ದಿನದ ಸುದ್ದಿ
ಪರಿಷ್ಕೃತ ಪಠ್ಯಪುಸ್ತಕ ವಿವಾದ : ತಮ್ಮ ಪಠ್ಯವನ್ನು ವಾಪಾಸ್ ಪಡೆದ ಸಾಹಿತಿಗಳು ; ಮುಂದುವರೆದ ಪ್ರತಿರೋಧ..!
ಸುದ್ದಿದಿನ ಡೆಸ್ಕ್ : ಬಿಜೆಪಿ ಸರ್ಕಾರ ಪರಿಷ್ಕೃತ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷನನ್ನಾಗಿ ರೋಹಿತ್ ಚಕ್ರತೀರ್ಥ ಎಂಬ ಬಲಪಂಥೀಯ ಧೋರಣೆಯುಳ್ಳ ವ್ಯಕ್ತಿಯನ್ನು ನೇಮಿಸಿಲಾಗಿದೆ. ಈತನ ಅಧ್ಯಕ್ಷತೆಯಲ್ಲಿ ತಯಾರಾಗಿರುವ ಪಠ್ಯ ಪುಸ್ತಕದಲ್ಲಿ ವಿಶ್ವ ಮಾನವ ಕುವೆಂಪು, ಮಾನವತಾವಾದಿ ಬಸವಣ್ಣ ಅವರನ್ನು ಉದ್ದೇಶ ಪೂರ್ವಕವಾಗಿಯೇ ಅವಮಾನಿಸಲಾಗಿದೆ.
ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಲೇವಡಿಮಾಡಿ ವಿಕೃತ ಮನಸ್ಥಿಯನ್ನು ಮೆರೆದಿದ್ದ ರೋಹಿತ್ ಚಕ್ರತೀರ್ಥ. ಈ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮತ್ತು ಅದರ ಅಧ್ಯಕ್ಷನಿಂದ ನಾಡಿನ ಹಿರಿಯ ಸಾಹಿತಿಗಳು ಮತ್ತು ಸಮಾಜ ಸುಧಾರಕರಿಗೆ ಆಗಿರುವ ಅವಮಾನವನ್ನು ಪ್ರತಿಭಟಿಸಿ ಸೂಕ್ಷ್ಮ ಮನಸ್ಸಿನ ಬರಹಗಾರರಾದ ದೇವನೂರು ಮಹಾದೇವ, ಎಸ್.ಜಿ.ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಜಿ.ರಾಮಕೃಷ್ಣ,ಚಂದ್ರಶೇಖರ ತಾಳ್ಯ, ಬೋಳುವಾರು ಮಹಮ್ಮದ್ ಕುಂಞ, ರೂಪ ಹಾಸನ, ಪಾರ್ವತೀಶ ಬಿಳಿದಾಳೆ ಮತ್ತು ಈರಪ್ಪ ಕಂಬಳಿ ಅವರು ಪರಿಷ್ಕೃತ ಪಠ್ಯದಲ್ಲಿರುವ ತಮ್ಮ ಕವನಗಳನ್ನು ಹಾಗೂ ಗದ್ಯಗಳನ್ನು ಹಿಂದಕ್ಕೆ ಪಡೆದಿದ್ದಾರೆ.
ನಾಡಗೀತೆಯನ್ನೇ ಅವಮಾನಿಸಿದವರನ್ನು ಸರಕಾರ ಉನ್ನತ ಹುದ್ದೆಗೆ ನೇಮಿಸಿದ್ದನ್ನು ಪ್ರತಿಭಟಿಸಿ ಹಿರಿಯ ಲೇಖಕ ನಾಡೋಜ ಹಂ ಪ ನಾಗರಾಜಯ್ಯ ಅವರು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಾಗೇ ದ್ವಿತಿಯ ಭಾಷಾ ಪುಸ್ತಕ ರಚನಾ ಸಮಿತಿ ಅಧ್ಯಕ್ಷ ಪ್ರೊ.ಕೆ.ಎಸ್.ಮಧುಸೂದನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿರೋಧ ಮುಂದುವರೆದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243