ದಿನದ ಸುದ್ದಿ
ಬೆಳಗಿನ ಪ್ರಮುಖ ಸುದ್ದಿಗಳು
ಬೆಳಗಿನ ಪ್ರಮುಖ ಸುದ್ದಿಗಳು
- ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಮಧ್ಯಪ್ರದೇಶ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪಿನ ಕುರಿತು ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರ, ಮುಂದಿನ ನಡೆಯ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
- ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರವನ್ನು ಪೂರೈಕೆ ಮಾಡುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವೀಯ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕರಾವಳಿಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಇನ್ನೂ 3ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
- ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡುವ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ- 2022ಕ್ಕೆ ಡಾ.ಕೆ.ವಿ.ನಾರಾಯಣ, ಡಾ.ಓ.ಎಲ್. ನಾಗಭೂಷಣ ಸ್ವಾಮಿ ಸೇರಿದಂತೆ 7 ಮಂದಿ ಆಯ್ಕೆಯಾಗಿದ್ದಾರೆ. ಅವರಿಗೆ ಜೂನ್ 18ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
- ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜೆಡಿಎಸ್ ಕೈಗೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮ ನಾಳೆ ಸಮಾಪನಗೊಳ್ಳಲಿದೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಭರೂಚ್‌ನಲ್ಲಿ ನಡೆಯಲಿರುವ ಉತ್ಕರ್ಷ್ ಸಮಾವೇಶ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಅಗತ್ಯವಿರುವವರಿಗೆ ಸಕಾಲದಲ್ಲಿ ಆರ್ಥಿಕ ನೆರವು ನೀಡುವ ರಾಜ್ಯ ಸರ್ಕಾರದ ನಾಲ್ಕು ಯೋಜನೆಗಳು ಜಿಲ್ಲೆಯಲ್ಲಿ ಶೇಕಡ ನೂರಕ್ಕೆ ನೂರಷ್ಟು ಅನುಷ್ಠಾನಗೊಂಡಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
- ಕಾಂಗ್ರೆಸ್ ಪಕ್ಷ ಇದುವರೆಗೆ ಆಡಳಿತ ನಡೆಸಿರುವ ಎಲ್ಲ ರಾಜ್ಯಗಳಲ್ಲಿ ದೇಶದ್ರೋಹ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿಯ ವಕ್ತಾರ ಗೌರವ್ ಭಾಟಿಯಾ ಅವರು ಮಹಾರಾಷ್ಟ್ರ, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 124ಎ ದುರ್ಬಳಕೆ ಮಾಡಿಕೊಂಡಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243