ದಿನದ ಸುದ್ದಿ
ಜೆಸ್ಕಾಂ | 3 ತಿಂಗಳ ಅವಧಿಯೊಳಗೆ ವಿದ್ಯುತ್ ಬಿಲ್ ಪಾವತಿಸಿ
ಸುದ್ದಿದಿನ,ಬಳ್ಳಾರಿ : ಬಳ್ಳಾರಿ ನಗರದ ಜೆಸ್ಕಾಂ ಉಪ ವಿಭಾಗ-2 ರ ಕಾರ್ಯ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರು ಸತತವಾಗಿ ಮೂರು ತಿಂಗಳಿಗಿಂತ ಹೆಚ್ಚಿನ ದಿನಗಳಿಂದ ಬಿಲ್ ಪಾವತಿಸದ ಬಾಕಿ ಉಳಿಸಿಕೊಂಡಿರುವ ಸ್ಥಾವರಗಳನ್ನು ಶಾಶ್ವತವಾಗಿ ನಿಲುಗಡೆಗೊಳಿಸಿ, ವಿದ್ಯುತ್ ಮಾಪಕಗಳನ್ನು ಕಡಿತಗೊಳಿಸಲಾಗುವುದು ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಜೆಸ್ಕಾಂ ಉಪ ವಿಭಾಗ-2 ಕಾರ್ಯ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಸ್ಥಾವರಗಳ ಬಿಲ್‍ನ್ನು ಮೂರು ತಿಂಗಳಗಿಂತ ಹೆಚ್ಚಿನ ದಿನಗಳಿಂದ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ವಿದ್ಯುತ್ ಸ್ಥಾವರಗಳನ್ನು ಕಡಿತಗೊಳಿಸಲಾಗುವುದು.
ಕೆಇಆರ್‍ಸಿ ನಿಯಮಾವಳಿ 32.07 ಪ್ರಕಾರ ಸತತವಾಗಿ ಮೂರು ತಿಂಗಳಿನಿಂದ ವಿದ್ಯುತ್ ಬಾಕಿಯನ್ನು ಪಾವತಿಸದೆ ಇರುವ ವಿದ್ಯುತ್ ಸ್ಥಾವರಗಳ ಗಣಕೀಕೃತ ಯಂತ್ರದಲ್ಲಿ ಸ್ವಯಂ ಚಾಲಿತವಾಗಿ ಶಾಶ್ವತವಾಗಿ ನಿಲುಗಡೆಯಾಗಲಿವೆ ಮತ್ತು ವಿದ್ಯುತ್ ಮಾಪಕಗಳನ್ನು ಕಡಿತಗೊಳಿಸಲಾಗುವುದು.
ಶಾಶ್ವತವಾಗಿ ನಿಲುಗಡೆಗೊಳಿಸಿದ ಸ್ಥಾವರಗಳ ಠೇವಣಿಯ ಹಣವನ್ನು ಬಾಕಿಗೆ ಹೊಂದಾಣಿಕೆ ಮಾಡಲಾಗುವುದು ಇನ್ನು ಹೆಚ್ಚಿನ ಬಾಕಿ ಇದ್ದಲ್ಲಿ ಕೆಇಆರ್‍ಸಿ ನಿಯಮಾವಳಿ 41.00 ಪ್ರಕಾರ ಭೂಮಿ ಮತ್ತು ಕಂದಾಯ ಕಾಯ್ದೆ ಅಡಿಯಲ್ಲಿ ಬಾಕಿಯನ್ನು ವಸೂಲಿ ಮಾಡಲಾಗುವುದು.
ಮುಂದುವರೆದು ಒಂದು ಬಾರಿ ವಿದ್ಯುತ್ ಸ್ಥಾವರಗಳನ್ನು ಶಾಶ್ವತವಾಗಿ ನಿಲುಗಡೆಯಾದ ನಂತರ ಮರು ಸಂಪರ್ಕಕ್ಕೆ ಗಣಕೀಕೃತದಲ್ಲಿ ಆಸ್ಪದ ಇರುವುದಿಲ್ಲ. ಮತ್ತೊಮ್ಮೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರು ಹೊಸದಾಗಿ ಅರ್ಜಿಯನ್ನು ಸಲ್ಲಿಸಿ ಹೊಸ ಠೇವಣಿಗಳನ್ನು ಪಾವತಿಸಬೇಕಾಗುತ್ತದೆ.
ಸದರಿ ವಿದ್ಯುತ್ ಗ್ರಾಹಕರು ಈಗಲೇ ಜಾಗರೂಕರಾಗಿ ತಮ್ಮ ಸ್ಥಾವರಗಳ ಬಾಕಿಯನ್ನು ಪಾವತಿಸಲು ಮತ್ತು ಜೆಸ್ಕಾಂ ಇಲಾಖೆಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243