ದಿನದ ಸುದ್ದಿ
ದುನಿಯಾ ವಿಜಯ್ ಹಲ್ಲೆ ಪ್ರಕರಣ : ಪಾನಿಪುರಿ ಕಿಟ್ಟಿ ಮೇಲೆ ಬಿತ್ತು ಕೇಸ್ !
ಸುದ್ದಿದಿನ ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.
ಪೊಲೀಸರ ಎದುರೇ ನಟ ದುನಿಯಾ ವಿಜಯ್ ಹಣೆಗೆ ಡಿಚ್ಚಿ ಹೊಡೆದಿದ್ದಲ್ಲದೆ, ಅವರ ಕಾರಿನ ಕನ್ನಡಿಗಳನ್ನು ಧ್ವಂಸಗೊಳಿಸಿ, ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪಾನಿಪುರಿ ಕಿಟ್ಟಿ ವಿರುದ್ಧ ಮಂಗಳವಾರ ಹೈಗ್ರೌಂಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತಮ್ಮ ಅಣ್ಣನ ಮಗ ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಪಿತಗೊಂಡಿದ್ದ ಕಿಟ್ಟಿ ನಟ ವಿಜಯ್ ಅವರು ಠಾಣೆಗೆ ಆಗಮಿಸುತ್ತಿದ್ದಂತೆ ಪೊಲೀಸರ ಸಮ್ಮುಖದಲ್ಲಿಯೇ ಹಣೆಗೆ ಡಿಚ್ಚಿ ಹೊಡೆದಿದ್ದರು.
ಪೊಲೀಸರು ಇಂದು ಐದು ಮಂದಿ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ಪಡೆದಿದ್ದಾರೆ. ಈ ವೇಳೆ ಸಾಕ್ಷ್ಯ ನುಡಿದಿರುವ ಅವರು, ಪರಸ್ಪರ ವಾಗ್ವಾದಿಂದ ಜಗಳವಾಯಿತು. ಈ ವೇಳೆ ದುನಿಯಾ ವಿಜಯ್ ಅವರ ಸಹಚರರಾದ ಮಣಿ, ಜಿಮ್ ಟ್ರೈನರ್ ಪ್ರಸಾದ್ ಮತ್ತು ಚಾಲಕ ಪ್ರಸಾದ್ ಹಲ್ಲೆ ನಡೆಸಿದರು. ಆ ಬಳಿಕ ವಿಜಯ್ ಅಣತಿ ಮೇರೆಗೆ ಅವರನ್ನು ಕಾರಿನಲ್ಲಿ ಅಪಹರಿಸಲಾಯಿತು ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.