ದಿನದ ಸುದ್ದಿ
ಬೆಣ್ಣೆನಗರಿಯಲ್ಲಿ ನಾಳೆ ಕುರುಬರ ರಣಕಹಳೆ..!
ಸುದ್ದಿದಿನ,ದಾವಣಗೆರೆ: ಕುರುಬ ಜನಾಂಗವನ್ನು ST ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಜನವರಿ 6ರಂದು ದಾವಣಗೆರೆಯಲ್ಲಿ ಕುರುಬರ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಕುರುಬರ ST ಹೋರಾಟ ಸಮಿತಿ ತಿಳಿಸಿದೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ವಿವಿಧ ವಿಭಾಗಗಳಲ್ಲಿ ಜಾಗೃತಿ ಸಮಾವೇಶಗಳು ಈಗಾಗಲೇ ನಡೆಯುತ್ತಿವೆ. ಈ ಹಿನ್ನಲೆ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಲ್ಲಿ ನಗರದ ಪಿಬಿ ರಸ್ತೆಯ ಬೀರಲಿಂಗೇಶ್ವರ ಮೈದಾನದಲ್ಲಿ ಜ. 6ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದ್ದು, 25 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಈಗಾಗಲೇ ಸಮಾವೇಶಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಿದ್ಧರಾಮಾನಂದ ಸ್ವಾಮೀಜಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ಬಿ.ಎ.ಬಸವರಾಜ ಭೈರತಿ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಬಂಡೆಪ್ಪ ಕಾಶೆಂಪುರ್, ಶಾಸಕರಾದ ಎಂ.ಟಿ.ಬಿ.ನಾಗರಾಜ, ಎಸ್.ರಾಮಪ್ಪ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಮುಖಂಡರು, ಯುವಕರು ಪಾಲ್ಗೊಳ್ಳಲಿದ್ದಾರೆ.
1986ರಲ್ಲಿ ಕುರುಬ ಸಮಾಜಕ್ಕೆ ಎಸ್ಟಿ ಸೌಲಭ್ಯ ನೀಡಿ, ಒಂದು ವರ್ಷದ ನಂತರ ರದ್ದುಗೊಳಿಸಲಾಗಿದೆ, ಅಂದಿನಿಂದಲೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂಬ ಹೋರಾಟ ಮುಂದುವರಿದಿದ್ದು, ಈ ಬಾರಿ ಬೃಹತ್ ಹೋರಾಟ, ಪಾದಯಾತ್ರೆಗಳ ಮೂಲಕ ST ಹಕ್ಕು ಪಡೆದೇ ಪಡೆಯುತ್ತೇವೆ.
ಜನವರಿ 15 ರಂದು ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಬಳಿಕ ಫೆಬ್ರುವರಿ 07 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಸಮಾವೇಶಕ್ಕೆ ಕುರುಬ ಜನಾಂಗದ ಮುಖಂಡರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ST ಹೋರಾಟ ಸಮಿತಿ ಕರೆ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243