ಬಹಿರಂಗ

ಜನಗಣಮನ ಸಂಪನ್ಮೂಲ

Published

on

ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕ
  • ಡಾ.ಎನ್.ಕೆ.ಪದ್ಮನಾಭ

ಸಲದ ವಿಶ್ವ ಜನಸಂಖ್ಯಾ ದಿನಾಚರಣೆ (ಜುಲೈ 11) ಹೊಸದೊಂದು ಆತ್ಮಾವಲೋಕನದ ಹಾದಿಯನ್ನು ಕಂಡುಕೊಳ್ಳುವ ಮಹತ್ವದ ಸಂದರ್ಭವಾಗಿ ಪರಿಗಣಿತವಾಗಬೇಕಿದೆ. ವಿಶ್ವಸಂಸ್ಥೆಯ ಮಹತ್ವಾಕಾಂಕ್ಷಿ ಅಭಿವೃದ್ಧಿ ಯೋಜನೆಯ ಭಾಗವಾಗಿ 1989ರಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪರಿಕಲ್ಪನೆ ಚಾಲ್ತಿಗೆ ಬಂತು. ಇದಕ್ಕೂ ಮುಂಚೆ ವಿಶ್ವದ ಜನಸಂಖ್ಯೆ ಐದು ಬಿಲಿಯನ್ ತಲುಪಿದಾಗ ಅದರ ದ್ಯೋತಕವಾಗಿ ‘ಫೈವ್ ಬಿಲಿಯನ್ ಡೇ’ ಆಚರಿಸಲ್ಪಟ್ಟಿತು. ಇದು ವಿಶ್ವ ಜನಸಂಖ್ಯಾ ದಿನಾಚರಣೆಯ ಅಧಿಕೃತ ಘೋಷಣೆಗೆ ಪ್ರೇರಣೆಯಾಯಿತು.

ಈ ದಿನದ ಆಚರಣೆಯು ಯೋಚಿಸುವ ಸಾಮರ್ಥ್ಯವಿರುವ ಮನುಷ್ಯರೆನ್ನಿಸಿಕೊಂಡ ಎಲ್ಲರೊಳಗೆ ಜಾಗೃತಿಯ ಬೆಳಕು ಹೊಮ್ಮಿಸಬೇಕು. ಜನರ ಸಂಖ್ಯೆ ನಿಯಂತ್ರಣಕ್ಕಷ್ಟೇ ಈ ಎಚ್ಚರದ ಪ್ರಜ್ಞೆ ಸೀಮಿತವಾಗಬಾರದು. ಸಾವನ್ನು ಮುಂದೂಡುವ ವೈಜ್ಞಾನಿಕ ಸಾಧ್ಯತೆಯನ್ನು ಕಂಡುಹಿಡಿಯುವ ಹುಮ್ಮಸ್ಸಿನ ಪ್ರಾಬಲ್ಯದಲ್ಲಿ ಪ್ರಕೃತಿಯನ್ನು ಸೋಲಿಸುವ ಹಠ ಜೊತೆಯಾಗಕೂಡದು ಎಂಬ ಸೌಜನ್ಯದ ತಿಳುವಳಿಕೆ ನೆಲೆಗೊಳಿಸಬೇಕು. ವಿಜ್ಞಾನ ತಂತ್ರಜ್ಞಾನದ ಸಂಶೋಧನಾತ್ಮಕ ಕೌಶಲ್ಯ ಪ್ರಕೃತಿಯನ್ನು ಗೆಲ್ಲಿಸಬೇಕು ಎಂಬ ಸ್ಪಷ್ಟ ನಿಲುವನ್ನು ಜನಜನಿತವಾಗಿಸಿ ಅದಕ್ಕನುಗುಣವಾದ ಸುಸ್ಥಿರ ಬದುಕಿನ ಸೃಷ್ಟಿಗೆ ಒತ್ತಾಸೆಯಾಗಬೇಕು.

ಜೀವಿಸಲು ಬೇಕಾಗುವ ಅನಿವಾರ್ಯ ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳುವ ಮತ್ತು ಅನಗತ್ಯವಾದ ದುರಾಸೆಗಳನ್ನು ತ್ಯಜಿಸುವ ದೃಢಸಂಕಲ್ಪದ ಮುನ್ನುಡಿಯಾಗಿ ವಿಶ್ವ ಜನಸಂಖ್ಯಾ ದಿನಾಚರಣೆ ಕಂಗೊಳಿಸಬೇಕು.ಇದು ಬಹುಕಷ್ಟಕರ ಹಾದಿ ಎಂದೆನ್ನಿಸಬಹುದು. ಆದರೆ, ಈ ಹಾದಿಯನ್ನು ಮನುಷ್ಯ ಸಂಕುಲ ಅನುಸರಿಸದಿದ್ದರೆ ದುರ್ಗಮವಾದ ಭೀಕರ ಪರಿಣಾಮಗಳು ವಿರಾಟ್ ರೂಪಗಳಲ್ಲಿ ಎದುರಾಗುವುದನ್ನು ತಪ್ಪಿಸಲಾಗದು.

ಜನಸಂಖ್ಯೆಯನ್ನು ಪ್ರಕೃತಿಯ ಕಣ್ಣಲ್ಲಿ ವ್ಯಾಖ್ಯಾನಿಸಿ ಅದರಿಂದ ಕಂಡುಕೊಳ್ಳಬಹುದಾದ ತತ್ವಗಳನ್ನು ಅನ್ವಯಿಸಿಕೊಂಡರೆ ಸಮಸ್ತ ಜೀವಸಂಕುಲ ಹಲವು ಕಂಟಕಗಳಿಂದ ವಿಮುಕ್ತಗೊಳ್ಳುವ ಹಾದಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಪ್ರಕೃತಿಯನ್ನು ನಮ್ಮ ಅಭಿವೃದ್ಧಿಯ ವ್ಯಾಪ್ತಿ ಪ್ರದೇಶದಿಂದ ಹೊರಗಿಟ್ಟ ದಿನಗಳಿಂದಲೇ ಮನುಷ್ಯ ಸಂಕುಲ ವಿವಿಧ ಬಗೆಯ ಸಂಕಟಗಳನ್ನು ಅನುಭವಿಸಲಾರಂಭಿಸಿತು.

ಎಲ್ಲ ಬಲ್ಲೆನೆಂಬ ಅಹಮಿಕೆಯ ಮನುಷ್ಯ ಅಸ್ಮಿತೆಯ ಅಪರಾವತಾರಕ್ಕೆ ಸವಾಲೆಸೆಯುವ ಹಾಗೆ ಪ್ರಕೃತಿ ಸಾಂದರ್ಭಿಕವಾಗಿ ವಿವಿಧ ರೂಪಗಳಲ್ಲಿ ಎಚ್ಚರಿಸುತ್ತಲೇ ಬಂದಿದೆ. ಮನುಷ್ಯ ಅಸ್ತಿತ್ವ ತನ್ನಿರುವಿಕೆಗೆ ಮಾರಕವಾಗಿರುವುದನ್ನು ಮನವರಿಕೆ ಮಾಡಿಕೊಡಲು ಪ್ರಕೃತಿ ನೈಸರ್ಗಿಕ ವಿಕೋಪ ಮತ್ತು ಸಾಂಕ್ರಾಮಿಕ ಜಾಡ್ಯಗಳ ಮೂಲಕ ಮತ್ತೆ ಮತ್ತೆ ದೃಢಪಡಿಸುತ್ತಲೇ ಇದೆ. ಕೋವಿಡ್ 19 ಹೊಸ ಸೇರ್ಪಡೆ ಅಷ್ಟೇ.

ಸಹಿಸಲಸಾಧ್ಯ ಸಂಕಟ ವಿಪರೀತವಾದಾಗ ಪ್ರಕೃತಿ ತನ್ನ ಸಮತೋಲನವನ್ನು ಕಾಯ್ದುಕೊಳ್ಳುವ ಜಾಣ್ಮೆ ಮೆರೆಯುತ್ತದೆ. ಹುಟ್ಟು ಮತ್ತು ಸಾವು ಎರಡೂ ಪ್ರಕೃತಿಯೊಂದಿಗಿನ ಎರಡು ಮಹಾವಿಸ್ಮಯಗಳು. ಇವೆರಡೂ ಸೃಷ್ಟಿಯ ಘಟಿಸುವಿಕೆಯನ್ನು ಸಂಕೇತಿಸುತ್ತವೆ. ಹುಟ್ಟಿನ ಸಂಖ್ಯಾಪ್ರಮಾಣ ನಿಯಂತ್ರಣದ ಹೆಜ್ಜೆಗಳನ್ನು ಸೃಷ್ಟಿಯ ಸಮತೋಲನದ ಗುಣಲಕ್ಷಣಕ್ಕೆ ಅನುಗುಣವಾಗಿ ಗ್ರಹಿಸಬಹುದು. ಸಾವಿನ ಘಟಿಸುವಿಕೆಯೂ ಸೃಷ್ಟಿಯ ಅಲಿಖಿತ ನಿಯಮಾವಳಿಗೆ ಅನುಗುಣವಾಗಿಯೇ ಏರ್ಪಡುತ್ತದೆ. ಸೃಷ್ಟಿಯ ಈ ಆಯಾಮವನ್ನು ಸರಿಯಾಗಿ ಅರ್ಥೈಸಿಕೊಂಡಾಗ ಜನಸಂಖ್ಯೆಯ ನಿಖರ ವ್ಯಾಖ್ಯಾನ ಸಾಧ್ಯವಾಗುತ್ತದೆ. ಅದಕ್ಕೆ ತಕ್ಕಂತೆ ಅಭಿವೃದ್ಧಿಯ ಮಾದರಿಗಳು ರೂಪುಗೊಳ್ಳುತ್ತವೆ.

ಜನಸಮೂಹವು ಸಂಖ್ಯಾಬಾಹುಳ್ಯದ ನೆಲೆಯಲ್ಲಿ ಗುರುತಿಸಲ್ಪಡುತ್ತದೆ. ಹೆಚ್ಚು, ಅತಿ ಹೆಚ್ಚು, ಕಡಿಮೆ, ಅತಿ ಕಡಿಮೆ ಎಂದು ವಿಂಗಡಿಸಿ ಅದರ ಸಾಧಕ ಬಾಧಕಗಳನ್ನು ಪಟ್ಟಿ ಮಾಡಿ ವಿಶ್ಲೇಷಿಸುವ ಪದ್ಧತಿ ಮೊದಲಿನಿಂದಲೂ ಅಸ್ತಿತ್ವದಲ್ಲಿದೆ. ಅತಿ ಹೆಚ್ಚು ಜನರಿದ್ದರೆ ಎದುರಾಗುವ ಸಮಸ್ಯೆಗಳು, ಅತಿ ಕಡಿಮೆ ಜನಸಾಂದ್ರತೆ ಇದ್ದಾಗ ಉಂಟಾಗುವ ಬಿಕ್ಕಟ್ಟುಗಳನ್ನು ಪ್ರಸ್ತಾಪಿಸಿ ತರಹೇವಾರಿ ಚರ್ಚೆಗಳು ಈಗಾಗಲೇ ನಡೆದುಹೋಗಿವೆ. ಈ ಚರ್ಚೆಯ ಹಾದಿ ಇದೀಗ ಹೊಸದೊಂದು ಆಯಾಮದಲ್ಲಿ ತಿರುವು ಪಡೆಯಬೇಕಾದ ಅಗತ್ಯವಿದೆ.

ಜನರ ಇರುವಿಕೆ ಮತ್ತು ಅವರ ಸಂಖ್ಯೆಯನ್ನು ಗ್ರಹಿಸುವ,ಪರಿಗಣಿಸುವ ಆಲೋಚನಾ ಕ್ರಮಗಳಲ್ಲಿ ಗಮನಾರ್ಹ ಬದಲಾವಣೆಯ ಅಗತ್ಯವಿದೆ. ಜನರ ಅಸ್ತಿತ್ವ ಮತ್ತು ಕ್ರಿಯಾತ್ಮಕ ಅಸ್ಮಿತೆ- ಎರಡನ್ನೂ ಬಿಡಿಯಾಗಿ, ಇಡಿಯಾಗಿ ನೋಡಬೇಕು. ಜನಸಂಖ್ಯಾಬಾಹುಳ್ಯ ಕ್ರಿಯಾಶೀಲತೆಯ ಸ್ಪರ್ಶ ಪಡೆದಾಗ ಯಥಾಸ್ಥಿತಿಯ ಬದಲು ವಿನೂತನ ಚಲನೆ ಸಾಧ್ಯವಾಗುತ್ತದೆ. ಈ ಚಲನೆಯು ಪ್ರಕೃತಿ ಮತ್ತು ಸಮಸ್ತ ಜೀವಸಂಕುಲದ ಶ್ರೇಯೋಭಿವೃದ್ಧಿಗೆ ಪೂರಕವಾಗುತ್ತದೆ.

ಜನರು ಎಂದರೆ ಯಾರು? ಸಮಸ್ತ ಜೀವಸಂಕುಲದಲ್ಲಿ ಅನನ್ಯತೆಯನ್ನು ಸ್ಥಾಪಿಸಿಕೊಂಡ ಮನುಷ್ಯರೂಪಿ ಜೀವಿಗಳು. ಬೇರೆ ಜೀವಿಗಳಿಗಿಂತ ಭಿನ್ನವಾಗಿ ಆಲೋಚಿಸುವವರು. ಆಲೋಚಿಸಿದ್ದನ್ನು ಅಭಿವ್ಯಕ್ತಿಸುವವರು ಎಂದು ಅರ್ಥೈಸಬಹುದು. ಜನರು ತಮ್ಮ ಇರುವಿಕೆಯನ್ನು ಯಾವಯಾವ ಕಾರಣಗಳಿಗಾಗಿ ವಿನಿಯೋಗಿಸಿಕೊಳ್ಳುತ್ತಾರೆ ಮತ್ತು ಕಾಲಾಂತರಗಳಲ್ಲಿ ಹೊಸಹೊಸ ಪೀಳಿಗೆಗಳಿಗೆ ಯಾವ ತರಹದ ಭೌಗೋಳಿಕ ನೈಸರ್ಗಿಕ ಪರಿಸರದ ಬಳುವಳಿಯನ್ನು ದಾಟಿಸುತ್ತಾರೆ ಎಂಬುದನ್ನು ಕೇಂದ್ರವಾಗಿಸಿಕೊಂಡು ಜನಸಂಖ್ಯೆ ಸಂಬಂಧಿತ ವಿಶ್ಲೇಷಣೆಗಳು ನಡೆಯಬೇಕು.

ಈ ವಿಶ್ಲೇಷಣೆಯ ಸಂದರ್ಭದಲ್ಲಿ ಜನರದ್ದು ಯಾವ ಬಗೆಯ ಕ್ರಿಯಾಶೀಲತೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಸೃಷ್ಟಿಯ ಭೌತಿಕ ಅಸ್ತಿತ್ವ ಮತ್ತು ವಿವಿಧ ಜೀವಿಗಳ ಅನನ್ಯ ಅಸ್ಮಿತೆ – ಎರಡರ ನಡುವಿನ ಕೊಡುಕೊಳ್ಳುವಿಕೆ ಮತ್ತು ಅನುಸಂಧಾನದ ಕಾರಣಕ್ಕಾಗಿಯೇ ಜೀವಜಗತ್ತಿನ ಕ್ರಿಯೆಯು ಅರ್ಥಪೂರ್ಣವಾಗುತ್ತದೆ.

ನಿಸರ್ಗದಲ್ಲಿ ಪ್ರತಿಯೊಂದು ಜೀವಿಗೂ ಅದರದ್ದೇ ಆದ ನೈಸರ್ಗಿಕ ಹೊಣೆಗಾರಿಕೆ ಇದೆ. ಜೀವಿಗಳು ಈ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ನಿಸರ್ಗದ ಭೌತಿಕ ಸ್ವರೂಪಕ್ಕೆ ವಿಶೇಷ ಚಲನೆ ದಕ್ಕುತ್ತದೆ.ತನ್ನ ವಿಶೇಷ ಬುದ್ಧಿಶಕ್ತಿ ನೆರವಿನೊಂದಿಗೆ ಮನುಷ್ಯ ಸಮೂಹ ಈ ಚಲನೆಯ ಸೌಂದರ್ಯವನ್ನು ಮತ್ತಷ್ಟು ಚೆಂದಗಾಣಿಸಿ ಸೃಷ್ಟಿಯ ಜೀವಂತಿಕೆ ಹೆಚ್ಚಿಸಬಹುದು. ಈ ಪರಿಕಲ್ಪನೆಯನ್ನು ಕೇಂದ್ರವಾಗಿಟ್ಟುಕೊಂಡು ಪ್ರತಿವರ್ಷದ ಜನಸಂಖ್ಯಾ ದಿನ ಆಚರಿಸಲ್ಪಡಬೇಕು.

ಸೃಷ್ಟಿಯಾನದ ಈ ಬಗೆಯ ಜೀವಂತಿಕೆಯ ನೆಲೆಯಲ್ಲಿಯೇ ‘ಜನಸಮೂಹ’ವನ್ನು ಇದೀಗ ವ್ಯಾಖ್ಯಾನಿಸಿಕೊಳ್ಳಬೇಕಿದೆ. ಜನರು ಸಂಖ್ಯೆಯು ವಾಸಿಸುವ ದೇಶ ಮತ್ತು ಪ್ರದೇಶಗಳ ಮೇಲೆ ಉಂಟುಮಾಡುವ ಪರಿಣಾಮ, ಒಟ್ಟು ಪರಿಸರದೊಳಗಿನ ಸುಸ್ಥಿರತೆ ಕಾಯ್ದುಕೊಳ್ಳುವ ಸಂದರ್ಭದಲ್ಲಿ ಸೃಷ್ಟಿಸುವ ಸವಾಲುಗಳು, ಜೀವಸಂಕುಲದ ವೈವಿಧ್ಯತೆ ಉಳಿಸುವ ಹೊಣೆ ನಿರ್ವಹಣೆಯ ವೇಳೆ ಎದುರುಗೊಳಿಸುವ ಅಡ್ಡಿ ಆತಂಕಗಳು, ಅಭಿವೃದ್ಧಿಯ ನಮ್ಯ ಮಾದರಿಗಳನ್ನು ಕಂಡುಕೊಳ್ಳುವ ಹಂತದಲ್ಲಿ ನಿರ್ಮಿತವಾಗುವ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂವಾದ ನಡೆಯಬೇಕು. ಆಗ ಅಭಿವೃದ್ಧಿಯ ಹೆಜ್ಜೆಗಳು ಅನನ್ಯವಾಗುತ್ತವೆ.

ಜಗತ್ತಿನ ನೀತಿ ನಿರೂಪಣಾ ವಲಯ ಜನಸಮೂಹವನ್ನು ಅಮೂಲ್ಯ ಸಂಪನ್ಮೂಲವನ್ನಾಗಿ ಪರಿಗಣಿಸಲಿಲ್ಲ. ಸಾಮುದಾಯಿಕ ಪ್ರಗತಿಯೊಂದಿಗೆ ನಿಕಟ ನಂಟು ಹೊಂದಿರುವ ವ್ಯಕ್ತಿಗತ ಬೆಳವಣಿಗೆ ಸಾಧ್ಯವಾಗಿಸುವಂಥ ಉದಾತ್ತ ನೀತಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಿತ್ತು. ಸಾಮುದಾಯಿಕ ಪ್ರಜ್ಞೆ ಪ್ರಕೃತಿ ತತ್ವದ ಭಾಗವಾಗಿ ಸಮಷ್ಠಿ ಹಿತದ ಕಡೆಗೆ ಚಲಿಸಬೇಕಿತ್ತು. ಹಾಗಾಗಲಿಲ್ಲ. ವ್ಯಕ್ತಿಗತ ಹಿತ ಮೇಲುಗೈ ಸಾಧಿಸಿ ಸಮಷ್ಟಿ ಪ್ರಜ್ಞೆ ಇಲ್ಲವಾದಾಗ ಅಂಥ ಜನಸಮುದಾಯಗಳ ಇರುವಿಕೆಯು ಸೃಷ್ಟಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಆಗ ಜನಸಂಖ್ಯೆಯ ಬಾಹುಳ್ಯವೇ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಕಳೆದ ವರ್ಷ ಆಚರಿಸಲ್ಪಟ್ಟ ದಿನಾಚರಣೆ ಮಹಿಳಾ ಆರೋಗ್ಯ ಸಂರಕ್ಷಣೆಯ ಚಿಂತನೆಯನ್ನು ಕೇಂದ್ರೀಕರಿಸಿತ್ತು. ಈ ಸಲದ ದಿನಾಚರಣೆಯ ಕೇಂದ್ರ ಆಶಯ ಘೋಷಿತವಾಗಿಲ್ಲ. ಆದಾಗ್ಯೂ ಇಲ್ಲಿಯವರೆಗಿನ ದಿನಾಚರಣೆಗಳ ಸಂದರ್ಭದ ವಿವಿಧ ಚರ್ಚೆ, ಆಲೋಚನಾ ಕ್ರಮಗಳ ಆಧಾರದಲ್ಲಿ ಹೊಸದಾದ ಸಂವಾದ ರೂಪಿಸಿಕೊಳ್ಳಬೇಕಿದೆ. ಜನರನ್ನು ಪ್ರಕೃತಿ ಸ್ನೇಹಿ ಸಂಪನ್ಮೂಲಗಳನ್ನಾಗಿ ಗ್ರಹಿಸಿ ವಿವಿಧ ಚಿಂತನೆಗಳನ್ನು ಅಭಿವ್ಯಕ್ತಿಸುವ ಮತ್ತು ಅದಕ್ಕೆ ಅನುಗುಣವಾಗಿ ಅಭಿವೃದ್ಧಿ ನೀತಿಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವುದರ ಕಡೆಗೆ ಗಮನಹರಿಸಬೇಕು.

ಹಾಗಾದಾಗ ಅಭಿವೃದ್ಧಿಗೆ ಹೊಸ ಆಯಾಮ ದೊರಕುತ್ತದೆ. ಬೃಹತ್ತಿನ ಬೆನ್ನು ಹಿಂದೆ ಓಡುವ ಮನಸ್ಥಿತಿಯೇ ವಿಜೃಂಭಿಸುವ ಈಗಿನ ಅಭಿವೃದ್ಧಿ ಮಾದರಿಗಳು ಜನರನ್ನು ಉತ್ಪಾದಕ ವಸ್ತುಗಳನ್ನಾಗಿ ಗ್ರಹಿಸಿವೆ. ಅವರನ್ನು ನಿಸರ್ಗ ಸ್ನೇಹಿ ಮಾನವ ಸಂಪನ್ಮೂಲ ಎಂದು ಪರಿಗಣಿಸಿಲ್ಲ. ಪ್ರತೀ ಕಾಲಘಟ್ಟದಲ್ಲೂ ಈ ಸಂಪನ್ಮೂಲವನ್ನು ನವೀಕರಿಸಿ ಪ್ರಕೃತಿಯ ಸುಸ್ಥಿರತೆಯನ್ನು ಕಾಯ್ದುಕೊಳ್ಳಬಹುದು ಎಂಬ ಚಿಕಿತ್ಸಕ ದೃಷ್ಟಿಕೋನ ಇಲ್ಲವಾದ್ದರಿಂದ ಈಗಿನ ಜಾಗತಿಕ ಅಭಿವೃದ್ಧಿ ಮಾದರಿಗಳು ಸಮಗ್ರವೆನಿಸಿಲ್ಲ. ಜನರನ್ನು ಬೌದ್ಧಿಕ, ಪ್ರಾಕೃತಿಕ ಸಂಪನ್ಮೂಲವಾಗಿ ರೂಪಿಸುವುದರ ಕಡೆಗೆ ಅಭಿವೃದ್ಧಿಯ ಗಮ್ಯವಿರಬೇಕು. ಈ ಗಮ್ಯದೆಡೆಗೆ ಚಲಿಸಿದಾಗ ‘ಜನಸಂಖ್ಯಾ ಆಸ್ಫೋಟ’ ದ ಬಿಕ್ಕಟ್ಟುಗಳು ತಲೆದೋರುವುದಿಲ್ಲ. ಜನಸಂಪನ್ಮೂಲ ಚಲನೆ ಸಾಧ್ಯವಾಗುತ್ತದೆ. ರಚನಾತ್ಮಕ ಪಲ್ಲಟಗಳ ಮೂಲಕ ಜಗತ್ತಿಗೆ ಸುಸ್ಥಿರ ಮುನ್ನಡೆ ದಕ್ಕುತ್ತದೆ.

(ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version