ದಿನದ ಸುದ್ದಿ

ಕೊಂಕಣ ರೈಲ್ವೆ, ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ ಮತ್ತು ಭಾರತೀಯ ರೈಲ್ವೆ ವಿಲೀನ ಪ್ರಯತ್ನ ಪ್ರಗತಿಯಲ್ಲಿ

Published

on

ಸುದ್ದಿದಿನಡೆಸ್ಕ್:ಕೊಂಕಣ ರೈಲ್ವೆ ಹಾಗೂ ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ – HMRDCL ಅನ್ನು ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಲೀನ ಪ್ರಕ್ರಿಯೆ ನಡೆದರೆ ಈ ಭಾಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಸಾಗಿದೆ ಎಂದರು. ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿ ಹಾಗೂ ರೈಲು ಮಾರ್ಗ ಅಭಿವೃದ್ಧಿಗೆ ಸಂಬಂಧಿಸಿ ವಿಸೃತ ಕಾರ್ಯಸಾಧ್ಯತಾ ವರದಿ – ಡಿಪಿಆರ್ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.

ಶಿರಾಡಿ ಘಾಟ್ ಹೆದ್ದಾರಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ – ಎನ್‌ಎಚ್‌ಎಐ ಹಾಗೂ ಶಿರಾಡಿ ಘಾಟ್‌ನಲ್ಲಿ ಪ್ರತ್ಯೇಕ ರೈಲು ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಕೂಡ ಡಿಪಿಆರ್ ಸಿದ್ಧಪಡಿಸಲು ಮುಂದಾಗಿದೆ ಎಂದು ಸಂಸದರು ತಿಳಿಸಿದರು.

ಎರಡು ಇಲಾಖೆಗಳು ಪ್ರತ್ಯೇಕವಾಗಿ ಡಿಪಿಆರ್ ಸಿದ್ಧಪಡಿಸಿದರೆ ಅನುಮೋದನೆಗೆ ಕಷ್ಟವಾಗುತ್ತದೆ. ಇದರ ಬದಲು ಎರಡು ಇಲಾಖೆಗಳು ಸೇರಿ ಒಂದೇ ಡಿಪಿಆರ್ ಸಿದ್ಧಪಡಿಸಬೇಕು. ಆಗ ಪರಿಸರ ಇಲಾಖೆಯ ನಿರಪೇಕ್ಷಣೆ ಪಡೆದುಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ ಇದರಿಂದ ಪರಿಸರ ಹಾನಿಯ ಪ್ರಮಾಣವನ್ನೂ ತಗ್ಗಿಸಲು ಸಾಧ್ಯವಾಗಲಿದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ. ಆದಾಗ್ಯೂ ಈ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಾಗಿದ್ದು, ಜಂಟಿ ಡಿಪಿಆರ್‌ನಿಂದ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸಂಸದ ಚೌಟ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version