ಸಿನಿ ಸುದ್ದಿ
ಸಂದರ್ಶನ: ನೀವು ಅರಿಯದ ತುಳಸಿ ಪ್ರಸಾದ್ !
ತುಳಸಿ ಪ್ರಸಾದ್ ಅವರನ್ನು ಸುದ್ದಿದಿನ ಸಂಪರ್ಕಿಸಿದ್ದು, ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಸುದ್ದಿದಿನ ಸಂದರ್ಶನ ( June 26) : ತನ್ನ ಹಾಡಿನ ಧಾಟಿಯಿಂದಾಗಿ ನೆಗಟಿವ್ ಕಮೆಂಟ್‍ಗಳಿಂದಲೇ ಖ್ಯಾತಿ ಪಡೆದಿರುವ ಹಾಸನ ಮೂಲದ ತುಳಸಿ ಪ್ರಸಾದ್ ಅವರನ್ನು ಸುದ್ದಿದಿನ ಸಂಪರ್ಕಿಸಿದ್ದು, ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ನನ್ನ ಹಾಡುಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕೇಳಲು ಚೆನ್ನಾಗಿಲ್ಲವೆಂದರೆ ಬಯ್ಯುವುದು ಅವರ ಹಕ್ಕು. ಹಾಗೆಯೇ ಹಾಡುವುದು ನನ್ನ ಹಕ್ಕು ಅದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನಗೆ ಖಾಸಗಿಯಾಗಿ ಯಾವೊಬ್ಬ ನಟ, ಗಾಯಕರಿಗೂ ಅವಮಾನ ಮಾಡುವ ಉದ್ದೇಶವಿಲ್ಲ. ಹಾಡುವುದು ನನ್ನ ಅಭಿರುಚಿ. ಹಾಡಿ ಅದನ್ನು ಪ್ರಕಟಿಸುತ್ತಿದ್ದೇನೆ. ನಾನು ಹುಟ್ಟುತ್ತಲೇ ಇಂಥ ವಾಯ್ಸ್ ಬೇಕೆಂದು ಕೇಳಿಕೊಂಡು ಬಂದಿರಲಿಲ್ಲ. ನನ್ನ ಧ್ವನಿ ಚೆನ್ನಾಗಿಲ್ಲ ಎಂದು ಕೇಳುಗರಿಗೆ ಅನಿಸಬಹುದು. ಆದರೆ, ನನಗೆ ಚೆನ್ನಾಗಿದೆ ಅನ್ನಿಸುತ್ತಿದೆ ಅದಕ್ಕಾಗಿ ನಾನು ದೃಢ ಸಂಕಲ್ಪ ಮಾಡಿ ಇನ್ನಷ್ಟು ಹಾಡುಗಳನ್ನು ಪ್ರಕಟಿಸುತ್ತಲೇ ಇದ್ದೇನೆ ಎನ್ನುತ್ತಾರೆ ತುಳಸಿ.
ಚಂದನ್ ಶೆಟ್ಟಿ ಪ್ರೇರಣೆ
ಗಾಯನ ಎಂದರೆ ನನಗೆ ಮೊದಲು ನೆನಪಾಗುವುದು ಚಂದನ್ ಶೆಟ್ಟಿ. ಅವರೇ ನನಗೆ ಪ್ರೇರಣೆ. ಮೊದಲು ಅವರು ಮಾಡುತ್ತಿದ್ದ ಆಲ್ಬಂಗಳನ್ನು ಕೇಳಿ ಏನಿದು ಕಿರಿಕಿರಿ ಅನಿಸುತ್ತಿತ್ತು. ಬರುಬರುತ್ತಾ ಅವರು ಎಲ್ಲರಿಗೂ ಇಷ್ಟವಾದರು. ನಾನು ಮೊದಲು ಹಾಡಿದಾಗ ಎಲ್ಲ ಬೈದರು. ಈಗ ಬೆಂಬಲಕ್ಕೆ ನಿಂತಿದ್ದಾರೆ ಬಯ್ಯುವವರ ಬಗ್ಗೆ ನನಗೆ ಬೇಸರವಿಲ್ಲ ಎಂದು ಅವರು ಪುನರುಚ್ಚರಿಸಿದರು.
ಡಿಪ್ರೆಶನ್ ನಲ್ಲಿದ್ದೆ
ಜೀವನದಲ್ಲಿ ಏನೂ ಸಾಧಿಸಲಿಲ್ಲ ಎಂಬ ಡಿಪ್ರೆಶನ್‍ನಲ್ಲಿದ್ದ ನನಗೆ ಕಲೆ ಕ್ಷೇತ್ರದಲ್ಲೇ ಮುಂದುವರಿಯಬೇಕೆಂಬ ಹಂಬಲ ಇತ್ತು. ಇದಕ್ಕಾಗಿಯೇ ನಾನು ಕಿರು ಚಿತ್ರಗಳನ್ನು ನಿರ್ಮಿಸಲು ಪ್ರಯತ್ನಿಸಿದೆ. ಮೂರು ಕಿರುಚಿತ್ರಗಳನ್ನು ನಿರ್ಮಿಸಿದೆ. ಕ್ಯಾಮೆರಾಮೆನ್ ಮಾತ್ರ ಇದ್ದರು. ಮಿಕ್ಕ ಎಲ್ಲವನ್ನು ನಾನೇ ಮಾಡಿಕೊಳ್ಳುತ್ತಿದ್ದೆ. ರಾತ್ರಿಯೆಲ್ಲ ನಿದ್ದೆಗೆಟ್ಟು ಎಡಿಟ್ ಮಾಡುತ್ತಿದ್ದೆವು. ಅಷ್ಟೆಲ್ಲ ಶ್ರಮ ಹಾಕಿದರೂ ನನ್ನ ಬಗ್ಗೆ ಯಾರೊಬ್ಬರೂ ಒಳ್ಳೆಯ ಮಾತನಾಡುತ್ತಿರಲಿಲ್ಲ. ಸ್ನೇಹಿತರು ಬೆಂಬಲಕ್ಕೆ ನಿಂತಿದ್ದರು.
ಬಿಟ್ಟುಬಿಡು ನಿಂಗ್ಯಾಕೊ ಇದಲ್ಲ ಎಂದರು
ತುಳಸಿ ಪ್ರಸಾದ್ ಅವರ ಹಾಡುಗಳ ಬಗ್ಗೆ ವ್ಯಕ್ತವಾಗುತ್ತಿದ್ದ ಕಮೆಂಟ್‍ಗಳನ್ನು ಗಮನಿಸಿದ ಮನೆಯವರು ಹಾಗೂ ನೆಂಟರಿಷ್ಟರು ನಿಂಗ್ಯಾಕೊ ಇದೆಲ್ಲ ಬಿಟ್ಟುಬಿಡಪ್ಪ ಎಂದಿದ್ದರಂತೆ. ಇದಕ್ಕೆಲ್ಲ ಸೊಪ್ಪು ಹಾಕದ ಅವರು ತಮ್ಮ ಛಲವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ.
ತುಳಸಿ ಪ್ರಸಾದ್ ಕುರಿತ ಕೆಲವು ಕುತೂಹಲಕಾರಿ ಅಂಶಗಳು
ಫೇಸ್‍ಬುಕ್, ಯೂಟ್ಯೂಬ್‍ನಲ್ಲಿ ಹವಾ ಎಬ್ಬಿಸಿರುವ ತುಳಸಿ ಪರಸಾದ್ ಬಗ್ಗೆ ಈಗ ಎಲ್ಲರಿಗೂ ಚಿರಪರಿಚಿತ. ಫೇಸ್‍ಬುಕ್‍ನಲ್ಲಿ ನೆಗಟೀವ್ ಪಾತ್ರವಾಗಿ ಚಿತ್ರಿಸಲಾಗಿರುವ ತುಳಸಿ ಪ್ರಸಾದ್ ಕುರಿತ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ.
- ತುಳಸಿಪ್ರಸಾದ್ ಮೂಲತಃ ಹಾಸನದವರು. ಆದಿ ಚುಂಚನಗಿರಿಯಲ್ಲಿ ವಿದ್ಯಾಭ್ಯಾಸ. ಮನೆಯಲ್ಲಿ, ಸ್ನೇಹಿತರು, ನೆಂಟರಿಷ್ಟರ ಪಾಲಿಗೆ ಒಬ್ಬ ಅಮಾಯಕ ಹುಡುಗ.
- ಓದು ಮುಗಿದ ನಂತರ ಕಲೆ ಅವರನ್ನು ಕೈ ಬೀಸಿ ಕರೆಯಿತು. ಆಗ ಅವರು ಆಯ್ದುಕೊಂಡದ್ದು ಕಿರು ಚಿತ್ರ ನಿರ್ಮಾಣ ಕ್ಷೇತ್ರ.
- ತುಳಸಿ ಪರಸಾದ್ ರಚಿಸಿ, ನಿರ್ಮಾಣ ಮಾಡಿ, ಅಭಿನಯಿಸಿರುವ ಎರಡು ಕಿರುಚಿತ್ರಗಳು ಈಗಲೂ ಫೇಸ್ಬುಕ್ ನಲ್ಲಿ ಲಭ್ಯವಿದೆ.
- ನಿಗೂಢ ಹೂಮಳೆ ಕಿರಚಿತ್ರ ತುಳಸಿ ಅವರಿಗೆ ಹೆಸರು ತಂದುಕೊಟ್ಟಿತು. ಹೂವಿನ ಲೋಕ ಹಾಗೂ ದೇಶಪ್ರೇಮಿ ಎಂಬ ಕಿರು ಚಿತ್ರಗಳನ್ನೂ ಅವರು ನಿರ್ಮಿಸಿದ್ದಾರೆ.
- ತುಳಸಿ ಅವರು ನಿರ್ಮಿಸಿರುವ ನಿಗೂಢ ಹೂಮಳೆ ಕಿರು ಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿತು. ಎರಡು ವರ್ಷಗಳ ಹಿಂದೆಯೇ ಅವರ ಬೆಂಬಲಿಗರ ಸಂಖ್ಯೆ ಹೆಚ್ಚಾಯಿತು.
- ಮಿಕ್ಕ ಚಿತ್ರಗಳಲ್ಲಿ ಧ್ವನಿ ಸಂಗ್ರಹ ಸಮಸ್ಯೆಯಾದ ಕಾರಣ ಅವೆಲ್ಲವುಗಳಿಗೆ ಸರಿಯಾದ ಪ್ರಚಾರ ಸಿಗಲಿಲ್ಲ.
- ಡೈನೋಸರ್ ಕುರಿತ ಫ್ಯಾಂಟಸಿ ಸಿನಿಮಾವೊಂದರ ನಿರ್ಮಾಣಕ್ಕೂ ಅವರು ಕೈ ಹಾಕಿದ್ದರು.
- ಡೈನೊಸರ್ ಸಿನಿಮಾದ ಟೀಸರ್ ಸಹ ಬಿಡುಗಡೆ ಮಾಡಿದ್ದರು.
- ತುಳಸಿ ಪ್ರಸಾದ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪಕ್ಕಾ ಅಭಿಮಾನಿ.
- ಫೇಸ್ ಬುಕ್‍ನಲ್ಲಿ ತುಳಸಿ ಕುರಿತು ಋಣಾತ್ಮಕ ಪ್ರತಿಕ್ರಿಯೆಗಳು ಕೇಳಿಬರುತ್ತಿದ್ದರೂ ರವಿಚಂದ್ರನ್ ಅಭಿಮಾನಿಗಳ ಸಂಘ ಅವರ ಬೆಂಬಲಕ್ಕೆ ನಿಂತಿದೆಯಂತೆ.
- ಗಾಯನಕ್ಕಿಂತ ನಟನೆ, ನಿರ್ದೇಶನದ ಮೇಲೆ ತುಳಸಿ ಅವರಿಗೆ ಹೆಚ್ಚು ಪ್ರೇಮ ಇದೆಯಂತೆ.
- ಫೇಸ್ ಬುಕ್‍ನಲ್ಲಿ ಕೇಳಿಬರುತ್ತಿದ್ದ ನೆಗಟಿವ್ ಕಮೆಂಟ್‍ಗಳಿಂದ ನೊಂದಿದ್ದ ತುಳಸಿ ಅವರು ಬಿಟಿವಿಯಲ್ಲಿ ಸಂದರ್ಶನಕ್ಕೆ ಹೋಗುವ ಎರಡು ವಾರಗಳ ಮುನ್ನ ತಮ್ಮ ಎಫ್‍ಬಿ ಪುಟವನ್ನು ಡಿಲಿಟ್ ಮಾಡಲು ಚಿಂತಿಸಿದ್ದರಂತೆ.
- ನೆಗಟೀವ್ ಕಮೆಂಟ್ ಹಾಕುವವರಿಂದ ದೂರ ಇರುವ ಸಲುವಾಗಿ ತುಳಸಿ ಪ್ರಸಾದ್ ಎಂದಿದ್ದ ಎಫ್ ಬಿ ಪುಟವನ್ನು ರವಿ ಪ್ರಸಾದ್ ಎಂದು ಬದಲಿಸಿಕೊಂಡಿದ್ದಾರೆ.
ಅದೃಷ್ಟದ ಬಾಗಿಲು ತೆರೆದಾಗ !
ತುಳಸಿ ಪ್ರಸಾದ್ ಅವರಿಗೆ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಶತಾಯ ಗತಾಯ ಸಿನಿಮಾದ ನಿರ್ದೇಶಕರು ತಮ್ಮ ಮುಂದಿನ ಚಿತ್ರದಲ್ಲಿ ಒಂದು ಪಾತ್ರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನಷ್ಟು ಕಿರು ಚಿತ್ರಗಳ ನಿರ್ಮಾಣಕ್ಕೆ ತುಳಸಿ ಪ್ರಸಾದ್ ಕೈ ಹಾಕಲು ನಿರ್ಧರಿಸಿದ್ದಾರೆ.