ರಾಜಕೀಯ
ಮಾಜಿ ಸಚಿವ ಎಚ್.ಆಂಜನೇಯ ಪ್ರತಿಷ್ಠೆ ಮಣ್ಣುಪಾಲು !
ಸುದ್ದಿದಿನ ವಿಶೇಷ: ಚಿತ್ರದುರ್ಗ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಾರುಪತ್ಯ ಸಾಧಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ತೀವ್ರ ಮುಖಭಂಗವಾಗಿದೆ.
ಚಿತ್ರದುರ್ಗ ನಗರಸಭೆಯ 32ರಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಸಿ.ತಾರಕೇಶ್ವರಿ ಗೆಲುವು ಸಾಧಿಸಿದ್ದು, ಮಾಜಿ ಸಚಿವರ ಪ್ರತಿಷ್ಠೆ ಮಣ್ಣು ಪಾಲಾಗಿದೆ. ಮಾಜಿ ಸಚಿವರು ವಿಶೇಷವಾಗಿ ಗಮನ ಹರಿಸಿದ್ದ ಕ್ಷೇತ್ರದಲ್ಲಿ ಗೆಲವು ಸಾಧಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಆದರೆ ಕೊನೆಗೆ ಬಿಜೆಪಿ ಅಭ್ಯರ್ಥಿ ಗೆಲುವಿನಿಂದ ನಿರಾಸೆ ಮೂಡಿಸಿದೆ.
ಹಿಂದೆ ಕಾಂಗ್ರೆಸ್‍ನ ಭದ್ರ ಕೋಟೆ ಎಂದು ಬಿಂಬಿತವಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಕಮಲ ಪಕ್ಷ ಎಲ್ಲೆಲ್ಲೂ ಅರಳಿ ನಿಂತಿದೆ. ಅತ್ತ ಹೊಸದುರ್ಗದಲ್ಲಿ ಕೂಡ ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದ ಬಿಜೆಪಿ ಪಕ್ಷ ತನ್ನ ಪ್ರಾಬಲ್ಯ ಸಾಧಿಸಿದೆ.
ಈ ಬಾರಿಯ ಮೂರು ಸ್ಥಳೀಯ ಸಂಸ್ಥೆಗಳ ಪೈಕಿ ಎರಡರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಾಯಕರಾದ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜ್ ಸೇರಿದಂತೆ ಹಲವರ ಶ್ರಮ ಹೇಳ ಹೆಸರಿಲ್ಲದಂತಾಗಿದೆ.