರಂಗ ಮಾರ್ಗದಿಂದಾಗಿ ಬನಿಹಾಲ್-ಕಾಜಿಗುಂಡ್ ನಡುವಣ 16ಕಿಲೋ ಮೀಟರ್ ಅಂತರ ತಗ್ಗಲಿದೆ. ಇದರಿಂದ ಎರಡು ಸ್ಥಳಗಳ ನಡುವಣ ಪ್ರಯಾಣದ ಅಂತರ ಒಂದೂವರೆ ಗಂಟೆ ತಗ್ಗಲಿದೆ.
ಕಿಸ್ತ್‌ವಾರ್ ಜಿಲ್ಲೆಯ ಚೀನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎರಡು ಜಲವಿದ್ಯುತ್ ಯೋಜನೆಗಳಿಗೂ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಜನತೆಯನ್ನು ಅಭಿನಂದಿಸಿದ ಪ್ರಧಾನಿ, ಪಲ್ಲಿ ಪಂಚಾಯಿತಿ ದೇಶದ ಮೊಟ್ಟ ಮೊದಲ ಇಂಗಾಲ-ರಹಿತ ಪಂಚಾಯಿತಿಯಾಗುವ ಮಾರ್ಗದಲ್ಲಿದೆ ನುಡಿದರು.

ಸರ್ವರ ಪ್ರಯತ್ನದಿಂದ ಏನೆಲ್ಲಾ ಮಾಡಬಹುದು ಎಂಬುದನ್ನು ಪಲ್ಲಿ ಪಂಚಾಯಿತಿ ದೇಶಕ್ಕೆ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಪ್ರತಿಯೊಂದು ಜಿಲ್ಲೆಯ 75ಕೆರೆಗಳ ಪುನಶ್ಚೇತನ ಹಾಗೂ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಅಮೃತ ಸರೋವರ ಉಪಕ್ರಮಕ್ಕೆ ಪ್ರಧಾನಿ ಈ ಸಂದರ್ಭದಲ್ಲಿ ಚಾಲನೆ ನೀಡಿದರು.

ವಿಜೇತ ಪಂಚಾಯಿತಿಗಳಿಗೆ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಯ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು. ’ಏಕ ಭಾರತ್-ಶ್ರೇಷ್ಠ ಭಾರತ್’ ಎಂದು ನಾವು ಘೋಷಿಸಿದಾಗ ನಮ್ಮ ಲಕ್ಷ್ಯ ಸಂಪರ್ಕ ಹಾಗೂ ದೂರವನ್ನು ತಗ್ಗಿಸುವುದಾಗಿದೆ. ಜಮ್ಮು-ಕಾಶ್ಮೀರಕ್ಕೆ ಸರ್ವಋತು ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಕನ್ಯಾಕುಮಾರಿಯಿಂದ ವೈಷ್ಣೋದೇವಿಯನ್ನು ಒಂದೇ ಹೆದ್ದಾರಿಯ ಮೂಲಕ ಸಂಪರ್ಕಿಸುವ ದಿನ ದೂರವಿಲ್ಲ ಎಂದು ಹೇಳಿದರು.

ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯಗಳ ನಿರ್ಮಾಣ, ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಪ್ರಯೋಜನಗಳನ್ನು ಜಮ್ಮು-ಕಾಶ್ಮೀರ ಪಡೆದುಕೊಳ್ಳುತ್ತಿದೆ ಎಂದರು. ರಾಷ್ಟ್ರೀಯ ಪಂಚಾಯಿತಿರಾಜ್ ದಿನದ ಅಂಗವಾಗಿ ಪಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ತಂತ್ರಜ್ಞಾನ ವಸ್ತುಪ್ರದರ್ಶನಕ್ಕೂ ಪ್ರಧಾನಿ ಭೇಟಿ ನೀಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version