ದಿನದ ಸುದ್ದಿ
ಸಂಪುಟ ವಿಸ್ತರಣೆ : ಬಿಜೆಪಿ ಶಾಸಕರಲ್ಲಿ ಅಸಮಾಧಾನ
ಸುದ್ದಿದಿನ,ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ 17 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಸಚಿವಾಕಾಂಕ್ಷಿ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇಂದು ರಾಜಭವನದಲ್ಲಿ ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಕೆಲ ಬಿಜೆಪಿ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಎಂ.ಪಿ.ರೇಣುಕಾಚಾರ್ಯ, ಉಮೇಶ್ ಕತ್ತಿ, ತಿಪ್ಪಾರಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಎಸ್.ಎ.ರಾಮದಾಸ್, ಶಿವನಗೌಡ ನಾಯಕ, ಕೆ.ಜಿ.ಭೋಪಯ್ಯ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಶಾಸಕರಾದ ತಿಪ್ಪಾರಡ್ಡಿ ಹಾಗೂ ಗೂಳಿ ಹಟ್ಟಿ ಶೇಖರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಹುಸಿಗೊಳಿಸಿದ ಕಾರಣ ಪಕ್ಷದ ಮುಖಂಡರ ನಡೆಯನ್ನು ಖಂಡಿಸಿದ್ದಾರೆ. ಈ ನಡುವೆ ರಾಜೂ ಗೌಡ ಕೂಡ ಬೆಂಬಲಿಗರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.