ದಿನದ ಸುದ್ದಿ
ಜಿಎಂ ವಿಶ್ವವಿದ್ಯಾಲಯದಲ್ಲಿ ನಾಳೆ ‘ಕನ್ನಡ ಕಲಾ ವೈಭವ’
ಸುದ್ದಿದಿನ,ದಾವಣಗೆರೆ:ಪ್ರತಿ ವರ್ಷದಂತೆ ಈ ವರ್ಷವು ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆಗಳ ಹಿರಿಮೆ ಮತ್ತು ಗರಿಮೆಯ ಗತ ವೈಭವವನ್ನು ಎತ್ತಿಹಿಡಿಯುವ ವಿಶೇಷತೆಗಳುಳ್ಳ ಕನ್ನಡ ಕಲಾ ವೈಭವವನ್ನು ನಾಳೆ (ನವೆಂಬರ್ 22) ಶನಿವಾರದಂದು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ನಾಡು, ನುಡಿ, ಸಂಸ್ಕೃತಿ ಬೆಳವಣಿಗೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟ ಮಹಾನ್ ಚೇತನಗಳು, ಕರುನಾಡಿನ ರಾಜ ಮನೆತನಗಳ ಹೆಜ್ಜೆ ಗುರುತುಗಳು ಸೇರಿದಂತೆ ಸಾಂಪ್ರಾದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಕ್ಯಾಂಪಸ್‌ನಲ್ಲಿ ಕಂಗೊಳಿಸುವರು ಎಂದು ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕರಾದ ಡಾ. ಹೆಚ್.ಎಸ್. ಕಿರಣ್ ಕುಮಾರ್, ಉಪ ನಿರ್ದೇಶಕರಾದ ಎಂ. ಸಂತೋಷ ಕುಮಾರ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು, ಕರ್ನಾಟಕದ ಸಾಂಪ್ರದಾಯಿಕ ಕಲೆಗಳನ್ನು ಪ್ರತಿಬಿಂಬಿಸುವ ಜಾನಪದ ಕಲಾ ಪ್ರಕಾರಗಳ ಪ್ರದರ್ಶನದ ಜೊತೆಗೆ ದಕ್ಷಿಣ ಭಾರತೀಯ ಪರಂಪರೆ, ಕರ್ನಾಟಕ ಸಂಸ್ಕೃತಿ, ಕರ್ನಾಟಕದ ಹಬ್ಬಗಳು, ಜನಪದ ಆಧುನಿಕ ಸಂಯೋಜನೆ ಹೊಂದಿರುವ ದೇಸಿ ಶೈಲಿ, ಬಾಲಿವುಡ್ ಸಿನಿಮಾದ ಹಳೇ ಮತ್ತು ಪ್ರಾದೇಶಿಕ ಶೈಲಿ, ಭಾರತದ ವಧುಗಳ ಸಂಪ್ರದಾಯಿಕ ಉಡುಗೆಗಳು ಸೇರಿದಂತೆ ಕರುನಾಡಿನ ಗತ ವೈಭವದ ವಿವಿಧ ವಿಷಯಗಳ ವಿಶೇಷತೆಯುಳ್ಳ 16 ಸ್ತಬ್ದ ಚಿತ್ರಗಳ ಪ್ರದರ್ಶನವಾಗಲಿವೆ ಎಂದು ಹೇಳಿದರು.
ಕಲಾವೈಭವದ ಪ್ರಯುಕ್ತ ಪ್ರಬಂಧ, ಚರ್ಚಾ ಸ್ಪರ್ಧೆ, ಗಾಯನ, ಸಾಮೂಹಿಕ ನೃತ್ಯ, ಜಿ.ಎಂ.ಯು ಕನ್ನಡಿಗ ಮತ್ತು ಕನ್ನಡತಿ ವೇಷಭೂಷಣ ಸ್ಪರ್ಧೆ, ಸ್ವ ರಚಿತ ಕವನ ವಾಚನ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯಿಂದ ಸ್ಪರ್ಧೆಯ ವಿಜೇತರಿಗೆ ಮತ್ತು ವಿಶೇಷ ಸ್ತಬ್ದ ಚಿತ್ರಗಳಿಗೆ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ವಿಭಾಗದಿಂದ ಹಮ್ಮಿಕೊಳ್ಳಲಾಗಿರುವ ಈ ಕಲಾ ವೈಭವವು ಅಂದು ಬೆಳಗ್ಗೆ 9 ಗಂಟೆಗೆ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಹಾಗೂ ಇಮ್ಮಡಿ ಪುಲಕೇಶಿಯ ಸ್ತಭ್ದ ಚಿತ್ರದ ಅನಾವರಣದೊಂದಿಗೆ “ಕರ್ನಾಟ ಬಲಂ ಅಜೇಯಂ” ಎಂಬ ಸಾರಾಂಶದೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದರು.
ಕಾಲೇಜು ಆವರಣದಲ್ಲಿ ಮೆರವಣಿಗೆ ನಂತರ ಜಿಎಂ ಮಲ್ಲಿಕಾರ್ಜುನಪ್ಪ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವಿದ್ದು, ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಹ ಕುಲಪತಿಗಳಾದ ಡಾ. ಹೆಚ್.ಡಿ. ಮಹೇಶಪ್ಪ, ಕುಲಸಚಿವರಾದ ಡಾ. ಸುನೀಲ್ ಕುಮಾರ್ ಬಿ.ಎಸ್ ಸೇರಿದಂತೆ ಜಿಎಂಯು ನ ನಿರ್ದೇಶಕರು, ಡೀನ್ ಗಳು, ಮುಖ್ಯಸ್ಥರು, ಅಧ್ಯಾಪಕರು ಸೇರಿದಂತೆ ಜಿಎಂಯು ಬಳಗವು ಉಪಸ್ಥಿತವಿರಲಿದೆ ಎಂದು ಮಾಹಿತಿ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮತ್ತು ಪ್ರಮೋಷನ್ ಡೀನ್ ಡಾ. ವೀರಗಂಗಾಧರಸ್ವಾಮಿ ಟಿ.ಎಂ, ಅಸಿಸ್ಟೆಂಟ್ ಪಿಆರ್ಓ ವಸಂತ್ ಕುಮಾರ್ ಜಿ.ಎಸ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243