ರಾಜಕೀಯ

ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದು ಪಡಿ : ರಾಜ್ಯ ಸರ್ಕಾರ ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ

Published

on

ಸಾಂದರ್ಭಿಕ ಚಿತ್ರ
  • ದಿನೇಶ್ ಅಮೀನ್ ಮಟ್ಟು

ರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ,ಬಿ,ಸಿ ಮತ್ತು 80ನೇ ಕಲಮ್ ಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ.

ಕೊರೊನಾ ನಂತರದ ಬದುಕಿನ ಏಕೈಕ ಆಶಾಕಿರಣ ಕೃಷಿಕ್ಷೇತ್ರ ಎಂದು ಜ್ಞಾನೋದಯವಾಗುವ ಹೊತ್ತಿನಲ್ಲಿಯೇ ಅದನ್ನು ನಾಶ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡವಳಿಕೆ ಕೊರೊನಾ ವೈರಸ್ ಗಿಂತಲೂ ಮಾರಣಾಂತಿಕ.

ಈಗಾಗಲೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ದುರುದ್ದೇಶಪೂರಿತ ವಿದ್ಯುತ್ ಕ್ಷೇತ್ರದ ಸುಧಾರಣಾಕ್ರಮ ಮತ್ತು ಉತ್ಪಾದನಾ ವೆಚ್ಚವನ್ನೂ ಭರಿಸದ ಬೆಂಬಲ ಬೆಲೆಯ ಮೋಸದಾಟದ ಮೂಲಕ ರೈತರನ್ನು ಹಂತಹಂತವಾಗಿ ಕೃಷಿ ಬಿಟ್ಟು ಓಡಿಹೋಗುವಂತೆ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿ ಇದೀಗ ನೇರವಾಗಿ ರೈತರ ಒಕ್ಕಲೆಬ್ಬಿಸಲು ಹೊರಟಿದೆ.

ಕೃಷಿಭೂಮಿಯನ್ನು ಕೃಷಿಯೇತರ ಬಳಕೆಗಾಗಿ ಕಬಳಿಸದಂತೆ ರಕ್ಷಣೆ ನೀಡುತ್ತಿದ್ದ 79 ಎ ಮತ್ತು ಬಿ, ಕೃಷಿಕನೆಂದು ಸುಳ್ಳು ಪ್ರಮಾಣ ಪತ್ರ ನೀಡುತ್ತಿದ್ದವರನ್ನು ಶಿಕ್ಷಿಸಲು ಅವಕಾಶವಿದ್ದ 79 ಸಿ ಮತ್ತು ರೈತರಲ್ಲದವರಿಗೆ ಕೃಷಿಭೂಮಿ ಮಾರಾಟವನ್ನು ನಿಷೇಧಿಸಿದ್ದ ಕಲಂ 80 ಅನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು ಕಲಂ 80ರಲ್ಲಿ ಹೇರಲಾಗಿದ್ದ ಭೂಒಡೆತನದ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ.

ನ್ಯಾಯಾಲಯದ ಆದೇಶಗಳು ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಿಕೊಳ್ಳಲು ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿರುವ ಒಂದು ಕುಂಟುನೆಪ ಮಾತ್ರ. ನಿಜವಾದ ದುರುದ್ದೇಶ ರೈತರ ಅಸಹಾಯಕತೆ, ಅಜ್ಞಾನ ಮತ್ತು ಬಡತನವನ್ನು ದುರುಪಯೋಗ ಮಾಡಿಕೊಂಡು ಬಹುರಾಷ್ಟ್ರೀಯ ಕಂಪೆನಿಗಳ ಒಡೆಯರು, ಉದ್ಯಮಿಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳಿಗೆ ಜಮೀನು ಖರೀದಿಸಲು ನೆರವಾಗುವುದು.

ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಅಡ್ಡಾಡುತ್ತಿದ್ದ ದಿನಗಳಲ್ಲಿ ನನಗೆ ಮತ್ತೆಮತ್ತೆ ನೆನಪಾಗುತ್ತಿದ್ದದ್ದು ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ. ಫಲವತ್ತಾದ ಮಣ್ಣು, ಗಂಗೆ-ಯಮುನೆಯ ನೀರು, ಕಷ್ಟಪಟ್ಟು ದುಡಿಯುವ ಜನ ಹೀಗೆ ಎಲ್ಲವನ್ನೂ ಉತ್ತರಪ್ರದೇಶಕ್ಕೆ ಕೊಟ್ಟಿರುವ ಪ್ರಕೃತಿ ಒಬ್ಬ ದೇವರಾಜ ಅರಸುವನ್ನು ಕೊಟ್ಟಿದ್ದರೆ… ಎಂದು ನಾನು ನನ್ನ ವರದಿಗಳಲ್ಲಿ ವ್ಯಥೆ ಪಟ್ಟಿದ್ದೆ.

ಈ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಯಥಾವತ್ತಾಗಿ ಜಾರಿಗೆ ಬಂದರೆ ಮುಂದಿನ ಒಂದು ದಶಕದ ನಂತರದ ಕರ್ನಾಟಕ ಹೇಗಿರಬಹುದೆಂದು ಊಹಿಸುವುದು ಕಷ್ಟವೇನಲ್ಲ.

ಈ ತಿದ್ದುಪಡಿಗಳು ಜಾರಿಗೆ ಬಂದ ದಿನ, ದೇವರಾಜ ಅರಸು ಅವರ ನಿಜವಾದ ಸಾವಿನ ದಿನವಾಗಿರುತ್ತದೆ ಮತ್ತು ಕೃಷಿ ಕ್ಷೇತ್ರದ ಸಾವಿಗೆ ರೈತನಾಯಕನೆಂಬ ಬಿರುದಾಂಕಿತರಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಕಾರಣ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version