ದಿನದ ಸುದ್ದಿ
ದೇಗುಲದಲ್ಲೇ ನಡೀತು ಈದ್ ನಮಾಜ್; ಭ್ರಾತೃತ್ವ ಮೆರೆದ ಹಿಂದುಗಳು
ಸುದ್ದಿದಿನ ಡೆಸ್ಕ್: ಸಾಮಾನ್ಯವಾಗಿ ಮಸೀದಿಯಲ್ಲಿ ನಮಾಜ್, ಹಬ್ಬದಲ್ಲಿ ಈದ್ಗಾ ಮೈದಾನಗಳಲ್ಲಿ ನಮಾಜ್ ಮಾಡಲಾಗುತ್ತದೆ. ಮಹಾಮಳೆಯಲ್ಲಿ ಮನೆ, ಮಠ ಕೊಚ್ಚಿಕೊಂಡು ಹೋಗಿರುವ ಕೇರಳದ ದೇಗುಲವೊಂದರಲ್ಲಿ ನಮಾಜ್ ಮಾಡಲು ಅವಕಾಶ ನೀಡಿ ಹಿಂದುಗಳು ಭ್ರಾತೃತ್ವ ಮೆರೆದಿದ್ದಾರೆ.
ತ್ರಿಶೂರ್ ಜಿಲ್ಲೆಯ ಈರವತ್ತೂರು ಹತ್ತಿರದ ಮಲ ಗ್ರಾಮದ ಪುರಪುಲಿಕ್ಕವು ರತ್ನೇಶ್ವರಿ ದೇವಸ್ಥಾನದಲ್ಲಿ ಬಕ್ರೀದ್ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟು ಸೌಹಾರ್ದತೆ ಮೆರೆಯಲಾಗಿದೆ. ತ್ರಿಶೂರ್ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಕೊಚುಕೊಡವು, ಇರವತ್ತೂರು ಗ್ರಾಮಗಳು ಪ್ರವಾಹ ಪೀಡಿತ ಪ್ರದೇಶಗಳಾಗಿವೆ. ಇಲ್ಲಿನ ಮನೆ, ಮಠ, ಆಸ್ತಿ ಪಾಸ್ತಿ ಸಾಕಷ್ಟು ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮಸೀದಿಗಳು ನೀರಿನಲ್ಲಿ ಮುಳುಗಡೆ ಆಗಿದ್ದರಿಂದ ದೇವಸ್ಥಾನಗಳಲ್ಲಿ 200ಕ್ಕೂ ಅಧಿಕ ಮುಸ್ಲಿಮರು ಬಕ್ರೀದ್ ಪ್ರಾರ್ಥನೆ ಸಲ್ಲಿಸಲಾಯಿತು.
ಮಸೀದಿಯಲ್ಲಿ ಆಶ್ರಯ ಪಡೆದ ಹಿಂದುಗಳು:
ಮಲಪ್ಪುರಂ ಜಿಲ್ಲೆಯ ಮಸೀದಿಯೊಂದರಲ್ಲಿ ಹಿಂದುಗಳು ಆಶ್ರಯ ಪಡೆದುಕೊಂಡಿದ್ದಾರೆ. ಮುಸ್ಲಿಂ ಸಮುದಾಯದವರು ಎರಡು ದೇವಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ. ಇನ್ನು ಕೆಲವು ಕಡೆ ಮಸೀದಿ, ದೇಗುಲಗಳಲ್ಲಿ ಟ್ರಸ್ಟ್ ಸಮಿತಿಗಳು ಜಾತಿ, ಧರ್ಮ ಭೇದ ಇಲ್ಲದೆ ಆಶ್ರಯ ನೀಡಿವೆೆ.