ದಿನದ ಸುದ್ದಿ
ಕುರುಬ ಎಸ್ ಟಿ ಹೋರಾಟ | ಫೆ. 7 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ; ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮುಖಂಡ ಕಲ್ಲೇರ ಬಸವರಾಜ ಮನವಿ
ಸುದ್ದಿದಿನ,ಹರಪನಹಳ್ಳಿ : ಕುರುಬ ಎಸ್ ಟಿ ಮೀಸಲಾತಿ ಹೋರಾಟ ಕೈಗೊಂಡಿರುವ ಶ್ರೀ ನಿರಂಜನಾನಂದ ಸ್ವಾಮಿಗಳ ಕರೆಯ ಮೇರೆಗೆ ಫೆಬ್ರವರಿ 7 ನೇ ತಾರೀಖಿನಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನ ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮುಖಂಡರಾದ ಕಲ್ಲೇರ ಬಸವರಾಜ ಮನವಿ ಮಾಡಿದ್ದಾರೆ.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆಯ ಮೂಲಕ ಈಗಾಗಲೇ ತಲುಪಿದ್ದು ಕುರುಬ ಸಮಾಜದ ಎಲ್ಲಾ ಶಾಖಾಮಠದ ಶ್ರೀಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ನಂತರ ಜಿಲ್ಲಾ ಪಂಚಾಯಿತಿಯ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಅವರು ಮಾತನಾಡಿ, ತಾಲ್ಲೂಕಿನಿಂದ ಸುಮಾರು 10ರಿಂದ 15 ಸಾವಿರ ಸಮಾಜದ ಬಂಧುಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, ತಾಲ್ಲೂಕಿನ 30ಗ್ರಾಮ ಪಂಚಾಯಿತಿ ಕೇಂದ್ರಗಳಿಂದ ಸಮಾಜದ ಬಂಧುಗಳು ತೆರಳಲು ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಅಷ್ಟೇ ಅಲ್ಲದೇ ಟ್ರ್ಯಾಕ್ಟರ್ ಗಳು, ಕಾರ್ ಗಳ ಮೂಲಕ ತೆರಳಲಿದ್ದು, ಬೆಂಗಳೂರಿನ ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಸೇರಲಿದ್ದಾರೆ ಎಂದರು.
ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ವೈ.ಕೆ.ಬಿ.ದುರುಗಪ್ಪ ಮಾತನಾಡಿ, ಫೆ.6 ರಾತ್ರಿ 9ಗಂಟೆಯಿಂದ ಪಟ್ಟಣದ ಸಂಡೂರು ಕೇರಿ, ಕಂಚಿಕೇರಿ ಹಾಗೂ ಕೋಣನಕೇರಿಯಿಂದ ಮೂರು ಬಸ್‌ಗಳು ತೆರಳಲಿವೆ.
ಗ್ರಾಮಗಳಿಂದಲೂ ಇದೇ ಸಮಯಕ್ಕೆ ತೆರಳಲಿವೆ. ಪ್ರತಿ ಬಸ್‌ಗಳಲ್ಲಿ ಪ್ರಯಾಣಿಸುವ ಸಮಾಜದ ಬಂಧುಗಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಯಶಸ್ವಿಯಾಗಲು ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಕುರಬ ಸಮಾಜದ ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಹೆಚ್.ವಸಂತ, ಬಿಎಲ್‌ಡಿ ಬ್ಯಾಂಕ ಅಧ್ಯಕ್ಷ ಸಾಬಳ್ಳಿ ಜಂಬಣ್ಣ, ಪುರಸಭೆ ಸದಸ್ಯರಾದ ಗಣೇಶ್ ಪೈಲ್ವನ್, ಭರತೇಶ್ ಮುಖಂಡರಾದ ಅಲಮರಿಸಿಕೇರಿ ಶೇಖರಪ್ಪ, ಗೋಣಿಬಸಪ್ಪ, ಮಾಲಾ. ಶ್ರೀನಿವಾಸ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243