ದಿನದ ಸುದ್ದಿ
ಸೋಬೆರಾನ್ ಬೆಳಗಿದ ಜ್ಯೋತಿ..! : ಕಸದ ರಾಶಿಯಲ್ಲಿ ಸಿಕ್ಕ ಹೆಣ್ಣು ಮಗುವೀಗ ‘ಕಮೀಷನರ್’..!
- ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು, ಮುಂಬೈ
ಅಸ್ಸಾಮಿನ ತಿನ್ಸುಖಿಯಾ ಎಂಬಲ್ಲಿನ ಫುಟ್ ಪಾತ್ ತರಕಾರಿ ವ್ಯಾಪಾರಿ 30 ವರ್ಷ ಪ್ರಾಯದ ಸೋಬೆರಾನ್ ಎಂದಿನಂತೆ ಅಂದು ತರಕಾರಿ ಮಾರಿ ಗಾಡಿ ತಳ್ಳಿಕೊಂಡು ಮನೆಗೆ ವಾಪಾಸಾಗುತ್ತಿದ್ದ. ದಿನವಿಡೀ ನಿಂತು ವ್ಯಾಪಾರ ಮಾಡಿ ದಣಿದ ಅವನ ದೇಹ, ಮನಸ್ಸು ಎರಡೂ ವಿಶ್ರಾಂತಿಗೆ ಹಾತೊರೆಯುತ್ತಿದ್ದವು.
ಆದಷ್ಟು ಬೇಗ ಮನೆ ತಲುಪಿ ಅಡುಗೆ ಮಾಡಿಕೊಂಡು ಉಂಡು ಅಡ್ಡ ಬೀಳಬೇಕು ಎಂದು ಆಲೋಚಿಸುತ್ತ ಬರಬೇಕಾದರೆ ಅತ್ತಲೆಲ್ಲಿಂದಲೋ ಮಗುವೊಂದರ ಅಳುವಿನ ದನಿ ಕೇಳಿತು. ದನಿಯ ಜಾಡನ್ನು ಅರಸಿ ಹೋಗಿ ನೋಡಿದರೆ ಕಸದ ರಾಶಿಯಲ್ಲಿ ನವಜಾತ ಹೆಣ್ಣು ಮಗುವೊಂದು ಅಳುತ್ತಿತ್ತು! ಆ ಮಗುವಿನ ತಾಯಿ ಹತ್ತಿರದೆಲ್ಲೆಲ್ಲಾದರೂ ಇರಬಹುದೋ ಎಂದು ಸುತ್ತ ಮುತ್ತ ಹುಡುಕಾಡಿದರೆ ಯಾರೂ ಕಣ್ಣಿಗೆ ಬೀಳಲಿಲ್ಲ.
ಅಲ್ಲೇ ನಿಂತು ಮಗುವಿಗೆ ಸಂಬಂಧಪಟ್ಟವರ್ಯಾರಾದರೂ ಬರಬಹುದೋ ಎಂದು ಕಾದರೆ ಯಾರೂ ಬರಲಿಲ್ಲ. ಏನು ಮಾಡಲೀ ಎಂದು ಆಲೋಚಿಸಿದ ಸೋಬೆರಾನ್ ಆಗುವುದಾಗಲೀ ತಾನೇ ಆ ಮಗುವನ್ನು ಸಾಕುತ್ತೇನೆ ಎಂದು ತೀರ್ಮಾನಿಸಿ ಅದನ್ನೆತ್ತಿಕೊಂಡು ಮನೆಗೆ ಬಂದನು.
ಇದು ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆ. ಮನೆಗೆ ತಂದ ಮಗುವಿಗೆ ಜ್ಯೋತಿ ಎಂದು ನಾಮಕರಣ ಮಾಡಿದನು. ಅವಿವಾಹಿತನಾದ ಸೋಬೆರಾನ್ ಜ್ಯೋತಿಗೆ ಅಪ್ಪನಾದನು. ಅದೂ ಎಂತಹ ಅಪ್ಪ ಅಂತೀರಿ! ಇಷ್ಟರ ತನಕ ಒಂದೇ ಹೊಟ್ಟೆಯನ್ನು ತುಂಬಿಸುತ್ತಿದ್ದವನ ಹೆಗಲ ಮೇಲೆ ಈಗ ಎರಡು ಹೊಟ್ಟೆಗಳ ಜವಾಬ್ದಾರಿ ಬಿತ್ತು.
ಅದಕ್ಕಾಗಿ ಮೊದಲಿಗಿಂತ ಹೆಚ್ಚು ಕಷ್ಟಪಡಬೇಕಾಯಿತು. ಜ್ಯೋತಿ ದೊಡ್ಡವಳಾದ ಮೇಲೆ ಅವಳನ್ನು ಶಾಲೆಗೆ ಸೇರಿಸಿದನು. ಆ ಬಡತನದಲ್ಲೂ ಅವಳಿಗೆ ಏನೊಂದೂ ಕೊರತೆಯಾಗದಂತೆ ನೋಡಿಕೊಂಡನು. ಎಷ್ಟೋ ಬಾರಿ ತಾನು ಉಪವಾಸವಿದ್ದು ಅವಳ ಹೊಟ್ಟೆ ತುಂಬುವಂತೆ ನೋಡಿಕೊಂಡನು.
ಜ್ಯೋತಿ ಅಪ್ಪನನ್ನೂ ಮೀರಿಸಿದ ಮಗಳು. 2013 ರಲ್ಲಿ ಅವಳು ಕಂಪ್ಯೂಟರ್ ಸಯನ್ಸ್ ಡಿಗ್ರಿ ಪಡೆದಳು. 2014 ರಲ್ಲಿ ಅಸ್ಸಾಂ ಪಬ್ಲಿಕ್ ಸರ್ವೀಸ್ ಪರೀಕ್ಷೆ ಪಾಸು ಮಾಡಿ ‘ಅಸಿಸ್ಟಂಟ್ ಇನ್ಕಮ್ ಟ್ಯಾಕ್ಸ್ ಕಮಿಷನರ್’ ಅಧಿಕಾರಿಯಾದಳು. ಕಸದ ತೊಟ್ಟಿಯಲ್ಲಿ ಬಿದ್ದು ಇನ್ನೆಂತಹದೋ ದುರಂತದ ಬದುಕನ್ನು ಕಾಣಬೇಕಾಗಿದ್ದ ಜೀವವೊಂದು ತನ್ನನ್ನು ಎತ್ತಿ ತಂದು ಬೆಚ್ಚಗಿನ ಮಡಿಲಲ್ಲಿಟ್ಟು ಸಾಕಿ ಬೆಳೆಸಿದ ಕೈಗಳಿಗೆ ಕೊಟ್ಟ ಈ ಕಾಣಿಕೆ ಸಾಮಾನ್ಯದಾದುದಲ್ಲ!
ತಾನು ಮದುವೆಯಾದಾರೆ ಬರುವವಳು ಜ್ಯೋತಿಯನ್ನು ಹೇಗೆ ಕಾಣುತ್ತಾಳೋ ಎಂಬ ಕಾರಣಕ್ಕೆ ಸೋಬೆರಾನ್ ಮದುವೆಯಾಗಲಿಲ್ಲ. ಅವನ ಬದುಕಿನ ಸರ್ವಸ್ವವೇ ಜ್ಯೋತಿಯಾಗಿದ್ದಾಳೆ. ಜ್ಯೊತಿಯೂ ತನ್ನ ಅಪ್ಪನಿಗೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾಳೆ. ಅವಳು ಅವನಿಗೆ ಮಗಳಲ್ಲದೆ ಅವನ ತಾಯಿಯೂ ಆಗಿದ್ದಾಳೆ! ‘ನೀನಿನ್ನೂ ತರಕಾರಿ ಏಕೆ ಮಾರಬೇಕು, ಮನೆಯಲ್ಲಿದ್ದು ವಿಶ್ರಾಂತಿ ಪಡೆ. ನಾನಿದ್ದೇನೆಲ್ಲ’ ಎಂದು ಅಪ್ಪನಿಗೆ ಹೇಳುತ್ತಾಳೆ. ಆದರೆ, ಸೋಬೆರಾನ್ ಈಗ ತಾನೊಬ್ಬ ಸರ್ಕಾರಿ ಅಧಿಕಾರಿಯೊಬ್ಬಳ ಅಪ್ಪನಾದರೂ ತರಕಾರಿ ಮಾರುವುದನ್ನು ಇನ್ನೂ ನಿಲ್ಲಿಸಿಲ್ಲ.
“ನಾನು ಅಂದು ಆ ಕಸದ ರಾಶಿಯಿಂದ ಎತ್ತಿ ತಂದುದು ಒಂದು ಹೆಣ್ಣು ಮಗುವಲ್ಲ, ನನ್ನ ಬದುಕನ್ನು ಬೆಳಗಿದ ಅಮೂಲ್ಯವಾದ ಒಂದು ರತ್ನವನ್ನು” ಎಂದು ಹೇಳುವಾಗ ಸೋಬೆರಾನ್ ನ ಎದೆ ಹೆಮ್ಮೆಯಿಂದ ಉಬ್ಬುತ್ತದೆ!
ಸುದ್ದಿದಿನ.ಕಾಂ|ವಾಟ್ಸಾಪ್|9980346243