ದಿನದ ಸುದ್ದಿ
ಕೊಡಗು ಪ್ರವಾಹ | ನಿರಾಶ್ರಿತರಿಗೆ ಧೈರ್ಯ ತುಂಬಿದ ಎಚ್.ಡಿ.ಕೆ
ಸುದ್ದಿದಿನ, ಮಡಿಕೇರಿ | ನಗರದ ಮೈತ್ರಿ ಭವನದಲ್ಲಿನ ಗಂಜಿ ಕೇಂದ್ರದಲ್ಲಿರುವ ನಿರಾಶ್ರಿತರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಭೇಟಿ ಮಾಡಿ ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ನಿರಾಶ್ರಿತರು ಹೊಸ ಜೀವನ ನಡೆಸಲು ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದ್ದು, ಯಾರೂ ಸಹ ಆತಂಕಪಡಬಾರದು ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದರು.
ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿಕೊಡಲಾಗುವುದು, ನಿರಾಶ್ರಿತರಿಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ನೀಡಲಿದ್ದು, ಸರ್ಕಾರವೇ ಜವಾಬ್ದಾರಿ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ನಿರಾಶ್ರಿತರಿಗೆ ಗಂಜಿ ಕೇಂದ್ರದಲ್ಲಿ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಿರಾಶ್ರಿತರ ನೋವು ಸರ್ಕಾರಕ್ಕೆ ಅರ್ಥವಾಗುತ್ತಿದೆ. ತುಂಬಾ ಕಷ್ಟದಲ್ಲಿರುವ ನಿರಾಶ್ರಿತರೆಲ್ಲರಿಗೂ ಬದುಕು ಕಟ್ಟಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅವರು ವಿವರಿಸಿದರು.
ಎರಡು ಮೂರು ದಿನದಲ್ಲಿ ಕೊಡಗಿನ ಜಿಲ್ಲೆಗೆ ಮತ್ತೆ ಆಗಮಿಸಿ ಒಂದು ದಿನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೊಡಗಿನ ಜನತೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಪ್ರಕೃತಿಯ ಅವಕೃಪೆಗೆ ತುತ್ತಾದವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಸರ್ಕಾರ ನಿಮ್ಮ ಜೊತೆಗಿದೆ. ನಿರಾಶ್ರಿತರು ನೊಂದುಕೊಳ್ಳಬೇಡಿ. ಧೈರ್ಯವಾಗಿರಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಈ ಸಂಧರ್ಭದಲ್ಲಿ ಮಕ್ಕಂದೂರು ಗ್ರಾಮದ ನಿರಾಶ್ರಿತರೊಬ್ಬರು ಜೀವನ ನಡೆಸಲು ಅಗತ್ಯ ವ್ಯವಸ್ಥೆ ಮಾಡುವುದಕ್ಕೆ ಮುಖ್ಯಮಂತ್ರಿ ಅವರಲ್ಲಿ ಕೋರಿದರು.
ಮುಕ್ಕೋಡ್ಲು, 2ನೇ ಮೊಣ್ಣಂಗೇರಿ, ಜೋಡುಪಾಲ ಮತ್ತಿತರ ಕಡೆಗಳಲ್ಲಿ ಭೂಕುಸಿತ ಉಂಟಾಗಿ ಸಾಕಷ್ಟು ನಷ್ಟ ಉಂಟಾಗಿದೆ. ನಿರಾಶ್ರಿತರಿಗೆ ಹೊಸ ಜೀವನ ಮಾಡಲು ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಹಾಗೂ ಸರ್ಕಾರದ ಕಾರ್ಯದರ್ಶಿಗಳಾದ ಸೆಲ್ವ ಕುಮಾರ್, ಗಂಗಾರಾಮ್ ಬಡೇರಿಯಾ, ಪೊಲೀಸ್ ಉನ್ನತ ಅಧಿಕಾರಿಗಳಾದ ಕಮಲ್ ಪಂಥ್, ಭಾಸ್ಕರ್ ರಾವ್ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401