ದಿನದ ಸುದ್ದಿ
ಕೆ.ಸಿ ವ್ಯಾಲಿ ನೀರು ಕೋಲಾರ ಜಿಲ್ಲೆಗೆ ವರದಾನ : ಜಿಲ್ಲಾಧಿಕಾರಿ ಜೆ. ಮಂಜುನಾಥ್
ಸುದ್ದಿದಿನ,ಕೋಲಾರ : ಕೋಲಾರವು ಬರ ಪೀಡಿತ ಜಿಲ್ಲೆಯಾಗಿದ್ದು, ನೀರಿನ ಸಂಪನ್ಮೂಲಗಳ ಕೊರತೆ ಇದ್ದು, ನೀರಿನ ಮರುಪೂರಣ ಮಾಡುವ ಕೆಸಿ ವ್ಯಾಲಿ ಯೋಜನೆಯು ಜಿಲ್ಲೆಗೆ ವರದಾನವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದರು.
ಇಂದು ಕೆ.ಸಿ ವ್ಯಾಲಿ ನೀರಿನಿಂದ ತುಂಬಿರುವ ಕೆರೆಗಳಾದ ಸೀಗೇಹಳ್ಳಿ ಕೆರೆ, ನರಸಾಪುರ ಕೆರೆ ಹಾಗೂ ಡಿಸಿ ಪಾಯಿಂಟ್ ಆದ ಲಕ್ಷ್ಮೀಸಾಗರ ಕೆರೆಗೆ ಭೇಟಿ ನೀಡಿ ಅವರು ಮಾತನಾಡಿದರು. ಕೋಲಾರ ಜಿಲ್ಲೆಯ ಅಂತರ್ಜಲ ಮಟ್ಟ 1500 ಅಡಿಯಾಳಕ್ಕೆ ಕುಸಿದಿದ್ದು, ಕೆಸಿ ವ್ಯಾಲಿ ನೀರಿನಿಂದ ಅಂತರ್ಜಲ ಮಟ್ಟ ಉತ್ತಮಗೊಳ್ಳಲಿದೆ. ಜಿಲ್ಲೆಯ 126 ಕೆರೆಗಳಿಗೆ ಕೆ.ಸಿವ್ಯಾಲಿ ನೀರು ಹರಿಯಲಿದ್ದು, ಇದರಿಂದ ಕೊಳವೆಬಾವಿಗಳಲ್ಲಿ ಉತ್ತಮವಾಗಿ ನೀರು ಸಿಗುವಂತಾಗುತ್ತದೆ. ಇದರಿಂದ ಜಿಲ್ಲೆಯಲ್ಲಿ ಕೃಷಿಕರ ಬದುಕು ಹಸನಾಗಲಿದೆ ಎಂದು ತಿಳಿಸಿದರು.
ಕೆಸಿವ್ಯಾಲಿ ನೀರು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಪ್ರತಿನಿತ್ಯ ಇದರ ಸ್ಯಾಂಪಲ್ ತೆಗೆದು 5 ಪ್ಯಾರಾಮೀಟರ್‍ನ್ನು ಸ್ಥಳದಲ್ಲಿಯೇ ಪರೀಕ್ಷಿಸುವರು. ತಿಂಗಳಿಗೆ ಕನಿಷ್ಠ 33 ಪ್ಯಾರಾಮೀಟರ್ ಪರೀಕ್ಷಿಸಲಾಗುವುದು. ಆದ್ದರಿಂದ ಜನರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಈಗಾಗಲೇ 14 ಕೆರೆಗಳು ತುಂಬಿವೆ. ಪ್ರತಿ ಕೆರೆಗೂ ಶೇ. 60 ರಿಂದ 70 ರಷ್ಟು ನೀರನ್ನು ತುಂಬಿಸಲಾಗುವುದು. ಎಲ್ಲಾ ಕೆರೆಗಳು ತುಂಬಿದ ನಂತರ ಶೇ. 100 ರಷ್ಟು ನೀರನ್ನು ಕೆರೆಗಳಲ್ಲಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಕೆ.ಸಿ ವ್ಯಾಲಿ ನೀರು ಹರಿಯುವ ಎಲ್ಲಾ ರಾಜಕಾಲುವೆಗಳನ್ನು ತೆರವುಗೊಳಿಸಿ ಶುಚಿಗೊಳಿಸಲಾಗುತ್ತಿದೆ. ನರಸಾಪುರ ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ತೆಗೆಸಲಾಗುತ್ತಿದೆ. ಪ್ರತಿನಿತ್ಯ 250 ಎಂ.ಎಲ್.ಡಿ ನೀರು ಪಂಪಾಗುತ್ತಿದೆ. ಜಿಲ್ಲೆಯ ಎಲ್ಲಾ ಕೆರೆಗಳು ತುಂಬುವವರೆಗೆ ಕೆರೆ ನೀರನ್ನು ಪಂಪು ಮೋಟಾರುಗಳನ್ನು ಬಳಸಿ ವ್ಯವಸಾಯಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ತಿಮ್ಮೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಂ.ಕೃಷ್ಣ, ಸಹಾಯಕ ಅಭಿಯಂತರರಾದ ಅಶೋಕ್ ಭಾಗಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ನಾರಾಯಣಸ್ವಾಮಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243