ದಿನದ ಸುದ್ದಿ

ಜನವರಿ 1ರಿಂದ ಮಾನಸಿಕ ರೋಗಿಗಳ ಸಂಬಂಧಿಕರಿಗೆ ಔಷಧಿ ವಿತರಣೆ

Published

on

ಸುದ್ದಿದಿನ,ಕಲಬುರಗಿ : ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕೆಳಕಂಡ ತಾಲೂಕುಗಳ ಆಸ್ಪತ್ರೆಗಳಲ್ಲಿ 2021ರ ಜನವರಿ 1 ರಿಂದ ಮಾನಸಿಕ ರೋಗಿಗಳ ಆರೋಗ್ಯ ಪರಿಶೀಲನೆ ಹಾಗೂ ಮಾನಸಿಕ ರೋಗಿಗಳ ಸಂಬಂಧಿಕರಿಗೆ ಅವಶ್ಯಕತೆಯಿರುವ ಔಷಧಿಗಳನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಮಾನಸಿಕ ರೋಗಕ್ಕೆ ಒಳಗಾದ ರೋಗಿಗಳಿಗೆ ಔಷಧಿ ವಿತರಿಸಲಾಗುತ್ತಿದೆ. ಅದ್ದರಿಂದ ರೋಗಿಗಳ ಸಂಬಂಧಿಕರು ಕಲಬುರಗಿಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದವರು ನೀಡಿದ ಔಷಧಿ ಚೀಟಿ ತೋರಿಸಿ ಅವಶ್ಯಕವಿರುವ ಔಷಧಿಯನ್ನು ಪಡೆಯಬಹುದಾಗಿದೆ. ಹಳೆಯ ರೋಗಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆಯನ್ನು ಮುಂದುವರೆಸಲು ಮಾತ್ರೆಗಳನ್ನು ವಿತರಿಸಲಾಗುತ್ತಿದೆ.

ಜನವರಿ 1 ರಂದು ಕಲಬುರಗಿ ನಿರಾಶ್ರಿತರ ಪರಿಹಾರ ಕೇಂದ್ರ, ಜನವರಿ 5 ರಂದು ಆಳಂದ ತಾಲೂಕು ಆಸ್ಪತ್ರೆ, ಜನವರಿ 8 ರಂದು ಅಫಜಲಪುರ ತಾಲೂಕು ಆಸ್ಪತ್ರೆ, ಜನವರಿ 12 ರಂದು ಚಿಂಚೋಳಿ ತಾಲೂಕು ಆಸ್ಪತ್ರೆ, ಜನವರಿ 15 ರಂದು ಜೇವರ್ಗಿ ತಾಲೂಕು ಆಸ್ಪತ್ರೆ, ಜನವರಿ 19 ರಂದು ಚಿತ್ತಾಪುರ ತಾಲೂಕು ಆಸ್ಪತ್ರೆ, ಜನವರಿ 22 ರಂದು ಕಲಬುರಗಿ ರಾಜ್ಯ ಮಹಿಳಾ ನಿಲಯ ಮತ್ತು ಬಾಲಕರ ಬಾಲ ಮಂದಿರ ಹಾಗೂ ಜನವರಿ 26 ರಂದು ಸೇಡಂ ತಾಲೂಕು ಆಸ್ಪತ್ರೆ. ಕಲಬುರಗಿಯ ಡಿ.ಎಂ.ಪಿ.ಹೆಚ್. ಮನೋವೈದ್ಯ ಡಾ|| ಶ್ರೀಕಾಂತ ಹಾಗೂ ಚಿತ್ತಾಪುರ ಟಿ.ಎಂ.ಪಿ.ಹೆಚ್. ಮನೋವೈದ್ಯ ಡಾ. ಸುಧಾರಾಣಿ ಅವರು ತಪಾಸಣಾ ನಡೆಸಲಿದ್ದಾರೆ.

ಚಿಕಿತ್ಸೆಗಾಗಿ ತಮ್ಮ ಹತ್ತಿರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆಗಳಿಗೆ ಸಂಪರ್ಕಿಸಲು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳ ಮೂಲಕ ಕಲಬುರಗಿ ಮನೋವೈದ್ಯ ಡಾ. ಶ್ರೀಕಾಂತ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version