ದಿನದ ಸುದ್ದಿ

ಕೆ.ಆರ್.ಎಸ್ ಜಲಾಶಯದ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸಂಪೂರ್ಣ ಸ್ಥಗಿತ

Published

on

ಸುದ್ದಿದಿನ,ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಇಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಕೃಷ್ಣರಾಜಸಾಗರ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಷೇಧಿಸುವಂತೆ ಪ್ರಕೃತಿ ವಿಕೋಪ ಕೇಂದ್ರ ನೀಡಿರುವ ವರದಿಯನ್ನು ಆಧರಿಸಿ ಜಿಲ್ಲಾಡಳಿತ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದರು.

ಕೃಷ್ಣರಾಜಸಾಗರ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಬಾರಿ ಸ್ಪೋಟಗಳನ್ನು ಬಳಸಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವರದಿಗಳಿವೆ. ಈ ಭಾಗದಲ್ಲಿ ಸಕ್ಷನ್ 144 ಜಾರಿಯಲ್ಲಿದ್ದರೂ ಕೂಡ ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತಂತೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ವರದಿ ನೀಡಬೇಕು ಎಂದು ತಿಳಿಸಿದರು.

ನೀರಾವರಿ ಇಲಾಖೆಯೊಂದಿಗೆ ಸಂಪರ್ಕ ಇಟ್ಟುಕೊಂಡು ಗಣಿಗಾರಿಕೆಯಿಂದ ಜಲಾಶಯಕ್ಕೆ ಆಗಬಹುದಾದ ತೊಂದರೆ ಕುರಿತಂತೆ ಸಮಗ್ರ ಅಧ್ಯಯನ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡಬೇಕು. ಸಾರ್ವಜನಿಕರು ಗಣಿಗಾರಿಕೆ ನಿಷೇಧ ಕುರಿತಂತೆ ನೀಡುವ ಯಾವುದೇ ದೂರುಗಳನ್ನು ಸಮಗ್ರವಾಗಿ ಪರಿಶೀಲಿಸಲು 3 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಕೃಷ್ಣರಾಜಸಾಗರ ವ್ಯಾಪ್ತಿಯ ಹಿನ್ನೀರಿನ ಭಾಗದಲ್ಲಿ ಕೆ.ಆರ್.ನಗರ ತಾಲೂಕು ಹೊಂದಿಕೊಂಡಂತೆ ಕೆಲವು ಗ್ರಾಮಗಳಲ್ಲಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವರದಿಗಳಿವೆ. ಈ ಕುರಿತಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗಣಿಗಾರಿಕೆ ನಿಷೇಧಿಸುವಂತೆ ಮನವಿ ಮಾಡಲಾಗುವುದು ಎಂದ ಜಿಲ್ಲಾಧಿಕಾರಿಯವರು, ಕೃಷ್ಣರಾಜಸಾಗರ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸುವ ಬಗ್ಗೆ ರೈತರು, ಜನಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಸಾಕಷ್ಟು ದೂರುಗಳನ್ನು ಮಾಧ್ಯಮಗಳ ಮೂಲಕ ಹೇಳಿರುವುದು ಗಮನಿಸಲಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್, ಗಣಿ ಭೂವಿಜ್ಞಾನ ಅಧಿಕಾರಿ ನಾಗಭೂಷಣ್ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version