ದಿನದ ಸುದ್ದಿ

ವಾಹನಗಳಿಗೆ ಕಣ್ಣು ಕುಕ್ಕುವ ಎಲ್‌ಇಡಿ ಬಲ್ಪ್ ಅಳವಡಿಸಿದರೆ ಸೂಕ್ತಕ್ರಮ ; ಪೊಲೀಸ್ ಇಲಾಖೆ

Published

on

ಸುದ್ದಿದಿನಡೆಸ್ಕ್:ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ (LED) ದೀಪಗಳನ್ನು ವಾಹನಗಳಿಗೆ ಅಳವಡಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆಲೋಕ್ ಕುಮಾರ್, ಐ.ಪಿ.ಎಸ್ , ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಸಂಚಾರ ಮತ್ತು ರಸ್ತೆ ಸುರಕ್ಷತೆ ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಇಡಿ ದೀಪಗಳು ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಕೇಂದ್ರ ಮೋಟಾರು ಕಾಯ್ದೆ(CMV)ಯಲ್ಲಿ ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್‌ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು, ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಲಾಗುವುದು ಎಂದಿದ್ದಾರೆ.

ಪ್ರಕಟಣೆಯಲ್ಲೇನಿದೆ..?

ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು. ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವು ತೊಂದರೆಯುಂಟಾಗುತ್ತಿದ್ದು, ಇದರಿಂದ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬಂದಿರುತ್ತದೆ. ಈ ಪೈಕಿ ಪ್ರಮುಖವಾಗಿ ಭಾರಿ ಗಾತ್ರ ವಾಹನಗಳಾದ ಲಾರಿ, ಟ್ರಕ್. ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ (dazzling and glaring) ಎಲ್‌ಇಡಿ ದೀಪಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸುತ್ತಿರುವುದರಿಂದ ಇತರ ವಾಹನ ಚಾಲಕರುಗಳಿಗೆ ವಾಹನ ಚಲಾಯಿಸಲು ತೊಂದರೆಯಾಗು ತ್ತಿರುತ್ತದೆ. ಎಲ್ಲಾ ವಾಹನ ಸವಾರರು ತಮ್ಮ ತಮ್ಮ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಅಳವಡಿಸಬೇಕಾಗಿರುವ ಹೆಡ್‌ ಲೈಟ್‌ ಗಳನ್ನೇ ಅಳವಡಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಸಿಎಂವಿ ಕಾಯ್ದೆಯಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಐಎಂವಿ ಕಾಯ್ದೆಯ ಕಲಂ 177 ರಡಿ ಪ್ರಕರಣಗಳನ್ನು ದಾಖಲಿಸಬಹುದಾಗಿರುತ್ತದೆ.

ಆದ್ದರಿಂದ, ಘಟಕಾಧಿಕಾರಿಗಳು ತಮ್ಮ ತಮ್ಮ ಘಟಕಗಳಲ್ಲಿ ಸಂಚರಿಸುವ ವಾಹನಗಳಲ್ಲಿ ಈ ರೀತಿಯ ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸಿರುವುದು ಕಂಡು ಬಂದಲ್ಲಿ, ಅಂತಹ ವಾಹನ ಸವಾರರ ವಿರುದ್ಧ ಐಎಂವಿ ಕಾಯ್ದೆಯ ಕಲಂ 177 ರಡಿ ಪ್ರಕರಣಗಳನ್ನು ದಾಖಲು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಈ ರೀತಿ ವಾಹನಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸಿರುವ ವಾಹನ ಚಾಲಕರ ವಿರುದ್ಧ ಜುಲೈ ಮಾಹೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಪ್ರಕರಣಗಳನ್ನು ದಾಖಲಿಸಿ, ಕೈಗೊಂಡ ಕ್ರಮ ಬಗ್ಗೆ ಪಾಲನಾ ವರದಿಯನ್ನು ದಿನಾಂಕ 31.07.2024 ರೊಳಗಾಗಿ ಈ ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version