ದಿನದ ಸುದ್ದಿ
ಕೆ.ಎಂ.ಫ್ ನ ಜಂಟಿ ನಿರ್ದೇಶಕ ಬಸವರಾಜ್ ಬಿ.ಎಂ ಅವರಿಗೆ ‘ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’
ಸುದ್ದಿದಿನಡೆಸ್ಕ್:ಕೆ.ಎಂ.ಫ್ ನ ಜಂಟಿ ನಿರ್ದೇಶಕರಾದ (ಆಡಳಿತ) ಬಸವರಾಜ್ ಬಿ.ಎಂ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ‘ ಆರ್ಯಭಟ ಅಂತರಾಷ್ಟ್ರೀಯ’ ಪ್ರಶಸ್ತಿ ನೀಡಿ ಗೌರವಿಸಿದೆ.
ಇದೇ 22 ರಂದು ಗುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಐವತ್ತರ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಗಣ್ಯರಿಗೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಬಸವರಾಜ್ ಬಿ.ಎಂ ಅವರು ಪ್ರಶಸ್ತಿ ಸ್ವೀಕರಿಸಿದರು.
ಸಮ ಸಮಾಜದ ಕನಸುಗಾರ ಬಸವರಾಜ್
ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯವರಾದ ಬಸವರಾಜ್ ಬಿ.ಎಂ ಅವರು ಎಂಬಿಎ ಪದವೀಧರರು. ಸಧ್ಯ ಅವರು ಕೆ.ಎಂ.ಫ್ ನ ಆಡಳಿತ ವಿಭಾಗದ ಜಂಟಿ ನಿರ್ದೇಶಕರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳ ಮೂಲಕ ಪ್ರಭಾವಿತರಾದ ಅವರು ತಮ್ಮ ಕೆಲಸದ ಒತ್ತಡದ ನಡುವೆಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಸಮಾನತೆ, ಅಸ್ಪೃಶ್ಯತೆ, ಅನ್ಯಾಯಗಳ ವಿರುದ್ಧ ದನಿ ಎತ್ತುತ ಸಮಸಮಾಜದ ಕನಸು ಕಂಡವರು.
ಚಿಂತಕ ಬಿ.ಗೋಪಾಲ್ ಅವರ ಪ್ರಜಾ ಪರಿವರ್ತನಾ ವೇದಿಕೆಯ ಮೂಲಕ ಹೊರಾಟಗಾರರಾದ ಎ.ಡಿ. ಈಶ್ವರಪ್ಪ ಅವರ ಜತೆಗೂಡಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು, ವ್ಯವಸ್ಥೆಯ ಅವ್ಯಸ್ಥೆ ವಿರುದ್ಧ ದನಿ ಎತ್ತುವಲ್ಲಿ ನಾನಾಗಲಿ ನಮ್ಮ ವೇದಿಕೆಯಾಗಲಿ ಯಾರ ಮುಲಾಜಿಗೂ ಒಳಗಾಗುವುದಿಲ್ಲ ಹಾಗೇ ಅಂಬೇಡ್ಕರ್ ಕಂಡ ಕನಸುಗಳನ್ನು ನನಸಾಗಿಸಲು ಸದಾ ಕಾರ್ಯಪವೃತ್ತನಾಗಿರುತ್ತೇವೆ ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ‘ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ‘ಯು ನನ್ನ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿ ನೀಡಿರುವು ಖುಷಿಯ ಸಂಗತಿಯಾಗಿದೆ ಎಂದಿದ್ದಾರೆ.
ಪ್ರಶಸ್ತಿ ಪುರಸ್ಕೃತರು
ಭಾರತಿ ವಿಷ್ಣುವರ್ಧನ್, ಜಯಮಾಲ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಚಿತ್ರ ಸಾಹಿತಿ ಕೆ.ಕಲ್ಯಾಣ್ ಸೇರಿದಂತೆ ಹಲವು ಗಣ್ಯರಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹೆಚ್.ಎಲ್.ಎನ್.ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಡಾ. ಅಶೋಕ್ ಬಿ, ಹಿಂಜಿಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243