ಸಿನಿ ಸುದ್ದಿ
ಡಿಜಿಟಲ್ ಕಾಮಣ್ಣರ ಕಡೆ ಯೋಗರಾಜ್ ಭಟ್ಟ್ ಬೊಟ್ಟು
ಸುದ್ದಿದಿನ ಡೆಸ್ಕ್: ತಮ್ಮ ಪ್ರತಿ ಸಿನಿಮಾ ಬಿಡುಗಡೆಯಾಗುವ ಮುನ್ನ ಜನರಿಗೆ ಉಪಯೋಗವಾಗುವ ಹಾಗೂ ಜಾಗೃತಿ ಮೂಡಿಸುವ ವಿಷಯಗಳನ್ನಿಟ್ಟುಕೊಂಡು ಪ್ರಚಾರ ಮಾಡುವ ನಿರ್ದೇಶಕ ಯೋಗರಾಜ್ ಭಟ್ ಅವರು ಈಗ ಡಿಜಿಟಲ್ ಕಾಮಣ್ಣರ ಮೇಲೆ ಕಣ್ಣಿಟ್ಟಿದ್ದಾರೆ.
ಪಂಚತಂತ್ರ ಸಿನಿಮಾ ತಂಡ ಕೂಡ ಭಟ್ಟರ ಈ ಜಾಗೃತಿ ಅಭಿಯಾನವನ್ನು ಬೆಂಬಲಿಸಿದೆ. ಫೇಸ್‍ಬುಕ್, ಇನ್ಸ್ಟಾ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು ಹೆಣ್ಣುಮಕ್ಕಳಿಗೆ ಕಿರುಕುಳ ಕೊಡುವ ಕಾಮುಕರ ವಿರುದ್ಧ ಟೊಂಕ ಕಟ್ಟಿರುವ ಈ ತಂಡವು ಹೆಣ್ಣುಮಕ್ಕಳು ಇಂಥ ಸಮಯದಲ್ಲಿ ಏನು ಮಾಡಬೇಕು ಎಂಬ ಟಿಪ್ಸ್ ಕೊಟ್ಟಿದೆ.
ಈ ಕುರಿತ ವಿಡಿಯೊವೊಂದನ್ನು ಭಟ್ಟರು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೊದ ಆರಂಭದಲ್ಲಿ ಮಾತನಾಡುವ ಪಂಚತಂತ್ರ ಸಿನಿಮಾದ ನಾಯಕಿ ಅಕ್ಷರಾ ಗೌಡ ಅವರು ತಾವೂ ಕೂಡ ಜಾಲತಾಣಗಳಲ್ಲಿ ಅನಾಮಿಕರಿಂದ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ಮಾತನಾಡಿದ್ದಾರೆ.
ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಳ್ಳುವ ಕೆಲವು ಹುಡುಗರು, ಮೆಸೆಂಜರ್, ವಾಟ್ಸ್ ಆಪ್‍ಗೆ ಅಶ್ಲೀಲ ಸಂದೇಶ, ವಿಡಿಯೊಗಳನ್ನು ಕಳಿಸುತ್ತಾರೆ, ಇನ್ನೂ ಅನೇಕರು ಪರಿಚಯವನ್ನು ಪ್ರೀತಿಯಾಗಿ ಬೆಳೆಸಿ ಅವರನ್ನು ದುರ್ಬಳಕೆ ಮಾಡಿಕೊಂಡು ಅವರ ಖಾಸಗಿ ವಿಡಿಯೊ, ಫೋಟೊಗಳನ್ನು ಪೋರ್ನ್ ಸೈಟ್‍ಗಳಲ್ಲಿ ಹಾಕುತ್ತಾರೆ. ಇಂಥ ಘಟನೆಗಳು ನಿಮ್ಮ ಬದುಕಿನಲ್ಲಾದರೆ ಹೆದರಬೇಡಿ. ಸಮಾಜ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಸೈಬರ್ ಕ್ರೈಮ್‍ಗೆ ದೂರು ಕೊಡಿ. ಅಪ್ಪ ಅಮ್ಮಂದಿರಿಗೆ ವಿಷಯ ತಿಳಿಸಿ ಎಂದು ಭಟ್ಟರು ಸಲಹೆ ನೀಡಿದ್ದಾರೆ.
ಇಂತ ವಿಷಯದಲ್ಲಿ ಹೆಣ್ಣುಮಕ್ಕಳದ್ದೇ ತಪ್ಪಿದೆ ಪೋಷಕರು ಬಯ್ಯಬಾರದು ಪಾಪ ಹೆಣ್ಣುಮಕ್ಕಳಿಗೆ ಗೊತ್ತಾಗುವುದಿಲ್ಲ ಅವರು ಅಮಾಯಕರು ಜಾಗೃತರಾಗಿ ಎಂದು ಭಟ್ಟರು ತಿಳಿ ಹೇಳಿದ್ದಾರೆ.