ದಿನದ ಸುದ್ದಿ

ಕೆಎಸ್‌ಆರ್‌ಟಿಸಿ ಆಸ್ಪತ್ರೆ ಖಾಸಗೀಕರಣ : ತೇಜಸ್ವಿ ಸೂರ್ಯ ವಿರುದ್ಧ ಎಎಪಿ ಕಿಡಿ

Published

on

ಸುದ್ದಿದಿನ,ಬೆಂಗಳೂರು : ಜಯನಗರದಲ್ಲಿರುವ ಕೆಎಸ್‌ಆರ್‌ಟಿಸಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡುವ ಸಂಸದ ತೇಜಸ್ವಿ ಸೂರ್ಯ ನಿರ್ಧಾರಕ್ಕೆ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ವಿರೋಧ ವ್ಯಕ್ತಪಡಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್‌ ದಾಸರಿ, “ಹಲವು ವರ್ಷಗಳಿಂದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ಕೆಎಸ್‌ಆರ್‌ಟಿಸಿ ನೌಕರರು ಅಗತ್ಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ. ಸಾರಿಗೆ ನೌಕರರಿಗೆ ಇರುವ ಏಕೈಕ ಆಸ್ಪತ್ರೆ ಇದಾಗಿದ್ದು, ಇನ್ನೂ ಒಂದು ಆಸ್ಪತ್ರೆ ತೆರೆದು ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಯೋಚಿಸಬೇಕು. ಆದರೆ ಸಂಸದ ತೇಜಸ್ವಿ ಸೂರ್ಯರವರು ಈಗಿರುವ ಆಸ್ಪತ್ರೆಯನ್ನೂ ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಲು ಹೊರಟಿರುವುದು ಖಂಡನೀಯ” ಎಂದು ಹೇಳಿದರು.

“ಕಮಿಷನ್‌ ಆಸೆಗಾಗಿ ತೇಜಸ್ವಿ ಸೂರ್ಯ ಈ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಅಲ್ಲಿರುವ ನೌಕರರು ಕೆಲಸ ಕಳೆದುಕೊಳ್ಳುವ ಅಪಾಯವಿದೆ. ಸಾರಿಗೆ ನೌಕರರು ಸಣ್ಣಪುಟ್ಟ ಚಿಕಿತ್ಸೆಗೂ ದುಬಾರಿ ಬೆಲೆ ತೆರಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಸರ್ಕಾರವು ಹಲವು ವರ್ಷಗಳಿಂದ ಕಾಪಾಡಿಕೊಂಡ ಸಂಸ್ಥೆಗಳನ್ನು ಭ್ರಷ್ಟ ಬಿಜೆಪಿಯು ಒಂದೊಂದಾಗಿಯೇ ಮಾರಾಟ ಮಾಡುತ್ತಿದೆ” ಎಂದು ಮೋಹನ್‌ ದಾಸರಿ ಹೇಳಿದರು.

“ಕೆಎಸ್‌ಆರ್‌ಟಿಸಿ ನೌಕರರು ಏಳನೇ ವೇತನ ಶ್ರೇಣಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರಿಯಾದ ಪಿಂಚಣಿ, ವಿಮಾ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ತುಟಿ ಬಿಚ್ಚದ ಸಂಸದ ತೇಜಸ್ವಿ ಸೂರ್ಯರವರು ಕೆಎಸ್‌ಆರ್‌ಟಿಸಿ ಆಸ್ಪತ್ರೆಯನ್ನು ಮಾರಾಟ ಮಾಡಲು ನಿರ್ಧರಿಸಿರುವುದು ನಾಚಿಕೆಗೇಡಿನ ಸಂಗತಿ. ಅವರು ಈ ನಿರ್ಧಾರದಿಂದ ಶೀಘ್ರವೇ ಹಿಂದೆಸರಿಯಬೇಕು” ಎಂದು ಮೋಹನ್‌ ದಾಸರಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version