ದಿನದ ಸುದ್ದಿ

ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಅನುಮಾನಾಸ್ಪದ ಸಾವು : ಆರೋಪಿ ಬಂಧನ

Published

on

ಸುದ್ದಿದಿನ,ರಾಯಚೂರು : ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ #Justiceformadhu (ಜಸ್ಟೀಸ್ ಫಾರ್ ಮಧು) ಎಂಬ ಅಭಿಯಾನ ಆರಂಭವಾಗಿದೆ.

ವಿದ್ಯಾರ್ಥಿನಿ ಮಧು ಪತ್ತಾರ್ ಅವರ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಆಕೆಯನ್ನ ಅತ್ಯಾಚಾರವೆಸಗಿ, ಆಕೆಯಿಂದಲೇ ಬಲವಂತವಾಗಿ ಡೆತ್ ನೋಟ್ ಬರೆಸಿಕೊಂಡು ಕೊಲೆಮಾಡಲಾಗಿದೆ ಎಂಬ ಆರೋಪಗಳು ಜೋರಾಗಿಯೇ ಕೇಳಿ ಬರುತ್ತಿವೆ.

ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಧು ಪತ್ತಾರ್ ಕಳೆದ ಏಪ್ರಿಲ್13ರಂದು ನಾಪತ್ತೆಯಾಗಿದ್ದರು. ನಂತರ ಮಧುವಿನ ಶವ ಏಪ್ರಿಲ್ 16ರಂದು ಅವರ ಕಾಲೇಜಿನಿಂದ ಸುಮಾರು 4 ಕಿಲೋಮೀಟರ್‌ ದೂರದಲ್ಲಿ ನೇಣಿಗೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮಧುವಿನ ಶವವು ನೆಲಕ್ಕೆ ತಾಗಿರುವಂತೆ ನೇಣು ಬಿಗಿದ ಸ್ಥಿತಿಯಲ್ಲಿದ್ದು, ಸುಟ್ಟ ಗುರುತುಗಳಿದ್ದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಹಾಗೇ ಆ ಸ್ಥಳದಲ್ಲಿ ಮಧು ಪತ್ತಾರ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಕೂಡಾ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಧು ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಧು ಪತ್ತಾರ್ ಅವರ ಅನುಮಾನಾಸ್ಪದ ಈ ಸಾವಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸಾವಿಗೆ ನ್ಯಾಯ ಒದಗಿಸಲು, ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕಾಗಿ ಅಭಿಯಾನ ಶುರುವಾಗಿದೆ.

ಆರೋಪಿ ಸುದರ್ಶನ ಯಾದವ್ ಬಂಧನ

ಮಧು ಪತ್ತಾರ್ ಪೋಷಕರ ದೂರಿನನ್ವಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನೇತಾಜಿ ನಗರ ಪೊಲೀಸರು, ಐಪಿಸಿ ಸೆಕ್ಷನ್ 302 ಮತ್ತು 376 ರ ಅಡಿ ಅತ್ಯಾಚಾರ ಮತ್ತು ಕೊಲೆ ಎಂದು ಪ್ರಕರಣ ದಾಖಲಿಸಿ, ಸುದರ್ಶನ ಯಾದವ್ ಎಂಬ ಯುವಕನನ್ನು ಬಂಧಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version