ದಿನದ ಸುದ್ದಿ

ಸವಿತಾ ಮಹರ್ಷಿ ಮತ್ತು ಮಡಿವಾಳ ಮಾಚಿದೇವರು ಕಾಯಕ ಯೋಗಿಗಳು: ಕಣ್ಮಣಿ ಜಾಯ್

Published

on

ಸುದ್ದಿದಿನ,ಮಡಿಕೇರಿ : ಸವಿತಾ ಮಹರ್ಷಿಯವರು ಮತ್ತು ಮಡಿವಾಳ ಮಾಚಿದೇವರು, ಈ ಇಬ್ಬರು ಮಹನೀಯರು ‘ಕಾಯಕ ಯೋಗಿಗಳು’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವರ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಸವಿತಾ ಮಹರ್ಷಿ ಹಾಗೂ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸವಿತಾ ಮಹರ್ಷಿ ಅವರು ಮೂರನೇ ಶತಮಾನದಲ್ಲಿ ಮತ್ತು ಮಡಿವಾಳ ಮಾಚಿದೇವರು 12 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಬಸವಣ್ಣ ಅವರಂತೆ ಕಾಯಕ ತತ್ವದಲ್ಲಿ ನಂಬಿಕೆಯುಳ್ಳ ಇವರು, ವೃತ್ತಿಗೆ ಹೆಚ್ಚಿನ ಗೌರವ ನೀಡಿದ್ದರು. ಆ ದಿಸೆಯಲ್ಲಿ ಹಿಂದಿನವರ ಆದರ್ಶವನ್ನು ಮೈಗೂಡಿಸಿಕೊಂಡು, ಯುವಜನರು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಅನಾದಿಕಾಲದಲ್ಲಿ ಸಮಾಜ ಸುಧಾರಣೆ ಮಾಡಿದವರ ಕಾರ್ಯಗಳನ್ನು ಇಂದಿಗೂ ಸ್ಮರಿಸುತ್ತೇವೆ. ಆ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಪ್ರತಿಯೊಬ್ಬರೂ ಸ್ಮರಿಸುತ್ತಾರೆ. ಆದ್ದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲೆಯ ಜನರು ಸಂಕಷ್ಟ ಎದುರಿಸಿದ್ದಾರೆ. ಸರ್ಕಾರ ಸಂತ್ರಸ್ತರ ಸಂಕಷ್ಟವನ್ನು ನಿವಾರಿಸಲು ಶ್ರಮಿಸುತ್ತಿದೆ. ಆ ದಿಸೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕುಮಾರ ಅವರು ಮಾತನಾಡಿ ಸವಿತಾ ಎಂಬುದು ಸೃಷ್ಟಿಕರ್ತರ ಹೆಸರಾಗಿದೆ. ಜಗತ್ತಿನಲ್ಲಿ ಮೆಚ್ಚುವಂತಹ ಕಾಯಕ ಸೃಷ್ಟಿಯನ್ನು ಸೃಷ್ಟಿ ಮಾಡಿದರು ಸವಿತಾ ಸಮಾಜ ಎಂಬುದನ್ನು ಮರೆಯುವಂತಿಲ್ಲ ಎಂದರು.
ಒಬ್ಬರು ಮುಡಿ, ಮತ್ತೊಬ್ಬರು ಮಡಿ ಕಾಯಕದಲ್ಲಿ ಶ್ರೇಷ್ಠತೆಯನ್ನು ಕಂಡಿದ್ದರು. ಸಮಾಜ ಸುಧಾರಣೆಗಾಗಿ ಇವರು ಶ್ರಮಿಸಿದ್ದಾರೆ. ಮೂರನೇ ಶತಮಾನದಲ್ಲಿ ಸವಿತಾ ಸಮಾಜದವರು ಮತ್ತು ಹಾಗೆಯೇ 12 ನೇ ಶತಮಾನದಲ್ಲಿ ಮಡಿವಾಳ ಮಾಚಿದೇವರು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದರು. ವೃತ್ತಿಯನ್ನು ಗೌರವಿಸಿ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ್ದಾರೆ ಎಂದು ಅವರು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಮಾತನಾಡಿ ಸಮಾಜಕ್ಕೆ ಒಳಿತನ್ನು ಬಯಸುವ ನಿಟ್ಟಿನಲ್ಲಿ ಸವಿತಾ ಮಹರ್ಷಿಗಳು ಹಾಗೂ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದಾರೆ. ಅವರಂತೆ ನಡೆದುಕೊಳ್ಳಬೇಕು ಎಂದರು. ಮೂಡನಂಬಿಕೆಗಳನ್ನು ದೂರವಿಟ್ಟ ಸಂತ ಮಹರ್ಷಿಗಳು, ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ಭಕ್ತಿಯ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಸವಿತಾ ಹಾಗೂ ಮಡಿವಾಳ ಮಾಚಿದೇವ ಸಮಾಜದವರು ಕ್ರೀಡಾಕೂಟಗಳನ್ನು ಏರ್ಪಡಿಸಿ, ಸಂಘಟಿತರಾಗಬೇಕು ಎಂದು ಅವರು ಸಲಹೆ ಮಾಡಿದರು. ಜಿ.ಪಂ.ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ ಕಾಯಕ ನಿಷ್ಠೆಯನ್ನು ತೋರಿಸಿದವರಲ್ಲಿ ಸವಿತಾ ಹಾಗೂ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದಾರೆ ಎಂದರು.

ಸವಿತಾ ಸಮಾಜದ ಅಧ್ಯಕ್ಷರಾದ ವೆಂಕಟೇಶ್ ಅವರು ಮಾತನಾಡಿ ಸಮಾಜದ ಅಭಿವೃದ್ಧಿಗೆ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವಂತಾಗಬೇಕು ಎಂದರು. ಮಡಿವಾಳ ಸಮಾಜದ ಅಧ್ಯಕ್ಷರಾದ ಮಂಜುನಾಥ ಅವರು ಮಾತನಾಡಿ ಜಿಲ್ಲಾಡಳಿತದಿಂದ ಕನ್ನಡ ಸಂಸ್ಕøತಿ ಇಲಾಖೆ ಮೂಲಕ ಅಗತ್ಯ ಸಹಕಾರ ನೀಡಬೇಕು ಎಂದರು.

ಸತೀಶ್ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಸ್ವಾಗತಿಸಿದರು. ಕಲಾವಿದ ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು. ಮಂಜುನಾಥ್ ನಿರೂಪಿಸಿ, ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986815401

Trending

Exit mobile version