ದಿನದ ಸುದ್ದಿ
ದಾವಣಗೆರೆ | ಕನ್ನಡ ಕರುಳಿನ ಭಾಷೆ : ದೊಡ್ಡಬಾತಿ ರಾಜ್ಯೋತ್ಸವದಲ್ಲಿ ಕೊಟ್ರೇಶ್ ಕಮಲಾಪುರ
ಸುದ್ದಿದಿನ,ದಾವಣಗೆರೆ : ಕನ್ನಡ ಕರುಳಿನ ಭಾಷೆ. ನಿಖರ ಮತ್ತು ನಿರ್ದಿಷ್ಟ ಅರ್ಥವನ್ನು ಸೂಸುವ ಸ್ಪಷ್ಟ ಭಾಷೆ. ಉಚ್ಛಾರಣೆ ಮೂಲಕ ದೇಹದ ಆರೋಗ್ಯಕ್ಕೂ ಸಹಕಾರಿಯಾಗುವ ಇಂತಹ ಭಾಷೆ ಜಗತ್ತಿನಲ್ಲಿ ಮತ್ತೊಂದಿಲ್ಲ ಎಂದು ಉಪನ್ಯಾಸಕ ಕೊಟ್ರೇಶ್ ಕಮಲಾಪುರ ವಿಶ್ಲೇಷಿದರು.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಿತಿ ದೊಡ್ಡಬಾತಿ, ಚುಟುಕು ಸಾಹಿತ್ಯ ಪರಿಷತ್ ದಾವಣಗೆರೆ ಜಿಲ್ಲಾ ಘಟಕ, ದಾವಣಗೆರೆ ಸಿರಿಗನ್ನಡ ವೇದಿಕೆ, ಸ್ಫೂರ್ತಿ ಪ್ರಕಾಶನ ತೆಲಿಗಿ – ದಾವಣಗೆರೆ ಹಾಗೂ ಭಾವಸಿರಿ ಪ್ರಕಾಶನ ಅಣಬೇರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ : 17/11/2019 ರ ಭಾನುವಾರ ಬೆಳಗ್ಗೆ 10.30ಕ್ಕೆ ದೊಡ್ಡಬಾತಿ ಗ್ರಾಮದ ಗುಡ್ಡದ ಮೇಲಿನ ಶ್ರೀ ಗುರು ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ
64 ನೇ ಕರ್ನಾಟಕ ರಾಜ್ಯೋತ್ಸವ, ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆಯ ಮಹತ್ವವನ್ನು ಅರಿತಾಗ ಮಾತ್ರ ನಿಜವಾದ ಅಭಿಮಾನ ಮೂಡುತ್ತದೆ ಎಂದರು.
ಕನ್ನಡ ನಾಡು – ನುಡಿ, ಗಡಿ, ಜಲ, ಭಾಷೆಗೆ ಸಂಬಂಧಿಸಿದ ಎಷ್ಟೋ ಸಮಸ್ಯೆಗಳು ಹಲವು ವರುಷಗಳಿಂದ ಇಂದಿಗೂ ಸಮಸ್ಯೆಗಳಾಗಿಯೇ ಉಳಿದಿರುವುದಕ್ಕೆ ನಮ್ಮಲ್ಲಿನ ಸ್ವಾಭಿಮಾನ ಮತ್ತು ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚುಸಾಪ ಜಿಲ್ಲಾಧ್ಯಕ್ಷರಾದ ರಾಜಶೇಖರ್ ಗುಂಡಗಟ್ಟಿ ಅವರು ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗುವ ರಾಜ್ಯೋತ್ಸವ ಕಾರ್ಯಕ್ರಮಗಳು ಜನಜಾಗೃತಿ ಮೂಡಿಸುವಂತಿರಬೇಕು. ಈ ದಿಸೆಯಲ್ಲಿ ಬಾತಿ ರಾಜ್ಯೋತ್ಸವ ಸಮಿತಿಯು ಪ್ರತಿ ವರ್ಷವೂ ಶಿಸ್ತು ಬದ್ಧವಾದ ಕಾರ್ಯಕ್ರಮ ರೂಪಿಸುತ್ತಿದೆ. ಸಾಧಕರು ಮತ್ತು ಸಮಾಜ ಸೇವಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿದರು.
ಬಾತಿ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಬಾತಿ ಬಸವರಾಜ್, ಚ. ಷ ಮಲ್ಲಿಕಾರ್ಜುನಪ್ಪ, ವನಿತಾ ಸಾಹಿತ್ಯ ವೇದಿಕೆಯ ಮಲ್ಲಮ್ಮ ನಾಗರಾಜ್, ಕವಿಗಳಾದ ಓಂಕಾರಯ್ಯ ತವನಿಧಿ,,ರೋ. ಬಸವರಾಜ್, ರೇವಣಸಿದ್ದಪ್ಪ, ವಸುಪಾಲಪ್ಪ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಈ ವೇಳೆ ಸಾಧಕರುಗಳಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್ ಟಿ ಗಂಗಾಧರ, ಸಮಾಜ ಸೇವಕರುಗಳಾದ ಬಸಪ್ಪ ಕೋಂ ಹನಗವಾಡಿ ಕರಿಬಸಪ್ಪ , ಕೆ. ಎಂ ಚನ್ನಬಸವಯ್ಯ ಹಾಗೂ ಕವಿ ಜೆ. ವಸುಪಾಲಪ್ಪ ಅವರಿಗೆ ಸನ್ಮಾನಿಸಲಾಯಿತು. 2018 ರಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಮಮತ ಕೆ.ಎಂ, ಅಶ್ವಿನಿ ಡಿ. ಎಂ, ಕಾವ್ಯ ಎಸ್, ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಂಗೀತ ದೊಗ್ಗಳ್ಳಿ ಹಾಗೂ ಶ್ರೀರಾಮ ದೊಡ್ಡಬಾತಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಧ್ಯಾಹ್ನ 2 ಗಂಟೆಗೆ ಸಿರಿಗನ್ನಡ ವೇದಿಕೆಯ ದಾವಣಗೆರೆ ಜಿಲ್ಲಾಧ್ಯಕ್ಷರಾದ ಶಿವಯೋಗಿ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಾಹಿತಿ ಗಂಗಾಧರ ಬಿ ಎಲ್ ನಿಟ್ಟೂರ್ ಆಶಯ ನುಡಿಯಾಡಿದರು. ಮುಖ್ಯ ಅತಿಥಿಗಳಾಗಿ ಕವಿಗಳಾದ ಎಂ. ಬಸವರಾಜ, ಪಿ. ವಿ. ರವಿಕುಮಾರ್, ಶೋಭ ಮಂಜುನಾಥ, ತಾರೇಶ್ ಅಣಬೇರು, ಹರಪನಹಳ್ಳಿ ತಾಲ್ಲೂಕು ಕರವೇ ಅಧ್ಯಕ್ಷ ನಾಗರಾಜ್ ತೆಲಿಗಿ ಭಾಗವಹಿಸಿದ್ದರು.
ದೊಡ್ಡಬಾತಿ ಶಾಮಿಯಾನ ಬಾತಿ ಕೃಷ್ಣ, ಪಾಪುಗುರು, ವೀರಭದ್ರಪ್ಪ ತೆಲಗಿ, ಸುನೀತ ಪ್ರಕಾಶ್, ಉಮಾದೇವಿ, ಪುಷ್ಪಾ ಹೊನ್ನಾಳಿ, ವೀರೇಶ್ ಬಿಜಿಎಂ, ಅಂಜಿನಪ್ಪ, ಡಾ. ಲೋಕೇಶ್ ಜಗಳೂರು, ಬಾತಿ ಷಣ್ಮುಖ, ಪಕ್ಕೀರೇಶ್ ಕೆಸರಳ್ಳಿ, ರಾಕೇಶ್ ಬಾರಿಮರ ಸೇರಿದಂತೆ ಇತರರು ಕವನ ವಾಚಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243