ಕ್ರೀಡೆ

ಖೇಲೋ ಇಂಡಿಯಾ | ಚಿನ್ನದ ಪದಕ‌ ಗೆದ್ದವರು

Published

on

ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಮಂಗಳವಾರ ನಡೆದ ಫುಟ್ಬಾಲ್ ಪಂದ್ಯದಲ್ಲಿ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಮಹಿಳಾ ತಂಡ ಚಿನ್ನದ ಪದಕ ಗಳಿಸಿದೆ.

ಭಾರತಿಯಾರ್ ವಿಶ್ವವಿದ್ಯಾಲಯದ ತಂಡವನ್ನು 3-0ಗೋಲುಗಳಿಂದ ಸೋಲಿಸುವ ಮೂಲಕ ಮೇಲುಗೈ ಸಾಧಿಸಿತು. ಪುರುಷರ ವಾಲಿಬಾಲ್ ಫೈನಲ್ಸ್ ಪಂದ್ಯದಲ್ಲಿ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯ ತಂಡ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯ ತಂಡವನ್ನು 3 ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿ, ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.

ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಆರವ್ ಸಿಂಗ್ ದಾಗರ್ ಚಿನ್ನ, ಜಂಗಶರ್ ವಿರ್ಕ್ ಬೆಳ್ಳಿ ಮತ್ತು ಶಾರ್ದೂಲ್ ವಿಹಾನ್ ಕಂಚಿನ ಪದಕ ಗಳಿಸಿದರು. ಇದಕ್ಕೂ ಮುನ್ನ ನಡೆದ 200ಮೀ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಗುಜರಾತ್ ವಿಶ್ವವಿದ್ಯಾಲಯದ ಆರ್ಯನ್ ಪಾಂಚಾಲ್ ಚಿನ್ನ ಗೆದ್ದಿದ್ದರು. ಜೈನ್ ವಿಶ್ವವಿದ್ಯಾಲಯದ ರಾಜ್ ರೆಲೇಕರ್ ಎರಡನೇ ಸ್ಥಾನ ಪಡೆದರು.

ಎಸ್‌ಆರ್‌ಎಂ ವಿಶ್ವವಿದ್ಯಾನಿಲಯದ ವಿಕಾಸ್ ಪ್ರಭಾಕರ್ ಮೂರನೇ ಸ್ಥಾನ ಪಡೆದರು. ಮಲ್ಲಕಂಬ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಮುಂಬೈ ವಿಶ್ವವಿದ್ಯಾನಿಲಯ ಮೊದಲ ಸ್ಥಾನವನ್ನು ಗಳಿಸಿತು ಮತ್ತು ನಂತರದ ಸ್ಥಾನವನ್ನು ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ ಮತ್ತು ಸಂತ ಗಾಡ್ಗೆ ಬಾಬಾ ಅಮರಾವತಿ ವಿಶ್ವವಿದ್ಯಾಲಯವು ಗಳಿಸಿತು.

98ಕೆಜಿ ಸೀನಿಯರ್ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪುಣೆಯ ಸಾವಿತ್ರಿ ಬಾಯಿ ಫುಲೆ ವಿಶ್ವವಿದ್ಯಾಲಯದ ವೈಷ್ಣವ್ ಠಾಕೂರ್ 313ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು. ಸಂತ ಬಾಬಾ ಭಾಗ್ ಸಿಂಗ್ ವಿಶ್ವವಿದ್ಯಾನಿಲಯದ ಗುರುಪ್ರೀತ್ ರೈಹ್ 290ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಮತ್ತು ಕಳಿಂಗ ವಿಶ್ವವಿದ್ಯಾಲಯದ ಪುನಿತ್ ಚಂದ್ರ ಸಾಹು 285ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ವಿಜೇತರಾದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version