ದಿನದ ಸುದ್ದಿ

ಟಿ. ನರಸೀಪುರ : ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ

Published

on

ಸುದ್ದಿದಿನ,ಟಿ. ನರಸೀಪುರ: ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೋರಣೆಯನ್ನು ಖಂಡಿಸಿ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದ ಹಿನ್ನಲೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ರೈತ ಸಂಘಟನೆಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಹಾಗೂ ಇತರೆ ಸಂಘಟನೆಗಳು ಮಾನವ ಸರಪಳಿಯನ್ನು ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಮತ್ತು ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ, ಕೃಷಿ ಸಾರ್ವಜನಿಕ ಕ್ಷೇತ್ರ ಸೇವೆಗಳು ಎಲ್ಲವನ್ನು ಕಾರ್ಪೊರೇಟ್‍ಗಳ ಲಾಭಕ್ಕೆ ಬದಲಾಯಿಸುತ್ತಿದ್ದು, ಆದೇಶಗಳು ಸುಗ್ರೀವಾಜ್ಞೆಗಳ ಮೂಲಕ ರೈತರು ಮತ್ತು ಕಾರ್ಮಿಕರ ಬದುಕನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಕೈ ಹಾಕಿದೆ. ಹೋರಾಟಗಾರರ ಮೇಲೆ ಕೇಸುಗಳನ್ನು ದಾಖಲಿಸುತ್ತಾ, ಕಿರುಕುಳ ನೀಡುತ್ತಿರುವುದು ನಮ್ಮನ್ನು ಹೋರಾಟದ ಮೂಲಕ ಹಿಂದೆ ಸರಿಸುವ ಹುನ್ನಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಕಳೆದ 6 ತಿಂಗಳಿನಿಂದ ವಿಶ್ವ ವ್ಯಾಪ್ತಿ ಹಬ್ಬಿರುವ ಈ ಕೊರೊನಾ ವೈರಾಣು ದಿನೇ ದಿನೇ ವ್ಯಾಪಕವಾಗಿ ಹಬ್ಬಿ ಜನರ ಜೀವನ್ನು ತೆಗೆಯುತ್ತಿದ್ದು, ದೇಶದ ಆರ್ಥಿಕ ಪರಿಸ್ಥಿತಿ ದುಸ್ಥಿತಿಗೆ ದುಮುಕಿದೆ. ಲಾಕ್‍ಡೌನ್ ಆರಂಭದಿಂದ ಇಂದಿನವರೆಗೆ ಜನರು ತುಸು ನೆಮ್ಮದಿಯಿಂದ ಇರುವುದು ಪ್ರತಿನಿತ್ಯ ಆಹಾರ ಸಿಗುತ್ತಿರುವುದರಿಂದ. ಆದರೆ ಈಗ ಬೆಳೆ ಬೆಳೆಯುವ ರೈತನಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಮಾನುಷ ರೈತ-ದಲಿತ-ಬಡವರ-ಶ್ರಮಿಕರ ವಿರೋಧಿ ನೀತಿಗಳು ಮಾರಕವಾಗಿವೆ ಎಂದರು.

ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ, ಕೇಂದ್ರದ ತಪ್ಪು ಆರ್ಥಿಕ ನೀತಿಗಳಿಂದಾಗಿ ಆರ್ಥಿಕತೆಯು ಅವೈಜ್ಞಾನಿಕ ಪರಿಹಾರ ಕ್ರಮಗಳು ಸೇರಿಕೊಂಡು ದೇಶದ ಜಿಡಿಪಿಯು ಶೇ.24ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿದೆ. ಆಧಾಯಗಳು ಕುಸಿಯುತ್ತಿದ್ದು, ಜೀವನ ಭದ್ರತೆಗಳು ದುರ್ಬಲಗೊಳ್ಳುತ್ತಿದೆ.ರೈತರಿಗೆ ಮಾರಕವಾಗಿರುವ ಈ ತಿದ್ದುಪಡಿಗಳನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ನಮ್ಮ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಬನ್ನÀಳ್ಳಿ ಸೋಮಣ್ಣ, ಜಿಲ್ಲಾ ಸಂಘಟನಾ ಸಂಚಾಲಕ ಉಮಾಮಹದೇವ್, ಸಿಐಟಿಯುನ ಆಲಗೂಡು ಸಿ. ಪುಟ್ಟಮಲ್ಲಯ್ಯ, ಕಿರಗಸೂರು ಪ್ರಸಾದ್‍ನಾಯಕ್, ಅಪ್ಪಣ್ಣ, ನಾಗರಾಜು, ನಿಂಗರಾಜು, ಕರೋಹಟ್ಟಿ ಕುಮಾರಸ್ವಾಮಿ, ಶಿವನಂಜು, ನಂಜುಂಡಸ್ವಾಮಿ, ಗೌರಿಶಂಕರ್, ಕೆ.ಜಿ. ಗುರುಸ್ವಾಮಿ, ಕುಮಾರ್, ರವಿ, ಸುಬ್ರಹ್ಮಣ್ಯ, ಲೋಕೇಶ್, ಅಂಕಪ್ಪ, ಶಶಿಕಾಂತ್, ಅಂಗಡಿ ಮಾದೇಶ್, ಸಂತೃಪ್ತಿ ಕುಮಾರ್, ರೇವಣ್ಣ ಸೇರಿದಂತೆ ಇತರರು ಇದ್ದರು.

ಪಟ್ಟಣದಲ್ಲಿ ವ್ಯಾಪಾರ-ವಾಣಿಜ್ಯ-ವಹಿವಾಟು-ಸಾರಿಗೆ-ಆಟೋ-ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರಿಂದ ಟಿ. ನರಸೀಪುರದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version