ನೆಲದನಿ
ನುಡಿಯ ಒಡಲು | ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ
- ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕ, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮನುಷ್ಯ ಘನತೆ ಎಂಬೀ ಪರಿಕಲ್ಪನೆಯು ಹಲವು ಭಾಷಿಕ ಕ್ರಿಯೆಗಳನ್ನು ಸೂಚಿಸುತ್ತದೆ. ಇದು ಗ್ರಹಿಕೆಯ ಹಲವು ಸಾಧ್ಯತೆಗಳನ್ನು ಏಕಕಾಲಕ್ಕೆ ಪ್ರಚುರಪಡಿಸುತ್ತದೆ. ವಿವಿಧ ಸಂದರ್ಭಗಳಲ್ಲಿ ವಿಭಿನ್ನ ಮತ್ತು ವೈವಿಧ್ಯಮಯ ಅರ್ಥಗಳನ್ನು ಇದು ಕಂಡರಿಸುತ್ತದೆ. ವಿಟ್ಗೆನ್‌ಸ್ಟೈನ್ ತನ್ನ ಫಿಲಾಸಫಿಕಲ್ ಇನ್ವೆಸ್ಟಿಗೇಷನ್‌ನಲ್ಲಿ ಚರ್ಚಿಸಿದಂತೆ, ಒಂದು ಪದ ಅಥವಾ ಪರಿಕಲ್ಪನೆಯ ಅರ್ಥವನ್ನು ಅರ್ಥಮಾಡಿಕೊಳ್ಳಲು ‘ಆವೊಂದು ಪದವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತನ್ನಷ್ಟಕ್ಕೆ ಗ್ರಹಿಸಲು ಸಾಧ್ಯವಿಲ್ಲ.ಅಂದರೆ ಒಂದೊಂದು ಪದವು ಆಯಾ ಭಾಷಿಕ ಸಮುದಾಯದಲ್ಲಿ ಹೇಗೆ ಬಳಕೆಯಾಗುತ್ತದೆ ಮತ್ತು ಸಾಂದರ್ಭಿಕವಾಗಿ ಅರ್ಥಗಳು ಹೇಗೆ ವಿಕಾಸಗೊಳ್ಳುತ್ತವೆ ಎಂಬುದನ್ನು ಅನುಸರಿಸುವುದು ಅವಶ್ಯ ಎಂದು ಹೇಳುತ್ತಾನೆ’. ಪ್ರತಿಯೊಬ್ಬ ಭಾಷಿಕನ ಪದ, ಧ್ವನಿಗಳ ಉಚ್ಚಾರಣೆ, ಮಾತಿನ ವರಸೆಗಳಲ್ಲಿ ಉಂಟಾಗುವ ವ್ಯತ್ಯಾಸಗಳು, ಅವುಗಳಿಗೆ ಅರ್ಥಗಳನ್ನು ರೂಪಿಸುವಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವ್ಯತ್ಯಾಸಗಳು ಉಂಟಾಗುವುದಿಲ್ಲ. ಹಾಗಾಗಿ ಒಬ್ಬ ವ್ಯಕ್ತಿಯ ಭಾಷಿಕ ಸನ್ನಿವೇಶ ಮತ್ತು ಅದರ ಬಳಕೆಯನ್ನು ನೋಡಿ ಇದರಿಂದ ಮತ್ತೊಬ್ಬ ವ್ಯಕ್ತಿಯು ಕಲಿಯಬೇಕು ಎಂಬ ಅಭಿಮತವು ಇಲ್ಲಿ ವ್ಯಕ್ತವಾಗುತ್ತದೆ.
ಈ ವಾದವು ಕೇವಲ ಅರ್ಥ ವಿಕಾಸಗೊಳ್ಳುವ ಬಗೆಗೆ ಮತ್ತು ಅದರ ವ್ಯಾಪ್ತಿಗೆ ಮಾತ್ರ ಸಂಬಂಧಿಸಿದೆ ಹೊರತು ಇಡಿಯಾಗಿ ಭಾಷೆಯ ಕಲಿಕೆ ಮತ್ತು ಗ್ರಹಿಕೆಯ ನೆಲೆಗಳಲ್ಲಿ ಈ ‘ಅರ್ಥ’ ಎನ್ನುವ ಪರಿಕಲ್ಪನೆ ಭಿನ್ನವಾಗಿರುತ್ತದೆ ಎನ್ನುವುದು ಗಮನಾರ್ಹ. ಇರಲಿ ‘ಈ ಟಿಪ್ಪಣಿಯಲ್ಲಿ ವಿಟ್ಗೆನ್‌ಸ್ಟೈನಿಯನ್ ವಿಧಾನವನ್ನು ಅನ್ವಯಿಸುವ ಮೂಲಕ, ಮನುಷ್ಯ ಘನತೆ ಎನ್ನುವ ಈ ಪರಿಕಲ್ಪನೆಯು ಹೇಗೆ ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ ಹಾಗೂ ಆ ವಿಭಿನ್ನ ಭಾಷಿಕ ನೆಲೆಗಳನ್ನು ಮನಗಾಣಲು ಮತ್ತು ಪರಿಕಲ್ಪಿಸಲು ಹೇಗೆ ಸಾಧ್ಯ ಎನ್ನುವುದನ್ನು ಬಿಡಿಸಿನೋಡುವ ಪ್ರಯತ್ನವನ್ನು ಮಾಡಲಾಗುತ್ತದೆ.
ಈ ಮೇಲೆ ಹೇಳಿದ ಮಾತುಗಳು ಕೆಲವೊಮ್ಮೆ ವಿರೋಧಾಭಾಸವಾಗಿ ಕಾಣಬಹುದು. ಆದರೆ ಭಾಷಾತತ್ವಶಾಸ್ತ್ರೀಯ ಹಿನ್ನಲೆಯಲ್ಲಿ ಈ ಕುರಿತು, ಘನತೆಯ ಜಿಜ್ಞಾಸೆಯನ್ನು ಸಾಮಾಜಿಕ ವಿವೇಕದ ನೆಲೆಯನ್ನಾಗಿ ಪರಿಭಾವಿಸುವ ಜರೂರು ಏನೆಂಬುದು ಇಲ್ಲಿ ಮಹತ್ವದ ನಿಲುವು ಆಗುತ್ತದೆ.
ಆದ್ದರಿಂದ ಮನುಷ್ಯ ಘನತೆಯ ವಿನ್ಯಾಸಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳು ನಮಗೇಕೆ ಮುಖ್ಯವಾಗುತ್ತವೆ ಅಂದರೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ವಾಯತ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಅಸ್ಮಿತೆಯ ಹಕ್ಕುಗಳು ಹಾಗೂ ಸಂಪನ್ಮೂಲಗಳಲ್ಲಿ ಪಾಲುದಾರಿಕೆ, ಜ್ಞಾನ ಪ್ರಸಾರಣ ಹಾಗೂ ಜ್ಞಾನ ಉತ್ಪಾದನೆ ಮೊದಲಾದವು ಈ ಘನತೆ ಎಂಬ ವಿದ್ಯಮಾನಕ್ಕೆ ಸಂಬಂಧಿಸಿರುತ್ತವೆ.
ಯಾವುದೇ ಒಂದು ಪದದ ಸಂದರ್ಭವನ್ನು ಬದಲಾಯಿಸುವುದರಿಂದ ಅದು ತನ್ನ ಅರ್ಥದ ಆಯಾಮವನ್ನು ಬದಲಿಸುತ್ತದೆ. ಇದು ಬಹುತೇಕ ಸನ್ನಿವೇಶದಲ್ಲಿ ತಪ್ಪು ತಿಳಿವಳಿಕೆಯನ್ನು ಉಂಟುಮಾಡುವುದು ದಿಟ. ಆದರೆ ಈ ಬದಲಾವಣೆ ಆಯಾ ವ್ಯಕ್ತಿ ಇಲ್ಲವೇ ಸಮುದಾಯದ ಆಶೋತ್ತರಗಳನ್ನು ಎತ್ತಿಹಿಡಿಯುವುದಕ್ಕೆ ಒತ್ತಾಸೆಯಾಗಿರುವುದಿಲ್ಲ. ಬದಲಾಗಿ ಸಾಮಾಜಿಕ ಕಳಂಕವನ್ನು ಆರೋಪಿಸುವ, ಕೀಳರಿಮೆಯನ್ನು ಮೂಡಿಸುವ ಹಾಗೂ ಆತ್ಮಬಲಬನ್ನು ಕುಗ್ಗಿಸುವ ಹುನ್ನಾರವನ್ನೂ ಪ್ರಚೋದಿಸುತ್ತವೆ.
ಆದ್ದರಿಂದ ಭಾಷಿಕ ಬಳಕೆಯ ಬಗೆಗಳು ನಿರ್ದಿಷ್ಟ ಉದ್ದೇಶಕ್ಕೆ ಪೂರಕವಾಗಿಯೇ ನೆಲೆಗೊಳ್ಳುತ್ತವೆ ಎಂದು ಹೇಳುವುದು ದುಸ್ತರ. ಅರ್ಥಗಳನ್ನು ಹೇಗೆ ಪ್ರಚುರಪಡಿಸಲಾಗುತ್ತದೆ ಎನ್ನುವುದೇ ಭಾಷಾತತ್ವಶಾಸ್ತ್ರೀಯ ಬಹುಮುಖ್ಯ ಬಿಕ್ಕಟ್ಟಾಗಿರುತ್ತದೆ. ವಸ್ತುಸ್ಥಿತಿ, ಸತ್ಯ, ಸುಳ್ಳು, ವಾಸ್ತವ, ಆರೋಪ, ಪ್ರತ್ಯಾರೋಪ, ಮುಖಸ್ತುತಿ, ಮುಖಹೀನತೆ ಇತ್ಯಾದಿ ವಿಭಿನ್ನ ಭಾಷಿಕ ಕ್ರಿಯೆಗಳು ನೆಲೆಗೊಳ್ಳುವುದು ಕೇವಲ ಸಾಮಾಜಿಕ ರಚನೆ ಇಲ್ಲವೇ ಕಟ್ಟೋಣಗಳಾಗಿ ಮಾತ್ರ. ಸೂಚಕ ಹಾಗೂ ಸೂಚಿತಗಳ ನಡುವಣ ಸಂಘರ್ಷವನ್ನು ತಾತ್ವಿಕವಾಗಿ ವಿಶ್ಲೇಷಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ, ಆಯಾ ಸನ್ನಿವೇಶಕ್ಕೆ ತೋಚಿದಂತೆ ವ್ಯಾಖ್ಯಾನಿಸಲಾಗುವುದು.
ಇವತ್ತಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ನಿರೂಪಣೆಗಳನ್ನು ವ್ಯಾಖ್ಯಾನಿಸುವ ಮಹನೀಯರು ಬಹುತೇಕವಾಗಿ ತಮ್ಮ ಮೂಗಿನ ನೇರಕ್ಕೆ ನಿರ್ದಿಷ್ಟಗೊಳಿಸಿ ಅರ್ಥೈಸುತ್ತಾರೆ. ಅದನ್ನೇ ವಸ್ತುನಿಷ್ಠವೆಂದೋ, ತಾತ್ವಿಕವೆಂದೋ ಇಲ್ಲವೇ ಸಾಮಾಜಮುಖಿಯೆಂದೋ ಬಿಂಬಿಸಿ, ತಮ್ಮೀ ನಿಲುವುಗಳಿಗೆ ಸಮ್ಮತಿಸದವರನ್ನು ಅಪಹಾಸ್ಯ ಮಾಡುವ ಹಾಗೂ ಅವರು ನಂಬಿದ ತತ್ವಗಳನ್ನೇ ಅನೈತಿಕಗೊಳಿಸುವ ದಾರ್ಷ್ಟ್ಯತನವನ್ನು ತೋರಿಸುತ್ತಾರೆ. ಸಮುದಾಯದ ಪರವಾಗಿರುವುದೆಂದರೆ, ತಮ್ಮದೇ ನಿಲುವುಗಳನ್ನು ತಾವೇ ಮಾನ್ಯಮಾಡಿಕೊಂಡು, ಇತರರು ನಂಬಿದ ಮೌಲ್ಯಗಳನ್ನು ಅಪಮೌಲ್ಯಗೊಳಿಸುವುದಲ್ಲ.
ಬದಲಾಗಿ ಯಾವುದು ಸಮಾಜಕ್ಕೆ ಒಳಿತನ್ನು ಬಯಸುವ ವಿನ್ಯಾಸವಾಗಿದೆ ಅನ್ನುವುದನ್ನು ಬಿಡಿಸಿ ಹೇಳುವ ವಿಧಾನವಾಗಿರುತ್ತದೆ. ಹಾಗೂ ಈ ವಿದ್ಯಮಾನದ ನೆಲೆಗಳನ್ನು ಪುಷ್ಟಿಕರಿಸುವ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಭಿನ್ನತೆಗಳನ್ನೂ ಮೀರಿ ಪರಸ್ಪರ ಸಹಮತವನ್ನು ಹೊಂದಿರಬೇಕಾಗುತ್ತದೆ. ಇಂತಹ ಒಂದೊಂದು ಚಿಂತನೆಗೆ ಘನತೆಯು ಸಿಗಬೇಕೆಂದರೆ, ಸಾಮಾಜಿಕ, ಸಾಂಸ್ಕೃತಿಕ ಸಹಭಾಗಿತ್ವದ ಅವಶ್ಯಕತೆ ಇರುತ್ತದೆ. ಏಕೆಂದರೆ ಭಾರತದಂತಹ ದೇಶಗಳು ಏಕಕಾಲದಲ್ಲಿಯೇ ಹಲವು ಕಾಲಗಳಲ್ಲಿ ಬದುಕಿರುತ್ತಾರೆ.
ಇವರ ಲೋಕಗ್ರಹಿಕೆ, ಬದುಕಿನ ಮುನ್ನೋಟಗಳು ಮತ್ತು ಸಮಸಮಾಜ ಕಟ್ಟುವ ಯೋಚನಾಲಹರಿ ಒಂದೇ ಆಗಿರುವುದಿಲ್ಲ. ಹಾಗಾಗಿಯೇ ಕುವೆಂಪು, ಬೇಂದ್ರೆ, ಮಾಸ್ತಿ, ಪುತಿನ ಮೊದಲಾದವರು ಒಂದು ತಲೆಮಾರಿನ ಸಂವೇದನೆಯೊಳಗಿನ ಬಹುತ್ವವನ್ನು ನಿರೂಪಿಸಿದರೆ, ಲಂಕೇಶ್, ತೇಜಸ್ವಿ ಹಾಗೂ ಅನಂತಮೂರ್ತಿ ಇವರೆಲ್ಲರೂ ಸಮಕಾಲೀನವಾಗಿದ್ದರೂ, ಅವರ ಲೋಕಗ್ರಹಿಕೆ ಮತ್ತು ಸಾಮಾಜಿಕ ಭಾಷಾಶಾಸ್ತ್ರೀಯ ನಿಲುವುಗಳು ಪರಸ್ಪರ ಭಿನ್ನವಾಗಿವೆ. ಇವುಗಳನ್ನು ದೇವನೂರ ಅಥವಾ ಸಿದ್ದಲಿಂಗಯ್ಯ ಅವರುಗಳಿಗೆ ಮುಖಾಮುಖಿ ಮಾಡಿ, ಮೌಲ್ಯನಿರ್ಣಯಗಳನ್ನು ಕೈಗೊಂಡರೆ, ಏನೆಲ್ಲ ಅಪಚಾರಗಳು ಘಟಿಸಬಹುದು.
ವಚನಕಾರರ ಗ್ರಹಿಕೆಗಳನ್ನು ಪರಿಶೀಲಿಸಿದರೆ ಭಾರತದ ಸಮುದಾಯಗಳ ಬಹುಳತೆಯ ವಿನ್ಯಾಸಗಳು ನಮಗೆ ಮನನವಾಗುತ್ತವೆ. ಇದೇ ಬಗೆಯ ವಿಭಿನ್ನ ನಿಲುವುಗಳನ್ನು ವೈದೇಹಿ, ಗೀತಾ ನಾಗಭೂಷಣ, ನಾಗವೇಣಿ ಅವರ ಸಾಹಿತ್ಯಕ ನಿರೂಪಣೆಗಳಲ್ಲಿ ಕಾಣಬಹುದು. ಘನತೆಯ ಪ್ರಶ್ನೆಯಿರುವುದು ಈ ವೈವಿಧ್ಯತೆಗಳನ್ನು ಮಾನ್ಯಮಾಡುವ ರಾಜಕಾರಣದ ಪರಿಣಾಮಗಳ ಆಧಾರದ ಮೇಲೆ ಇತ್ಯರ್ಥವಾಗುತ್ತದೆ.
ಚರ್ಚೆ, ಸಂವಾದ, ದಿನನಿತ್ಯದ ಮಾತುಕತೆ ಹಾಗೂ ಅಭಿಪ್ರಾಯಗಳ ಮಂಡನೆಯಲ್ಲಿ ಪ್ರಯೋಗಿಸುವ ಭಾಷಿಕ ಸಂಗತಿಗಳು ನಮ್ಮನ್ನು ಗೊಂದಲಕ್ಕೀಡುಮಾಡುತ್ತವೆ. ಇದಕ್ಕೆ ಬಹುಮುಖ್ಯ ಕಾರಣವೇ ಪದ ಬಳಕೆಯ ನೆಲೆಗಳು. ಅಂದರೆ ನಾವು ನೇರವಾಗಿ ಮಾತನಾಡುವಾಗ ಅಥವಾ ಭೇಟಿಯಾದಾಗ ಅವುಗಳ ಅರ್ಥ ಸಾಧ್ಯತೆಗಳು ಏಕರೂಪವಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಈ ಸಹಜತೆಯನ್ನು ಗ್ರಹಿಕೆಯ ಸಾಧ್ಯತೆಯನ್ನಾಗಿ ತಿಳಿಯಲು ಆಗುವುದಿಲ್ಲ. ಏಕೆಂದರೆ, ಅರ್ಥದ ನೆಲೆಗಳು ಮಾತ್ರ ಏಕರೂಪಿಯಾಗಿರುವುದಿಲ್ಲ. ಜೊತೆಗೆ ಅವುಗಳನ್ನು ಗ್ರಹಿಸುವ ವಿಧಾನಗಳು ಕೂಡ ಇದಕ್ಕೆ ಒತ್ತಾಸೆಯಾಗುತ್ತವೆ.
ಒಂದು ಪದದ ಅರ್ಥ ನಿಶ್ಚಿತವಾಗಿರುವುದಿಲ್ಲ ಎಂದರೆ ಆ ಪದದ ಮೂಲಕ ಸಾಧಿತವಾಗುವ ಅರ್ಥವೂ ನಿಶ್ಚಿತವಾಗಿರುವುದಿಲ್ಲ. ಆಯಾ ಸನ್ನಿವೇಶಗಳ ಆಧಾರದ ಮೇಲೆ ಇವುಗಳ ಅರ್ಥ ಸಾಧ್ಯತೆಗಳು ಮೈದಾಳುತ್ತವೆ. ಸೂಚಕ (ಸಿಗ್ನಿಫೈರ್) ಮತ್ತು ಸೂಚಿತಗಳ (ಸಿಗ್ನಿಫೈಯ್ಡ್) ನಡುವಣ ನಂಟಸ್ತಿಕೆ ನೇರವಾಗಿರುವುದಿಲ್ಲ. ಅದು ನಿರಂತರವಾಗಿ ವಿಕಾಸಶೀಲವಾಗಿರುತ್ತದೆ. ಇದೊಂದು ಬಗೆಯಲ್ಲಿ ಅನಂತಲೀಲೆ. ಬರಹದ ಸನ್ನಿವೇಶದಲ್ಲಿ ಅರ್ಥದ ಅನಿಶ್ಚಿತತೆ ಇನ್ನೂ ವ್ಯಾಪಕವಾಗಿರುತ್ತದೆ. ಹಾಗಾಗಿ ಬರಹದ ನಿರೂಪಣೆಗಳಲ್ಲಿ ಸನ್ನಿವೇಶಗಳನ್ನು ನಿರ್ಧರಿಸುವ ಮೂಲಕ ಅರ್ಥಗಳನ್ನು ನಿಶ್ಚಯಿಸಲಾಗುತ್ತದೆ.
ಬರಹದಲ್ಲಿ ಮೈದಾಳಿದ ನಿರೂಪಣೆಗಳು ಅತ್ಯಂತ ಸಂದಿಗ್ದವೂ ಹಾಗೂ ಅಸ್ಪಷ್ಟವೂ ಆಗಿರುತ್ತವೆ. ಈ ಬಿಕ್ಕಟ್ಟಿನಲ್ಲಿ ಸೂಕ್ತ ಅರ್ಥಗಳು ಮೈದಾಳದೇ ಹೋದರೆ ಅಪಚಾರ ಮತ್ತು ಅಪಾಯಗಳೂ ತಲೆಯೆತ್ತುತ್ತವೆ. ಅರ್ಥಗಳ ಏಕರೂಪಿತನವೇ ಇಂತಹ ಸಾಮಾಜಿಕ ಅಪಚಾರ ಹಾಗೂ ಸಾಂಸ್ಕೃತಿಕ ಅಪಾಯಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಸುಲಭವಾಗಿ ಹೇಳಬಹುದು ಆದರೆ ಇದು ವಾಸ್ತವವಲ್ಲ. ಈ ಅರ್ಥಗಳನ್ನು ರೂಪಿಸುವ ಸಾಮಾಜಿಕ ಹೊಣೆಗಾರಿಕೆ ಯಾರಿಗೂ ಸೇರದಿದ್ದರೂ, ಅದನ್ನು ತಮ್ಮ ಕೈವಸಮಾಡಿಕೊಳ್ಳುವ ಹಿತಾಸಕ್ತಿ ಕೆಲವು ವರ್ಗ, ಜಾತಿ ಹಾಗೂ ಧರ್ಮದವರಿಗೆ ಇರುತ್ತದೆ.
ಅರ್ಥದ ವಿಭಿನ್ನತೆ ಭಾಷೆಯಲ್ಲಿ ನೆಲೆನಿಂತಿರುವುದಿಲ್ಲ. ಅದು ಆಯಾ ಭಾಷೆಯ ಜನರ ಗ್ರಹಿಕೆಯಲ್ಲಿ ಅಂತಸ್ಥವಾಗಿರುತ್ತದೆ. ಯಾವ ನುಡಿ ಸಮುದಾಯವೂ ಈ ಗ್ರಹಿಕೆಯನ್ನು ಪ್ರಜಾಸತ್ತಾತ್ಮಕಗೊಳಿಸುವ ತುಡಿತವನ್ನು ಹೊಂದಿರಲಾವು. ಸಾಮಾಜಿಕ ಮತ್ತು ರಾಜಕಿಯ ಪ್ರಾಬಲ್ಯ ಹೊಂದಿದ ಜಾತಿ ವರ್ಗಗಳು, ಈ ಅರ್ಥೈಸುವಿಕೆಯನ್ನು ನಿಯಂತ್ರಿಸುತ್ತವೆ. ಈ ವಾಸ್ತವವನ್ನು ಅರಿಯದ ಹಿಪೋಕ್ರ್ಯಾಟ್ ಚಿಂತಕರೂ, ಇದೇ ಟ್ರ್ಯಾಪ್ನಿಲ್ಲಿ ಬಿದ್ದುಕೊಂಡು, ಯಾರ ಪರವಾಗಿರಬೇಕಿತ್ತೋ, ಅವರನ್ನೇ ಅಪಮಾನಿಸುವ ಹುನ್ನಾರದಲ್ಲಿ ಭಾಗಿಯಾಗುತ್ತಾರೆ. ಯಾವುದು ಮನುಷ್ಯ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಬೇಕಿತ್ತೋ, ಅದನ್ನೇ ತಮ್ಮ ಕೀಳಭಿರುಚಿಗೆ ಬಳಸಿಕೊಂಡು, ಸಮುದಾಯಗಳ ಹಿತವನ್ನು ನಿರ್ಲಕ್ಷಿಸಿ, ತಮ್ಮ ಹಿರಿಮೆಯನ್ನು ಮೆರೆಯುತ್ತಾರೆ.
ಸಾಹಿತ್ಯ ಪಠ್ಯಗಳ ವಿಶ್ಲೇಷಣೆಯನ್ನೇ, ಸಾಮಾಜಿಕ ವಿಜ್ಞಾನಗಳ ಸನ್ನಿವೇಶದಲ್ಲಿ ಅನುಸರಿಸಲು ಸಾಧ್ಯವಿಲ್ಲ. ಅಥವಾ ಸಾಮಾಜಿಕ ವಿಜ್ಞಾನಗಳ ವಿಶ್ಲೇಷಣಾ ಪರಿಕರಗಳನ್ನು ನೇರವಾಗಿ ಸಾಹಿತ್ಯಕ್ಕೆ ಒಗ್ಗಿಸಿಕೊಂಡು, ಸಾಹಿತ್ಯವನ್ನು ಅರಿಯುವುದು ಸೂಕ್ತವಲ್ಲ. ಕಾರಣವಿಷ್ಟೆ, ಅರ್ಥದ ವ್ಯಾಪ್ತಿ ಮತ್ತು ಆಯಾಮಗಳು ಆಯಾ ತಿಳಿವಿನ ವಲಯಗಳಿಗೆ ತಕ್ಕಂತೆ ಭಿನ್ನವಾಗಿರುತ್ತವೆ. ಈ ಭಿನ್ನತೆಯೇ ಘನತೆಯ ವೈಶಿಷ್ಟ್ಯವಾಗಿದೆ. ಭಿನ್ನತೆಯೆಂಬುದು ಮೇಲು-ಕೀಳುಗಳನ್ನು ತೀರ್ಮಾನಿಸುವ ಬಗೆಯಲ್ಲ.
ಹಾಗೂ ಬೈನರಿ ಇಲ್ಲವೇ ಡೈಕಾಟಮಿಗಳನ್ನು ರೂಪಿಸುವ ತಂತ್ರವೂ ಅಲ್ಲ. ಇದುವೇ ವ್ಯಕ್ತಿ, ಸಮೂಹ ಹಾಗೂ ದೇಶಗಳ ಘನತೆಯನ್ನು ಅರಿಯುವ ಕ್ರಮವಾಗಿದೆ. ಯಾವುದೇ ವ್ಯಕ್ತಿಯ ಇಲ್ಲವೇ ಸಮೂಹದ ಘನತೆಯನ್ನು ಕೇವಲ ಸಾಪೇಕ್ಷಿತವಾಗಿ ತೀರ್ಮಾನಿಸಿದರೆ, ಘನತೆಯೆಂಬ ವಿದ್ಯಮಾನವೇ ನಗೆಪಾಟಲಿಗೆ ಈಡಾಗುತ್ತದೆ. ಉದಾಹರಣೆಗೆ ಒಡಲಾಳದಲ್ಲಿ ಬರುವ ಕಡಲೆಕಾಯಿ ಪ್ರಸಂಗ, ಕುಸಮಬಾಲೆಯ ಎಳೆನೀರಿನ ಪ್ರಸಂಗವನ್ನು ಸರಳರೇಖಾತ್ಮಕ ಗ್ರಹಿಕೆಯಲ್ಲಿ ವಿಶ್ಲೇಷಿಸಿದರೆ, ಆ ಪಾತ್ರಗಳು ಕೇವಲ ಅನೈತಿಕತೆಯ ರೂಪಕವಾಗಿ ಕಾಣುತ್ತವೆ.
ಈ ಎರಡೂ ಪ್ರಸಂಗಗಳ ಹಿಂದಿನ ಸಾಮಾಜಿಕ, ರಾಜಕೀಯ ಹುನ್ನಾರಗಳು ಏನೆಂದು ಬಿಡಿಸಿನೋಡದೇ, ಅವುಗಳನ್ನು ಸಮ್ಮತಿಸುವ ಇಲ್ಲವೇ ಅವುಗಳೊಟ್ಟಿಗೆ ಒಂದು ಬಗೆಯ ತಾದ್ಯಾತ್ಮತೆಯನ್ನು ಹೊಂದಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ವಿಜ್ಞಾನಗಳ ಹಿನ್ನಲೆಯಲ್ಲಿ ಇವೆರಡೂ ಪ್ರಸಂಗಗಳನ್ನು ವಿಶ್ಲೇಷಣೆ ಮಾಡಿದರೆ, ಗ್ರಹಿಕೆಯ ಸಾಧ್ಯತೆಗಳು ಬೇರೆಯಾಗಿರುತ್ತವೆ.
ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳ ನಡುವಿನ ಈ ವಿಶ್ಲೇಷಣೆಯ ಶೈಲಿ ಮತ್ತು ಮಾದರಿ ಬದಲಾದ ತಕ್ಷಣ ಮನುಷ್ಯ ಘನತೆಯ ಕಲ್ಪನೆ ಬದಲಾಗುವುದಿಲ್ಲ. ಆದರೆ ಈ ಘನತೆಯನ್ನು ಅರಿಯುವ ಸಾಧ್ಯತೆ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಅಂಬೇಡ್ಕರ್, ಟ್ಯಾಗೋರ್, ಟಾಲ್ಸ್ಟಾಯ್, ಕುವೆಂಪು ಮತ್ತು ಗಾಂಧಿ ಅವರ ಚಿಂತನೆಗಳಲ್ಲಿ ಮೈದಾಳುವ ಮನುಷ್ಯ ಘನತೆಯ ನೆಲೆಗಳು ಹೀಗೆ ಸಾಹಿತ್ಯ, ಸಮಾಜವಿಜ್ಞಾನಗಳ ಸಾಧ್ಯತೆಗಳಿಂದ ಪ್ರಕಟಗೊಂಡಿವೆ.
ತಾತ್ವಿಕವಾಗಿ ಇಲ್ಲವೇ ತತ್ವಶಾಸ್ತ್ರೀಯ ನೆಲೆಯಲ್ಲಿ ಮನುಷ್ಯ ಘನತೆಯನ್ನು ಕುರಿತು ಚರ್ಚಿಸುವಾಗ, ಎರಡು ಬಗೆಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಮನುಷ್ಯ ಘನತೆಯಂತಹ ಪರಿಕಲ್ಪನೆಗಳು ಸಹಜವಾಗಿ ಅಸ್ಪಷ್ಟವೂ ಹಾಗೂ ಸಂದಿಗ್ದವೂ ಆಗಿರುತ್ತವೆ. ಈ ಅಸ್ಪಷ್ಟ ಮತ್ತು ಸಂದಿಗ್ದತೆ ಇವೆರಡೂ ಭಾಷಿಕ ಕ್ರಿಯೆಯಲ್ಲಿ ನೆಲೆಗೊಳ್ಳುತ್ತವೆ. ಹಾಗಾಗಿ ಘನತೆಯನ್ನು ವ್ಯಾಖ್ಯಾನಿಸುವುದು ಅತ್ಯಂತ ದುಸ್ತರವಾದ ಕೆಲಸವಾಗಿದೆ.
ಯಾವುದನ್ನು ನಿಖರವಾಗಿ ಮತ್ತು ಸ್ಪಷ್ಟವಾಗಿ ಭಾಷೆಯೊಳಗೆ ವ್ಯಾಖ್ಯಾನಿಸಲು ಸಾಧ್ಯವೋ, ಅದು ಬಹುತೇಕವಾಗಿ ನಮ್ಮ ಗ್ರಹಿಕೆ ಮತ್ತು ಸಾಮಾಜಿಕ ಅನುಭವದಲ್ಲಿ ಸಹಜ ನಡೆಯಾಗಿರುತ್ತದೆ. ನಮ್ಮ ಗ್ರಹಿಕೆಗೆ ಎಟುಕದ ಯಾವುದೇ ಕಲ್ಪನೆ, ಪರಿಕಲ್ಪನೆ ಅಥವಾ ಅನುಭವು ಭಾಷೆಯಲ್ಲಿ ಸ್ಪಷ್ಟವಾಗಿಯೂ ಮತ್ತು ನಿಖರವಾಗಿಯೂ ವ್ಯಕ್ತವಾಗಲಾರದು. ಮನುಷ್ಯನ ಘನತೆಯ ಕಲ್ಪನೆ ಯಾಕೇ ಇಷ್ಟೊಂದು ಸಂಕೀರ್ಣವಾಗಿ ತೋರುತ್ತದೆ? ಈ ಸಂಕೀರ್ಣತೆಗೆ ಒತ್ತಾಸೆಯಾಗುವ ಭಾಷಿಕ ಮತ್ತು ಸಾಂಸ್ಕೃತಿಕ ಸವಾಲುಗಳಾವವು? ಎನ್ನುವುದಾದರೆ, ಮನುಷ್ಯ ತನ್ನ ಬದುಕಿನಲ್ಲಿ ರೂಪಿಸಿಕೊಳ್ಳುವ ಅನುಭವ ಮತ್ತು ಗ್ರಹಿಕೆ, ಇವುಗಳ ನಡುವೇ ಸಂಘರ್ಷವೊಂದು ಏರ್ಪಟ್ಟರೆ, ಇವೆರಡೂ ವಿದ್ಯಮಾನಗಳನ್ನು ಪ್ರತಿನಿಧಿಸುವ ಹಾಗೂ ಸಂಕಥನಗೊಳಿಸುವ ವಿನ್ಯಾಸಗಳು ಸ್ಪಷ್ಟವಾಗಿ ನೆಲೆನಿಲ್ಲಲಾರವು.
ಏಕೆಂದರೆ, ಮನುಷ್ಯ ಘನತೆಯನ್ನು ಪರಿಕಲ್ಪಿಸುವ ಹಾಗೂ ವ್ಯಾಖ್ಯಾನಿಸುವ ಭಾಷಿಕ ಕ್ರಿಯೆಗಳು ಮುಖ್ಯವಾಗಿ, ಗ್ರಹಿಕೆ ಮತ್ತು ಅಭಿವ್ಯಕ್ತಿಯ ವಿನ್ಯಾಸಗಳನ್ನು ಹೇಗೆ ಮಾನಸಿಕ ನಕ್ಷೆಯಲ್ಲಿ ಸಾಕಾರಗೊಳಿಸಲಾಗುತ್ತದೆ ಮತ್ತು ಅರ್ಥ ಸಾಧ್ಯತೆಗಳನ್ನು ನೆಲೆಗೊಳಿಸಲಾಗುತ್ತದೆ ಎಂಬ ಮಾನಸಿಕ ಪ್ರಕ್ರಿಯೆಗಳನ್ನು ಆಧರಿಸಿರುತ್ತವೆ. ಭಾಷಿಕ ಕ್ರಿಯೆ ಮತ್ತು ಮಾನಸಿಕ ನಕ್ಷೆಗಳ ನಡುವೆ ಪರಸ್ಪರ ಹೊಂದಾಣಿಕೆ ಏರ್ಪಡದಿದ್ದರೆ, ಸಂವಹನ ಕ್ರಿಯೆ ಸುಲಲಿತವಾಗಿ ನೆರವೇರಲಾರದು.
ಭಾಷೆ ಮತ್ತು ಮನಸ್ಸುಗಳ ನಡುವಿನ ವಿನ್ಯಾಸಗಳು ಹೇಗೆ ವ್ಯವಹರಿಸುತ್ತವೆ ಎನ್ನುವ ತಿಳಿವಳಿಕೆ ದಕ್ಕಿದರೆ ಮಾತ್ರ, ಸಾಮಾಜಿಕ ಸಾಂಗತ್ಯ ಮತ್ತು ನಂಟಸ್ತಿಕೆ ಸುಲಭವಾಗುತ್ತದೆ. ಪದಗಳ ಅರ್ಥದ ವಿನ್ಯಾಸಗಳು ಸೂಪ್ತವಾಗಿ ನಮ್ಮ ಮಾನಸಿಕ ರಚನೆಗಳಾಗಿ ಕಾರ್ಯನಿರ್ವಹಿಸಿದರೂ, ಅವುಗಳು ಅಭಿವ್ಯಕ್ತಿಗೊಳ್ಳುವಾಗೆಲ್ಲ ಕೇವಲ ಮಾನಸಿಕ ಸೂಪ್ತರಚನೆಯ ಭಾಗವಾಗಿ ಮಾತ್ರ ಇರುವುದಿಲ್ಲ. ಬದಲಾಗಿ ನಮ್ಮ ಜಾಗ್ರತ ಪ್ರಜ್ಞೆಯನ್ನು ಪ್ರತಿನಿಧಿಸುವ ಸೂಚಕಗಳಾಗುತ್ತವೆ. ಈ ಸೂಚಕಗಳು ತಮ್ಮೊಳಗೆಯೇ ಸೂಚಿತಗಳನ್ನೂ ಹೊಂದಿರುತ್ತವೆ. ಆದರೆ ರಾಜಕೀಯ ಆಯಾಮಗಳನ್ನು ಬಲವಾಗಿ ನೆಮ್ಮಿರುವ, ಯಾವುದೇ ಪರಿಕಲ್ಪನೆ ಅಥವಾ ಪರಿಭಾಷೆ ಬಹುತೇಕವಾಗಿ ಅಸ್ಪಷ್ಟ ಕಲ್ಪನೆಯಾಗಿರುತ್ತದೆ ಎಂದು ಇಲ್ಲಿ ವಾದಿಸಬಹುದು.
ಮನುಷ್ಯ ಘನತೆಯ ಈ ಪರಿಕಲ್ಪನೆಯು ಕಾನೂನು, ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯ ನೆಲೆಯಾಗಿ ಹೆಚ್ಚು ಹೆಚ್ಚು ಪ್ರಚಲಿತಗೊಳ್ಳುತ್ತದೆ. ತಾತ್ವಿಕ ಸಂಕಥನಗಳಲ್ಲಿ ಘನತೆ ಎನ್ನುವುದು ಒಂದು ಮಂತ್ರದಂತೆ ಕಾಣಿಸುತ್ತದೆ. ಆದರೆ, ಇಂತಹ ಪರಿಕಲ್ಪನೆಯನ್ನು ಸೃಜಿಸುವ ಹಾಗೂ ನೆಲೆಗೊಳಿಸುವ ಭಾಷಿಕ ಕ್ರಿಯೆಗಳು ಎಷ್ಟು ವ್ಯಾಪಕವಾಗಿ ವ್ಯಾಖ್ಯಾನಿಸಲ್ಪಡುತ್ತವೋ ಅಷ್ಟೊಂದು ಸಂಕೀರ್ಣತೆಗೆ ಒಳಗಾಗುತ್ತವೆ.
ಹಾಗಾಗಿ ಅದರ ಅರ್ಥಗಳು ಅಸ್ಪಷ್ಟ ಮತ್ತು ಮಸುಕಾಗಿ ತೋರುತ್ತವೆ. ಈ ಟಿಪ್ಪಣಿಯ ಉದ್ದೇಶವೇನೆಂದರೆ, ಮನುಷ್ಯ ಘನತೆ ಎಂಬೀ ಪರಿಕಲ್ಪನೆಯನ್ನು ಪರಿಭಾವಿಸುವ ವಿಧಾನಗಳು ಹೇಗೆ ಭಾಷೆಯ ನಿರೂಪಣೆಗಳಲ್ಲಿ ವಿಕಾಸಗೊಳ್ಳುತ್ತವೆ ಹಾಗೂ ಅರ್ಥಗಳನ್ನು ಮಾನಸಿಕ ನಕ್ಷೆಯ ಸಾಧ್ಯತೆಗಳನ್ನಾಗಿಸುವ ಬಗೆಗಳಾವವು? ಎಂಬ ತಾತ್ವಿಕ ಚರ್ಚೆಯನ್ನು ಬೆಳೆಸುವುದಾಗಿದೆ. ಪರಿಭಾಷೆ ಮತ್ತು ಅದರ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ, ಘನತೆ ಎನ್ನುವುದು ನೈತಿಕ, ದಾರ್ಶನಿಕ ಮತ್ತು ಸಂವಿಧಾನಾತ್ಮಕ ಗ್ರಹಿಕೆಯಾಗಿದೆ. ವಿಭಿನ್ನ ಭಾಷಾ ಬಳಕೆಯ ವಲಯಗಳಲ್ಲಿ ವಿಭಿನ್ನ ಅರ್ಥಗಳು ಈ ಪರಿಕಲ್ಪನೆಯನ್ನು ಸುತ್ತುವರೆದಿವೆ.
ಇದುವರೆಗೂ ಮಾಡಿದ ವಿಶ್ಲೇಷಣೆಗಳ ಪ್ರಕಾರ ಮನುಷ್ಯ ಘನತೆಯ ಅರ್ಥಗಳನ್ನು ಸಾಮಾಜಿಕ ರಚನೆ ಎಂದು ಹೇಳಬಹುದು. ಇಲ್ಲಿ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂದರ್ಭಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ವಾಸ್ತವದಲ್ಲಿ ಮನುಷ್ಯ ಘನತೆಗೆ ಯಾವುದೇ “ನಿಜವಾದ” ಅರ್ಥವಿಲ್ಲ. ವಿಭಿನ್ನಸ್ತರಗಳಲ್ಲಿ ಈ ಪರಿಕಲ್ಪನೆಯ ಅರ್ಥವು ನಿರ್ಧಾರವಾಗುತ್ತದೆ. ಆದರೆ ಆಯಾ ಸಾಮಾಜಿಕ ಸ್ತರಗಳಿಗೆ ಅನುಗುಣವಾಗಿ ಈ ವಿಭಿನ್ನತೆಯು ಕೆಲವುಸಲ ಗಹನವಾಗಿ ಮತ್ತೇ ಕೆಲವುಸಲ ಅತ್ಯಂತ ತೆಳುವಾಗಿ ನಮಗೆ ತೋರುತ್ತದೆ.
ಈ ವಿನ್ಯಾಸಗಳು ಸಾಮಾಜಿಕ-ಸಾಂಸ್ಕೃತಿಕವಾಗಿ ನಿರ್ಧರಿಸಲಾಗುತ್ತವೆ. ಕಾನೂನುಬದ್ಧ ಪರಿಭಾಷೆಯಲ್ಲಿ ‘ಘನತೆ’ ಎಂಬೀ ಪದ ಬಳಕೆಯು ಮಾನವಹಕ್ಕು ಮತ್ತು ಕಾನೂನುಗಳ ಚೌಕಟ್ಟನ್ನು ಪಡೆದುಕೊಳ್ಳುತ್ತದೆ. ಇದೊಂದು ಬಗೆಯಲ್ಲಿ ಸಮರ್ಥನೀಯ ನಿಲುವು ಆಗಿರುತ್ತದೆ. ನೈತಿಕ-ತಾತ್ವಿಕ ಪರಿಭಾಷೆಗೆ ಹೋಲಿಸಿ ನೋಡಿದರೆ, ಒಂದು ಕಡೆ ದೃಷ್ಟಿಕೋನಕ್ಕೆ ಸಂಬಂಧಿಸಿದ ನಿಲುವಾಗಿ ಕಾಣುತ್ತದೆ. ಮತ್ತೊಂದಡೆ ಅಪಮಾನಕ್ಕೆ ಸಂಬಂಧಿಸಿದ ವಿನ್ಯಾಸವಾಗಿ ಕಾಣಿಸುತ್ತದೆ. ಏಕೆಂದರೆ ಅಪಮಾನದ ಚರಿತ್ರೆಯನ್ನು ಹೊಂದಿದವರಲ್ಲಿ ಮಾತ್ರ ಘನತೆಯ ಬಯಕೆ ದೊಡ್ಡಾಗಿರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980234243