ದಿನದ ಸುದ್ದಿ

‘ಸರಕಾರ’ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಯಾಗಬಾರದು

Published

on

  • ಬಿ.ಪೀರ್ ಬಾಷ

ಮುಖ್ಯಮಂತ್ರಿ, ಸಾರಿಗೆ ಮಂತ್ರಿಗಳೇ;
ಹಣಗಳಿಸಲು ಸರಕಾರದಿಂದ ಬೇರೆ ವ್ಯಾಪಾರ ನಡೆಸಿ, ಬಡವರ ಒಡಲಿಗೆ ಬೆಂಕಿ ಇಡಬೇಡಿ.

ಕರೊನಾ ಎಂಬ ಸಿರಿವಂತರು ಹುಟ್ಡಿಸಿದ ಮಾರಿಬೇನೆಗೆ ಬಡವರು ಒಡಲು ಬೆಂದು ಹೋಗುತ್ತಿದೆ. ಹಾಗೆ ದುಡುತ್ತಿರುವ ಒಡಲಿಗೆ ಕೊಳ್ಳಿ ತಿವಿಯುವ ಕೆಲಸ ಬಹುಶಃ ಕಳ್ಳನೂ, ಕಟುಕನೂ, ಕಡುಪಾಪಿಯೂ ಮಾಡಲಾರ. ಆದರೆ ನಮ್ಮ ಸರಕಾರ ಏನು ಮಾಡುತ್ತಿದೆ?

ಎರಡು ಹೊತ್ತಿನ ತುತ್ತನ್ನು ಗಳಿಸಿಕೊಳ್ಳಲು ಬೆಂಗಳೂರಿಗೆ ಬಂದು, ಕಂಡಲ್ಲಿ ಜೋಪಡಿ ಕಟ್ಟಿಕೊಂಡು, ಕಲ್ಲು ಹೂಡಿ ಒಲೆಮಾಡಿ ಅನ್ನದಕಾಳು ಕುಚ್ಚಿಕೊಂಡು ಉಂಡು ಮಲಗುತ್ತಿದ್ದ ಕೂಲಿ ಸಾವಿರಾರು ಕಾರ್ಮಿಕರು ಲಾಕ್‌ಡೌನ್ ಆದ ಕ್ಷಣದಿಂದ ತತ್ತರಿಸಿಹೋಗಿದ್ದಾರೆ. ಅವರವರ ಹಳ್ಳಿಗಳಲ್ಲಿದ್ದಿದ್ದರೆ ಗಂಜಿ ಕುಡಿದು ಅಂಗಳದಲ್ಲಾದರೂ ಮಲಗುವ ಸಮಾಧಾನವಾದರೂ ಇರುತ್ತಿತ್ತು. ಇಲ್ಲಿ ಈ ಶಹರದಲ್ಲಿ, ಹಗಲು ಕೂಲಿಯಿಲ್ಲವೆಂದರೆ ರಾತ್ರಿ ಊಟವಿಲ್ಲ, ಇಂತಹ ಸ್ಥಿತಿಯಿರುವಾಗ ಕಳೆದ ಸು. ಒಂದೂವರೆ ತಿಂಗಳಿನಿಂದ ಅದು ಹೇಗೆ ಬದುಕಿರಬಹುದು? ಅವರ ಕಣ್ಣುಗಳಿಂದ ಅದೆಷ್ಟು ನೀರು ಹರಿದಿರಬಹುದು? ಹಸಿದು ಅಳುವ ಮಕ್ಕಳನ್ನು ಹೇಗೆ ಸುಮ್ಮನಿರಿಸಿರಬಹುದು?

ಹೇಗಾದರೂ ಮಾಡಿ ಊರು ಮುಟ್ಟಿದರೆ ಸಾಕೆಂದು, ಲೆಕ್ಕಹಾಕಿ ಸರಿಯಾಗಿ ಬಸ್ ಚಾರ್ಜ್ ಗೆ ಆಗುವಷ್ಟು ಹಣವನ್ನು ಸೀರೆ ಸೆರಗಿನಲ್ಲಿ, ಸೊಂಟದ ಮಡಿಕೆಯಲ್ಲಿ ಗಂಟು ಗಂಟಿಕೊಂಡು ಊರಿಗೆ ಹೋಗಬಹುದು ಎಂಬ ಸುದ್ದಿ ಕೇಳುತ್ತಲೇ ಬಸ್ಟ್ಯಾಂಡಿಗೆ ಬಂದರೆ ಇಲ್ಲಿ ದುಪ್ಪಟ್ಟು, ಮೂರುಪಟ್ಟು ಬಸ್ ಚಾರ್ಜ್ ಎಂದು ಹೇಳಿದರೆ ಅವರಿಗೆ ಎಷ್ಟು ಸಂಕಟವಾಗಿರಲಿಕ್ಕಿಲ್ಲ. ಬೆಳಗಾವಿಗೆ 800ಬಾಗಲಕೋಟೆಗೆ 700 ರೂ ಇದ್ದ ಬಸ್ ಚಾರ್ಜು, ಏಕಾಏಕಿ ಬೆಳಗಾವಿಗೆ1478 ಬಾಗಲಕೋಟೆಗೆ 1311ಎಂದರೆ ಇದು, ಹಸಿದ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಗಿಂತಲೂ ಕೀಳಾದ ಕೆಲಸವಲ್ಲವೇ?

ಆನಂದ್ ಸಿಂಗ್ ರಂತಹ ಧಣಿಗಳು ವಿಮಾನವನ್ನೇ ಬಾಡಿಗೆಗೆ ಪಡೆದು ವಿದೇಶದಲ್ಲಿದ್ದ ಮಕ್ಕಳನ್ನು ಕರೆದುಕೊಂಡು ಬಂದರು. ದೇಶದ ಸರಕಾರವೂ ಲಕ್ಷಾಂತರ ಸಂಬಳ ಪಡೆಯುವವರನ್ನು, ಕೋಟ್ಯಾಂತರ ತೆರಿಗೆ ಕಟ್ಟುವವರನ್ನು ವಿಶೇಷ ವಿಮಾನಗಳಿಂದ ಕರೆತರುವ ಪ್ರಯತ್ನವನ್ನೂ ಮಾಡೀತು? ಆದರೆ ಈ ಬಡಜೀವಿಗಳ ಇವರಿಗ್ಯಾವ ಲೆಕ್ಕ? ಸತ್ತರೆ ಮರ್ಯಾದೆ ಹೋದೀತೆಂಬ ಕಾರಣಕ್ಕೆ ಅಗ್ಗದ ರೇಷನನ್ನು ಕೊಡುವಂತೆ ಮಾಡಿ ಫೋಟೋ ತೆಗೆದಿಕೊಂಡರೆ ಸಾಕು ಜನೋಪಕಾರಿಯೆಂದು ಹೇಳಿಕೊಳ್ಳಲು. ಇನ್ನು ಬೆಂಗಳೂರೆಂಬ ಮಾಯಾನಗರದಲ್ಲಿ ಬದುಕೆಂಬ ಬದುಕೇ ಮೂರಾಬಟ್ಟೆಯಾಗಿ ಬಿಸಿಲಲ್ಲಿ ಬಾಡಿ ಗಾಳಿಪಾಲಾಗಿ ಕಸದಗುಂಟ ಹರಿದು ಹಂಚಿಹೋಗಿರುವ ಹೊತ್ತು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಿಗೆ ಇಂಥವರ ಬಗ್ಗೆ ಖಬರು ಇಲ್ಲವೆಂದರೆ ಏನು ಮಾಡಬೇಕು?

ಇಂಥ ಕೂಲಿ ಕಾರ್ಮಿಕರ ಸಂಖ್ಯೆ ಈಗ ದೇಶದಲ್ಲಿ ಹದಿನೈದಿಪ್ಪತ್ತು ಕೋಟಿಗೂ ಹೆಚ್ಚು. ಇವರು ಈಗ ಟಿ.ವಿ.ಚಾನೆಲುಗಳಿಗೆ ಸುದ್ದಿಯ ವಸ್ತುವಲ್ಲ. ಅವರಿಗಿರುವ ಉಮೇದಿಯೇ ಬೇರೆ. ಇನ್ನು ಸರಕಾರಗಳಿಗೆ ಕಾಪಾಡಬೇಕಿರುವುದು ಯಾರ ಹಿತಾಸಕ್ತಿಯನ್ನು? ಅದೂ ಆಗಿಯೇ ಹೋಯಿತು! ಸಾವಿರಾರು ಕೋಟಿ ಲೂಟಿಯೂ ಮಾಫ್ ಆಯಿತು!!

ಆದರೆ ಇಂಥ ವಿಶ್ವಜಗದ್ಗುರು ಮಹಾನುಭಾವರು ಅವರ ಪಟಾಲಂಗಳ ಸರಕಾರಗಳಿಗೆ ಕೂಲಿಕಾರ್ಮಿಕರನ್ನು ಉಚಿತವಾಗಿ ಅವರವರ ಮನೆಗಳಿಗೆ ಸರಕಾರಿ ಬಸ್ಸಿನಲ್ಲಿ ಮನೆ ಸೇರಿಸುವ ಯೋಗ್ಯತೆಯೂ ಇಲ್ಲದಾಯಿತೇ? ನಾಚಿಕೆಗೇಡು! ಅದು ಹೋಗಲಿ, ಇಂತಹ ಹೊತ್ತಿನಲ್ಲಿ ಬಸ್ ಚಾರ್ಜ್ ಪಡೆದು ಬಸ್ ಹತ್ತಿಸಿಕೊಂಡರೂ ನಾಚಿಕೆಗೇಡೇ ಆದರೂ ಇನ್ನು ಡಬಲ್ ತ್ರಿಪಲ್ ಚಾರ್ಜು ಪೀಕುತ್ತಾರೆ ಎಂದರೆ ಇದೊಂದು ಸರಕಾರವಾ ಅಥವಾ ? ಮನುಷ್ಯತ್ವ ಇರುವ ಯಾರಿಗಾದರೂ ಸಿಟ್ಟು ಬರದೇ ಇದ್ದೀತೇ?

ಹಸಿದು ಅಳುವ ಕೂಸಿಗೆ ನಾಲ್ಕು ರೂಪಾಯಿಯ ಬಿಸ್ಕೀಟು ಕೊಡಿಸಲು ಕಣ್ಣೀರು ತಂದುಕೊಳ್ಳುತ್ತಿರುವ ತಂದೆತಾಯಿಗಳು ಅಂತಹ ಆರೇಳು ವರ್ಷದ ಮಕ್ಕಳಿಗೂ ಸಾವಿರಾರು ರೂಪಾಯಿ ಬಸ್ ಚಾರ್ಜು ಕೊಡಬೇಕು ಎಂದರೆ…ಎದೆಯೊಡೆಯದಿದ್ದೀತೇ? ಹಣವೇ ಇಲ್ಲದವರು ಏನು ಮಾಡಬೇಕು? ಅವರವರ ಊರ ಮುಖ ನೋಡದೇ ಬೀದಿ ಹೆಣವಾಗಬೇಕೇ? ಏನಾಗಿದೆ ಈ ಸರ್ಕಾರಕ್ಕೆ? ಏನು ತುಂಬಿದೆ ಈ ಅಧಿಕಾರಿಗಳ ತಲೆಯಲ್ಲಿ? ಸಾವಿರಾರು ಕೋಟಿ ಆಗಬೇಕಾದಲ್ಲಿ ಆಗಿದೆ. ಆದರೆ ಈ ನಷ್ಟವನ್ನು ಬಡವರ ಬುತ್ತಿಗಂಟು ಕಸಿದು ಭರ್ತಿ ಮಾಡಿಕೊಳ್ಳಬೇಕೇ?

ಕೊಲ್ಲುವುದಷ್ಟೇ ಅಲ್ಲ, ಸಾವೇ ಸುಖ ಎಂಬಷ್ಟು ಕಷ್ಟ ಕೊಡುವುದು ಕೊಲೆಗಿಂತಲೂ ಕ್ರೂರ ನಡವಳಿಕೆ. ಇಂತಹ ಸ್ಥಾನದಲ್ಲಿ ಈಗ ಸರಕಾರಗಳೇ ಇವೆ ಎಂಬುದು ನಿಜಕ್ಕೂ ಮಾರಿಬೇನೆಗಿಂತಲೂ ಭೀಕರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version