ದಿನದ ಸುದ್ದಿ
ಜ. 23 ರಂದು ಮಾಧ್ಯಮ ಅಕಾಡೆಮಿಯಿಂದ ಮೌಲಿಕ ಕೃತಿಗಳ ಲೋಕಾರ್ಪಣೆ
ನೂತನ ಹೆಜ್ಜೆಗೆ ಸಾಕ್ಷಿಯಾಗಲಿದೆ ಈ ಪ್ರಶಸ್ತಿ ಪ್ರದಾನ ಸಮಾರಂಭ
ಸುದ್ದಿದಿನ,ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ಇದೇ ತಿಂಗಳು 23ರಂದು ಆಯೋಜಿಸಿರುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಹೊಸದೊಂದು ವೈಚಾರಿಕ ಹೆಜ್ಜೆಗೆ ಸಾಕ್ಷಿಯಾಗಲಿದೆ. ಕನ್ನಡದ ಸಮೂಹ ಮಾಧ್ಯಮಗಳ ಸಮಗ್ರ ವಿಶ್ಲೇಷಣೆಯನ್ನು ಒಳಗೊಂಡ ಹತ್ತು ಮೌಲಿಕ ಕೃತಿಗಳ ಬಿಡುಗಡೆಗೂ ಅದು ವೇದಿಕೆಯಾಗಲಿದೆ.
ಸಮೂಹ ಮಾಧ್ಯಮ ವಲಯ ವಿವಿಧ ಕಾಲಘಟ್ಟಗಳನ್ನು ಹಾದು ಬೆಳವಣಿಗೆಯ ಹಾದಿ ಕ್ರಮಿಸುತ್ತಿರುವಾಗ ಶೈಕ್ಷಣಿಕ ಪ್ರಾಯೋಗಿಕತೆ ಮತ್ತು ತಾತ್ವಿಕ ವಿಮರ್ಶಾತ್ಮಕ ದೃಷ್ಟಿಕೋನದ ಕೃತಿಗಳ ಕೊರತೆ ಇರುವುದನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಹೊಸ ಹೆಜ್ಜೆಯಿರಿಸಲು ತೀರ್ಮಾನಿಸಿತು. ಕನ್ನಡದ ಹತ್ತು ಲೇಖಕರನ್ನು ಆಯ್ದು ಅವರಿಂದ ವಿವಿಧ ಶೀರ್ಷಿಕೆಗಳಡಿ ಕೃತಿಗಳನ್ನು ಬರೆಸಿತು. ಆ ಕೃತಿಗಳು 2018ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿವೆ.
ಪತ್ರಿಕೋದ್ಯಮ ಮತ್ತು ವಾಸ್ತವ (ಡಾ.ಎನ್.ಕೆ.ಪದ್ಮನಾಭ), ಪತ್ರಿಕೋದ್ಯಮ ಮತ್ತು ಸಾಹಿತ್ಯ (ಶಿ.ಜು.ಪಾಶ), ದೃಶ್ಯ ಮಾಧ್ಯಮಗಳ ಜವಾಬ್ದಾರಿ ಮತ್ತು ವಿಶ್ವಾಸಾರ್ಹತೆ (ಕೆ.ದೀಪಕ್), ಕನ್ನಡದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ (ರಮೇಶ್ ಅರೋಲಿ), ಪರಿಸರ ಪತ್ರಿಕೋದ್ಯಮ (ಸ.ಗಿರಿಜಾಶಂಕರ), ಮಾನನಷ್ಟ ಮೊಕದ್ದಮೆ (ಎಂ.ಟಿ.ಶಿವಕುಮಾರ್), ಪತ್ರಿಕಾ ಮಾಧ್ಯಮದ ವಾಣಿಜ್ಯಿಕ ಆಯಾಮ (ಡಾ.ಕೂಡ್ಲಿ ಗುರುರಾಜ), ಸುದ್ದಿ ಮಾಧ್ಯಮ ಮತ್ತು ಮಹಿಳೆ (ಜ್ಯೋತಿ ಇರ್ವತ್ತೂರು), ಕೃಷಿ ಪತ್ರಿಕೋದ್ಯಮ (ಚಿನ್ನಸ್ವಾಮಿ ವಡ್ಡಗೆರೆ), ಗ್ರಾಮೀಣ ವರದಿಗಾರಿಕೆ (ಮಂಜುನಾಥ ಬೊಮ್ಮನಕಟ್ಟೆ) ಬಿಡುಗಡೆಯಾಗಲಿರುವ ಕೃತಿಗಳು.
ವಿದ್ಯಾರ್ಥಿ ಸಮುದಾಯ ಮತ್ತು ಆಸಕ್ತರನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಧ್ಯಮಗಳ ಕುರಿತಾದ ವಿಮರ್ಶಾತ್ಮಕ ದೃಷ್ಟಿಕೋನದ ಕೃತಿಗಳನ್ನು ಹೊರತರುವ ಯೋಜನೆಯನ್ನು ರೂಪಿಸಲಾಯಿತು. ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೊಳಗೆ ತಾರ್ಕಿಕ ದೃಷ್ಟಿಕೋನ ನೆಲೆಗೊಳಿಸುವ ಉದ್ದೇಶ ಈ ಯೋಜನೆಯ ಹಿಂದಿತ್ತು. ಆ ಯೋಜನೆಯು ಇದೀಗ ಕೃತಿಗಳ ರೂಪದಲ್ಲಿ ಅನುಷ್ಠಾನಕ್ಕೆ ಬಂದಿದೆ. ಇದೇ ತಿಂಗಳು 23ರಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಜೆ 5.30ಕ್ಕೆ ಏರ್ಪಡಲಿರುವ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಈ ಕೃತಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಎಂ.ಸಿದ್ದರಾಜು ಅವರು.
ಪುಸ್ತಕ ಪ್ರಕಟಣೆಯ ಉಪಸಮಿತಿಯನ್ನು ಪ್ರತಿನಿಧಿಸಿದ ಅಕಾಡೆಮಿಯ ಸದಸ್ಯರೂ, ಹಿರಿಯ ಪತ್ರಕರ್ತರೂ ಆದ ರುದ್ರಣ್ಣ ಹರ್ತಿಕೋಟೆ, ಎನ್.ರವಿಕುಮಾರ್ ಶಿವಮೊಗ್ಗ ಅವರು ಹೊಸ ಪುಸ್ತಕಗಳನ್ನು ಹೊರತರುವಲ್ಲಿ ಬಹುವಾಗಿ ಶ್ರಮಿಸಿದ್ದಾರೆ ಎಂದು ಸಿದ್ಧರಾಜು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಲೇಖಕರು, ಕೃತಿಗಳ ಮುಖಪುಟ ವಿನ್ಯಾಸ ಮಾಡಿದ ಸುಧಾಕರ ದರ್ಬೆ, ಪುಸ್ತಕ ಪ್ರಕಟಣೆಯ ಉಪಸಮಿತಿ ಸದಸ್ಯರು, ಅಕಾಡೆಮಿಯ ಸದಸ್ಯರು, ಅಕಾಡೆಮಿಯ ಹಿಂದಿನ ಕಾರ್ಯದರ್ಶಿ ಎಸ್.ಶಂಕರಪ್ಪ, ಈಗಿನ ಕಾರ್ಯದರ್ಶಿ ಸಿ.ರೂಪಾ ಅವರ ಶ್ರಮದ ಕುರಿತೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ, ಮಾಜಿ ಸಚಿವರೂ, ಶಾಸಕರೂ ಆದ ಆರ್.ರೋಷನ್ ಬೇಗ್ ಸಮಕ್ಷಮದಲ್ಲಿ ಈ ಹತ್ತು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಮಾಧ್ಯಮಗಳ ಕುರಿತು ಭಿನ್ನ ಆಲೋಚನೆಗಳನ್ನು ಒಳಗೊಂಡ ಕೃತಿಗಳನ್ನು ಹೊರತರುವ ಪರಿಕಲ್ಪನೆಯ ಕನಸು ಈ ಸಮಾರಂಭದ ಮೂಲಕ ಸಾಕಾರಗೊಳ್ಳುತ್ತಿರುವುದು ಖುಷಿಯ ಸಂಗತಿ. ಈ ಕೃತಿಗಳು ವಿದ್ಯಾರ್ಥಿಗಳು ಮತ್ತು ಆಸಕ್ತ ಓದುಗರ ಚಿಂತನೆಯನ್ನು ವಿಸ್ತರಿಸಬಲ್ಲವು ಎಂದು ಈ ಕೃತಿಗಳ ಯೋಜನೆಯ ಪ್ರಸ್ತಾವನೆಯನ್ನು ಮಂಡಿಸಿ ಪ್ರಕಟಣೆಯ ಜವಾಬ್ದಾರಿಗಳನ್ನು ನಿರ್ವಹಿಸಿದ ಅಕಾಡೆಮಿಯ ಸದಸ್ಯರೂ, ಹಿರಿಯ ಪತ್ರಕರ್ತರೂ ಆದ ಎನ್.ರವಿಕುಮಾರ್ ಶಿವಮೊಗ್ಗ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401