ದಿನದ ಸುದ್ದಿ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ | ರಾಜ್ಯಕ್ಕೆ 1 ಸಾವಿರದ 252 ಕೋಟಿ ರೂಪಾಯಿ ಮಂಜೂರು : ಸಚಿವ ಬಿ.ಸಿ.ಪಾಟೀಲ್
ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಘಟಕ 2ಕ್ಕೆ ಕೇಂದ್ರ ಸರ್ಕಾರದಿಂದ ಒಂದು ಸಾವಿರ 252ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನಲ್ಲಿ ಜಲಾನಯನ ಅಭಿವೃದ್ಧಿ ಘಟಕ ಅನುಷ್ಠಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ 57ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಹಾವೇರಿ ಜಿಲ್ಲೆಯ 7ತಾಲೂಕಿಗೆ 69 ಕೋಟಿ 45 ಲಕ್ಷ ರೂಪಾಯಿ ಅನುದಾನ ಬಂದಿದೆ ಎಂದು ಹೇಳಿದರು.
ಹೊಲದಿಂದ ಮಣ್ಣು ಹೊರಹೋಗದಂತೆ ತಡೆಯುವುದೇ ಜಲಾನಯನ ಕಾರ್ಯಕ್ರಮದ ಮುಖ್ಯ ಉದ್ದೇಶ. ರೈತರು ಭೂಮಿಯ ತೇವಾಂಶ ಹೆಚ್ಚಿಸಲು ಕೃಷಿಹೊಂಡ, ಚೆಕ್ ಡ್ಯಾಮ್ ನಿರ್ಮಾಣ, ನೆಡುತೋಪು, ಬದುತೋಪು, ವಡ್ಡು ನಿರ್ಮಾಣ ಮಾಡಬೇಕು ಎಂದರು. ರೈತರು ತಮ್ಮ ಜಮೀನಿನಲ್ಲಿ ಎಲೆಗೊಬ್ಬರ, ಎರೆಹುಳುಗೊಬ್ಬರ, ಕೊಟ್ಟಿಗೆಗೊಬ್ಬರವನ್ನು ಹೆಚ್ಚಾಗಿ ಬಳಸಬೇಕೆಂದು ಸಚಿವರು ಕರೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243