ದಿನದ ಸುದ್ದಿ
ಸಂಸ್ಕೃತ ಜನಸಾಮಾನ್ಯರ ಭಾಷೆ ಆಗ್ಲಿ ಅಂದ ಜಿಟಿಡಿಗೆ ಕನ್ನಡಿಗರ ಕ್ಲಾಸ್
ಸುದ್ದಿದಿನ ಡೆಸ್ಕ್: ವಿಶ್ವ ಸಂಸ್ಕೃತ ದಿನಾಚರಣೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‍ನಿಂದ ಬರೆಯಲಾಗಿರುವ ಪೋಸ್ಟ್ ವೊಂದು ವೈರಲ್ ಆಗಿದ್ದು, ಕನ್ನಡಿಗರನ್ನುಕೆರಳಿಸಿದೆ.
ಸೋಮವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಜಿಟಿಡಿ ಅವರ ಟ್ವಿಟರ್ ಖಾತೆಯಿಂದ “ವಿಶ್ವ ಸಂಸ್ಕೃತ ದಿನದ ಸಂದರ್ಭದಲ್ಲಿ ಎಲ್ಲಾ ಸಂಸ್ಕೃತ ವಿದ್ಯಾರ್ಥಿಗಳಿಗೂ/ ಅಧ್ಯಾಪಕ ವೃಂದಕ್ಕೂ ನನ್ನ ಶುಭಾಶಯಗಳು. ಸಂಸ್ಕೃತ ಜನಸಾಮಾನ್ಯರ ಭಾಷೆಯಾಗಲಿ ಎಂದು ಹಾರೈಸುತ್ತೇನೆ’ ಎಂದು ಟ್ವೀಟ್ ಮಾಡಲಾಗಿತ್ತು.
ಇದರಿಂದ ಕುದ್ದುಹೋದ ಕನ್ನಡಿಗರು ಗೌಡ್ರೇ ಸಂಸ್ಕøತ ಜನಸಾಮಾನ್ಯರ ಭಾಷೆ ಆದ್ರೆ, ಕನ್ನಡ ಯಾರು ಮಾತಾಡ್ತಾರೆ ಎಂದು ಟೀಕಿಸಿದರು. ಅದರ ಬೆನ್ನಿಗೇ ನೂರಾರು ಮಂದಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದು ಈ ಪೈಕಿ ಕೆಲವರು ಕಟುವಾದ ಮಾತುಗಳಿಂದ ನಿಂದಿಸಿದ್ದಾರೆ.
ಮೊನ್ನೆ ಮಂಡ್ಯಕ್ಕೆ ಬಂದಿದ್ದಾಗ ಅಷ್ಟು ಸೊಗಸಾಗಿ ಕನ್ನಡ ಮಾತನಾಡಿದ್ರಿ, ಈಗ ಸಂಸ್ಕೃತದ ಹಿಂದೆ ಯಾಕೆ ಹೋಗ್ತಿದ್ದೀರಾ? ಎಂದು ಮತ್ತೊಬ್ಬ ಟ್ವಿಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲವರು ಜಿಟಿಡಿ ಪರವಾಗಿಯೂ ಮಾತನಾಡಿದ್ದು, ಸಂಸ್ಕೃತವು ಕನ್ನಡ ಸೇರಿದಂತೆ ಬಹುತೇಕ ದ್ರಾವಿಡ ಭಾಷೆಗಳಿಗೆ ತಾಯಿದ್ದಂತೆ. ಅದನ್ನು ಕಲಿಯುವುದರಲ್ಲಿ ತೊಂದರೆ ಏನು ಎಂದು ಪ್ರಶ್ನಿಸಿದ್ದಾರೆ. ನೀವೇನು ಪ್ರಾದೇಶಿಕ ಪಕ್ಷದವರೋ ಇಲ್ಲವೋ ಚಡ್ಡಿಗಳ ಗುಂಪಿನವರೋ? ನಿಮಗ್ಯಾಕೆ ಇಂಥ ಆಲೋಚನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದು ಗಮನಕ್ಕೆ ಬಂದ ಮರುಕ್ಷಣವೇ ಟ್ವಿಟರ್ ಪೋಸ್ಟ್‍ಅನ್ನು ಡಿಲಿಟ್ ಮಾಡಲಾಗಿದೆ.