ದಿನದ ಸುದ್ದಿ
ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!
ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ ಕಡಿವಾಣ ಬೀಳುತ್ತಿಲ್ಲ. ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸುವಿಕೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದಾರೆ.
http://Visit : www.suddidina.com
ಕಳೆದ ನಾಲ್ಕು ವರ್ಷಗಳ ಅಂಕಿ-ಅಂಶ ಗಮನಿಸಿದರೆ ರಾಜ್ಯದಲ್ಲಿ ಒಟ್ಟು 5.67 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಬರೋಬ್ಬರಿ ₹2,361.75 ಕೋಟಿ ದಂಡ ಸಂಗ್ರಹಿಸಲಾಗಿದೆ. ಈ ಅಂಕಿ-ಅಂಶಗಳು ರಾಜ್ಯದ ರಸ್ತೆಗಳಲ್ಲಿ ನಿಯಮ ಪಾಲನೆಯ ಸವಾಲು ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸುತ್ತವೆ.
2024ರಲ್ಲಿ ಗರಿಷ್ಠ ಪ್ರಕರಣಗಳ ದಾಖಲು
ವರ್ಷವಾರು ಪ್ರಕರಣಗಳನ್ನು ಗಮನಿಸಿದರೆ, 2023ರಲ್ಲಿ 1.27 ಕೋಟಿ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1.61 ಕೋಟಿಗೆ ಏರಿಕೆಯಾಗಿದೆ. 2025ರಲ್ಲಿ 1.60 ಕೋಟಿ ಪ್ರಕರಣಗಳು ದಾಖಲಾಗಿವೆ. 2026ರಲ್ಲಿ ಇದುವರೆಗೆ 1.17 ಕೋಟಿ ಪ್ರಕರಣಗಳು ದಾಖಲಾಗಿವೆ.
ದಂಡ ಸಂಗ್ರಹದಲ್ಲೂ ವರ್ಷದಿಂದ ವರ್ಷಕ್ಕೆ ದೊಡ್ಡ ಮೊತ್ತ ದಾಖಲಾಗಿದೆ. 2023ರಲ್ಲಿ ₹684.76 ಕೋಟಿ, 2024ರಲ್ಲಿ ₹915.95 ಕೋಟಿ ದಂಡ ಸಂಗ್ರಹವಾಗಿದೆ. 2025 ಮತ್ತು 2026ರ ಅಂಕಿ-ಅಂಶಗಳಲ್ಲೂ ಗಮನಾರ್ಹ ಮೊತ್ತ ದಾಖಲಾಗಿದೆ.
ನಿಯಮ ಉಲ್ಲಂಘನೆಗೆ ಕಠಿಣ ಕಾನೂನು ಕ್ರಮ
ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಅಧಿನಿಯಮದ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾಗದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದರ ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು, ಕೆಎಸ್‌ಆರ್‌ಟಿಸಿ, ಖಾಸಗಿ ಹಾಗೂ ಶಾಲಾ ಬಸ್ ಚಾಲಕರು ಸೇರಿದಂತೆ ವಿವಿಧ ವರ್ಗದ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣವೂ ಜಾಗೃತಿಯ ವೇದಿಕೆ
ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಮೂಲಕವೂ ಸಂಚಾರ ನಿಯಮ ಪಾಲನೆಯ ಮಹತ್ವವನ್ನು ಜನರಿಗೆ ತಲುಪಿಸಲಾಗುತ್ತಿದೆ. ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳ ಕುರಿತು ಪೋಸ್ಟರ್‌ಗಳು ಹಾಗೂ ಜಾಗೃತಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.
ದಂಡದ ಹಣ ಎಲ್ಲಿ ಹೋಗುತ್ತದೆ?
ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗುವ ದಂಡದ ಮೊತ್ತ ಸರ್ಕಾರದ ಸಂಬಂಧಿತ ಲೆಕ್ಕ ಶೀರ್ಷಿಕೆಗೆ ಜಮೆಯಾಗುತ್ತದೆ. ಸಂಚಾರ ಪೊಲೀಸ್ ವಿಭಾಗಕ್ಕೆ ಈ ಹಣವನ್ನು ಸ್ವತಂತ್ರವಾಗಿ ಬಳಸುವ ಅಧಿಕಾರವಿಲ್ಲ. ಸರ್ಕಾರದ ಆದೇಶದಂತೆ ಸಂಗ್ರಹವಾಗುವ ದಂಡದ ಶೇ.50ರಷ್ಟು ಅನುದಾನವನ್ನು ರಸ್ತೆ ಸುರಕ್ಷತಾ ಕಾರ್ಯಗಳಿಗೆ ಬಳಸಲಾಗುತ್ತಿದೆ.