ನೆಲದನಿ
ಶ್ರೀಸಾಮಾನ್ಯ ಮತ್ತು ವಿಚಾರ ಕ್ರಾಂತಿ
- ಕುವೆಂಪು
ಅಂತರರಾಷ್ಟ್ರೀಯ ಪುಸ್ತಕ ವರ್ಷ ಅಂಗವಾಗಿ ವಯಸ್ಕರ ಶಿಕ್ಷಣ ಸಮಿತಿ ಪುಸ್ತಕ
ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಮತ್ತು ಅಭಿನಂದನಾರ್ಹ, ಈ ಪ್ರದರ್ಶನ
ಶ್ರೀಸಾಮಾನ್ಯರ ಅವಶ್ಯಕತೆಗೆ ಅನುರೂಪವಾಗಿರುತ್ತದೆ ಎಂದು ಭಾವಿಸುತ್ತೇನೆ.
ಭಾರತ ತನ್ನ ಸ್ವಾತಂತ್ರ್ಯದ ರಜತೋತ್ಸವವನ್ನು ನಡೆಸುತ್ತಿರುವ ಈ ಸಮಯದಲ್ಲಿ
ನಾವು ಬಡತನವನ್ನು ಎಷ್ಟರಮಟ್ಟಿಗೆ ಪರಿಹರಿಸಿದ್ದೇವೆ? ಜಾತಿ ಮತಗಳ ಭೇದ ಬುದ್ದಿಯನ್ನು
ಎಷ್ಟರಮಟ್ಟಿಗೆ ತೊಡೆದು ಹಾಕ್ಕಿದ್ದೇವೆ? ಉಳ್ಳವರ ಇಲ್ಲದವರ ನಡುವಣ ಅಂತರವನ್ನು
ಎಷ್ಟು ಕಡಿಮೆ ಮಾಡಿದ್ದೇವೆ? ಸಾಮಾನ್ಯರಲ್ಲಿ ಸಮಾಜವಾದಿ ಪ್ರಜಾಪ್ರಭುತ್ವದ ಜ್ಞಾನೋದಯವಾಗಲು ಏನೇನು ಕ್ರಮ ಕೈಗೊಂಡಿದ್ದೇವೆ ? ವೈಚಾರಿಕ ಬುದ್ದಿ ಮತ್ತುವೈಜ್ಞಾನಿಕ ದೃಷ್ಟಿ ಇವುಗಳನ್ನು ಸಾರ್ವಜನಿಕರ ಮನಸ್ಸಿನಲ್ಲಿ ಯಾವ ಪ್ರಮಾಣದಲ್ಲಿ
ಬೆಳೆಸಿದ್ದೇವೆ? ಎಂಬ ವಿಚಾರವಾಗಿ ಸಿಂಹಾವಲೋಕನ ಮಾಡುವುದರ ಜೊತೆಗೆ ಅನಕ್ಷರತೆಯನ್ನು ಎಷ್ಟರಮಟ್ಟಿಗೆ ನಿವಾರಿಸಿದ್ದೇವೆ? ಅಕ್ಷರಸ್ಥರನ್ನಾಗಿ ಮಾಡಿದವರಿಗೆ ಓದಲು
ಉಚಿತ ವಾಗುವಂತೆ ಎಂತಹ ಪುಸ್ತಕಗಳನ್ನು ಎಷ್ಟೆಷ್ಟು ಒದಗಿಸಿದ್ದೇವೆ? ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ಕೊನೆ ವಿಷಯದ ಪರಿಶೀಲನೆಗೆ ವಯಸ್ಕರ
ಶಿಕ್ಷಣ ಸಮಿತಿ ಕೈಗೊಂಡಿರುವ ಪುಸ್ತಕ ಪ್ರದರ್ಶನ ಉತ್ತರ ಹೇಳಬೇಕಾಗುತ್ತದೆ.
“ಉತ್ತಮ ಸಾಹಿತ್ಯಕೃತಿ ಒಂದು ಆಚಾರ್ಯಚೇತನದ ಜೀವಿತ ಸಮಸ್ತದ ಸಾರಸರ್ವಸ್ವ; ಅದು ಐಹಿಕಕ್ಕೆ ಮಾತ್ರವಲ್ಲದೆ, ಆಮುಷ್ಮಿಕ ಕಲ್ಯಾಣಕ್ಕೂ
ಮಾರ್ಗದರ್ಶಿಯಾಗುತ್ತದೆ.”ಎಂದು ಆಂಗ್ಲೇಯ ಮಹಾಕವಿಯೊಬ್ಬನು ಸತ್ಕಾವ್ಯಗಳನ್ನು
ಕುರಿತು ಬಣ್ಣಿಸಿದ್ದಾನೆ. ಇದನ್ನೇ ಇನ್ನೊಂದು ರೀತಿಯಲ್ಲಿ ಭಾರತೀಯ ಕಾವ್ಯ ಮಾಮಾಂಸೆಯೂ ಸಮರ್ಥಿಸುತ್ತದೆ.
“ಸಂಸಾರದ ವಿಷವೃಕ್ಷದಿ
ಹಣ್ಣೆರಡಿವೆ ಅಮೃತೋಪ:
ಕಾವ್ಯಾಮೃತದಾಸ್ವಾದನ
ಮೇಣ್ ಸಜ್ಜನ ಸಲ್ಲಾಪ!”
ಬುದ್ದಿಗೆ ಚಿಂತನ ಜ್ಯೋತಿಯನ್ನು ದಯಪಾಲಿಸುವುದರ ಜೊತೆಗೆ ಹೃದಯಕ್ಕೆ ಧೈರ್ಯಸ್ಥೈರ್ಯಕಾರಕವಾದ ಮತ್ತು ಆಶಾಪ್ರಚೋದಕವಾದ ರಸಾನಂದವನ್ನು ದಾನ
ಮಾಡುತ್ತದೆ.
ಇತರ ಎಲ್ಲಾ ವಿಷಯಗಳಲ್ಲಿಯೂ ಇರುವಂತೆ ಪುಸ್ತಕಗಳ ಎಲ್ಲಿಯೂ ಸತ್ ಮತ್ತು
ಅಸತ್ ಎರಡೂ ಇರುತ್ತವೆ. ಈ ಸತ್ಕಾವ್ಯ ನಮ್ಮನ್ನು ಊರ್ಧ್ವಮುಖ ಪ್ರವಾಸದತ್ತ ಕೊಂಡೊಯ್ದರು, ದುಷ್ಕಾವ್ಯ ನಮ್ಮನ್ನು ಅಧೋಮುಖ ಪ್ರವಾಸಿಗಳನ್ನಾಗಿ ಮಾಡುತ್ತದೆ.
ಕೆಳಕ್ಕೆ ತಳ್ಳುವ ಆಸುರೀ ಪುಸ್ತಕಗಳನ್ನು ಸಂಹರಿಸಿ, ಮೇಲಕ್ಕೆ ಒಯ್ಯುವ ದೈವೀ ಪುಸ್ತಕಗಳನ್ನು ಗುರುತಿಸಬೇಕು. ಅಕ್ಷರಾಭ್ಯಾಸ ದಿಂದ ಓದುವ ಹೊಸ ರುಚಿಯನ್ನು ಸಂಪಾದಿಸಿರುವ ಶ್ರೀಸಾಮಾನ್ಯನಿಗೆ ಮೊದ ಮೊದಲು, ಕ್ಯಾಬರೆ ನೃತ್ಯದಂತೆ, ಪಶುರುಚಿಗೆ ಆಕರ್ಷಣೀಯವಾಗಿ ತೋರಿದರೂ ತುದಿಗೆ ಕ್ಯಾನ್ಸರಿಗಿಂತಲೂ ಕ್ರೂರವಾಗುವ ಪುಸ್ತಕ ಸಾಮಗ್ರಿಯಿಂದ ಅಪಾಯವಾಗದಂತೆ ನೋಡಿಕೊಳ್ಳಬೇಕಾದುದು ಅನಕ್ಷರರನ್ನು ಸಾಕ್ಷರರನ್ನಾಗಿ ಮಾಡಿದವರ ಪವಿತ್ರ ಹೂಳಗಾರಿಕೆಯಾಗಿರುತ್ತದೆ. ಆದ್ದರಿಂದ ಪ್ರದರ್ಶನದಲ್ಲಿ ಅಸುರರಿಗೆ ಸ್ಥಾನವಿರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹಾರೈಸುತ್ತೇನೆ.
ಸಮನ್ವಯ ದೃಷ್ಟಿಯ ಸೆಕ್ಯೂಲರ್ ಅಥವಾ ಸಾರ್ವ ಲೌಕಿಕ ಕ್ಷೇಮ ರಾಷ್ಟ್ರ ಎಂದು ಘೋಷಿತವಾಗಿದೆ, ನಮ್ಮ ಭಾರತ. ಆದ್ದರಿಂದ ಆ ಘೋಷಣೆ ಕಾರ್ಯಕಾರಿಯಾಗಿ ಸಫಲವಾಗಬೇಕಾದರೆ ನಮ್ಮ ಶ್ರೀ ಸಾಮಾನ್ಯರಲ್ಲಿ ಮತದ ಮೌಢ್ಯತೆಗಳು ಮಾತ್ರವಲ್ಲದೆ, ಮತಭಾವದ ಮೌಢ್ಯತೆಯೂ ತೊಲಗಬೇಕು.
ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು
ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡ ದಲ್ಲಿ ಭಸ್ಮೀಕೃತವಾಗಬೇಕು. ಮತ ಮತ್ತು ರಾಜಕೀಯಗಳ ಅಂಧಕಾರವು ವಿಜ್ಞಾನ ಮತ್ತು ಆಧ್ಯಾತ್ಮ ಗಳ ಸೂರ್ಯೋದಯಕ್ಕೆ ಶರಣಾಗಿ, ತೊಲಗಿ, ಸರ್ವೋದಯ ಕಾಂತಿ ಹಬ್ಬಿ, ಶಾಂತಿ ಮೈದೋರಲಿ ಎಂಬ ಅಭೀಪ್ಸೆ ಸರ್ವರ ಹೃದಯದ ಪ್ರಾರ್ಥನೆಯಾಗಿ,ಆತೀತ ಕಲ್ಯಾಣ ಶಕ್ತಿಗಳ ಅವತರಣಕ್ಕೆ ಹಾದಿಯಾಗಲಿ ಎಂದು ಹಾರೈಸುತ್ತೇನೆ’.
(ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ‘ ಪುಸ್ತಕದಿಂದ ಈ ಲೇಖನ ಆಯ್ದುಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243