ದಿನದ ಸುದ್ದಿ
ಜೋಗಿಮಟ್ಟಿ ಪ್ರವೇಶ ನಿರಾಕರಣೆ | ಸಾರ್ವಜನಿಕರ ಆಕ್ರೋಶ
ಸುದ್ದಿದಿನ ಡೆಸ್ಕ್ | ಕರ್ನಾಟಕದ ಊಟಿ ಎಂದೇ ಪ್ರಸಿದ್ಧವಾಗಿರುವ ಚಿತ್ರದುರ್ಗದ ಜೋಗಿಮಟ್ಟಿ ಸೌಂದರ್ಯ ಕಣ್ತುಂಬಿಕೊಳ್ಳಲು ಬೆಳಗ್ಗೆ ಆಗಮಿಸಿದ್ದ ಪ್ರವಾಸಿಗರಿಗೆ ನಿರಾಸೆ ಮೂಡಿಸಿತು. ಜೋಗಿಮಟ್ಟಿ ಊಟಿಯಷ್ಟೇ ರಮಣನೀಯವಾದ ಸ್ಥಳ ಇಲ್ಲಿನ ಪ್ರಕೃತಿ ಸೊಬಗು ಎಂಥವರನ್ನು ಮುದಗೊಳಿಸುತ್ತದೆ. ಇದನ್ನು ನೋಡಲು ದಿನವೂ ಸಾವಿರಾರು ಜನ ಬೆಳಗ್ಗೆಯೇ ಆಗಮಿಸುತ್ತಾರೆ. ಆದರೆ, ಈ ಬೆಳಗ್ಗೆ ಅರಣ್ಯ ಪ್ರವೇಶ ದ್ವಾರದ ಸೆಕ್ಯುರಿಟಿ ಪ್ರವೇಶ ನೀಡಲು ನಿರಾಕರಿಸಿದ್ದರಿಂದ ಸಾರ್ವಜನಿಕರು ಆಕ್ರೋಶಗೊಂಡು ಗೇಟ್ ಮುರಿದು ಹಾಕಿದ್ದಾರೆ.
ಇದಕ್ಕೆಲ್ಲಾ ಕಾರಣ ಇಷ್ಟೇ ಅಲ್ಲಿಗೆ ಅರಣ್ಯ ಸಚಿವ ಶಂಕರ್ ಹಿಂದಿನ ರಾತ್ರಿ ಆಗಮಿಸಿ ಐಬಿಯಲ್ಲಿ ವಾಸ್ತವ್ಯ ಹೂಡಿದ್ದು. ದಿನವೂ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿದ್ದ ಸೆಕ್ಯುರಿಟಿಗಳು ಇಂದಿನ ಬೆಳಗ್ಗೆ ಸಚಿವರ ಬಂದಿದ್ದರಿಂದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಿಲ್ಲ. ಜಾಲಿ ಮೂಡ್ ನಲ್ಲಿದ್ದ ಜನರು, ಪ್ರವಾಸಿಗರು, ವಾಯುವಿಹಾರಿಗಳನ್ನು ತಡೆದು ಬೇಸರ ಮೂಡಿಸಿದರು.
ಜೋಗಿಮಟ್ಟಿಗೆ ಹೋಗಲು ಪ್ರವೇಶ ಕೊಡುತ್ತಾರೆ ಎಂದು ಗಂಟೆಗೂ ಅಧಿಕ ಕಾಲ ಕಾದು ಸಾಕಾದ ಸಾರ್ವಜನಿಕರು ರೊಚ್ಚಿಗೆದ್ದು ಗೇಟ್ ಬೀಗ ಮುರಿದು ಮುಂದಾದರು. ಈ ವಿಷಯ ತಮಗೆ ಗೊತ್ತಿರಲಿಲ್ಲ ಎಂದು ಉತ್ತರಿಸಿರುವ ಸಚಿವ ಆರ್. ಶಂಕರ್, ಯಾರೇ ಬಂದರೂ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. ಏನೇ ಆಗಲಿ ಪ್ರಕೃತಿ ಸೌಂದರ್ಯ ಸವಿಸಲು ಬಂದ ಪ್ರವಾಸಿಗರಿಗೆ ಪ್ರವೇಶ ನಿರಾಕರಣೆ ಮಾಡುವಂಥದ್ದು ಸರಿಯಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401