ರಾಜಕೀಯ
ಲೋಕಸಭೆಗೆ ಪ್ರಜಾಕೀಯದಿಂದ ಎಲ್ಲಕ್ಷೇತ್ರಗಳಲ್ಲೂ ಸ್ಪರ್ಧೆ : ನಟ ಉಪೇಂದ್ರ
ಸುದ್ದಿದಿನ, ಬೆಂಗಳೂರು : ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಸ್ಥಾಪಿಸಿರುವ ಯುಪಿಪಿ ಪಕ್ಷದಿಂದ ಈಬಾರಿ ಲೋಕಸಭೆಗೆ ಎಲ್ಲ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಯುಪಿಪಿ ಪಕ್ಷದ ಅಭ್ಯರ್ಥಿಗೆ ಸಾತ್ ನೀಡಲು ಬಂದಾಗ ಮಾತನಾಡಿದ ಉಪೇಂದ್ರ ನಮ್ಮದು ಜನಸಾಮಾನ್ಯರ ಪಕ್ಷ ಎಂದರು. ಈಬಾರಿ ಚುನಾವಣೆಯಲ್ಲಿ ರಾಜ್ಯದ 28ಕ್ಷೇತ್ರಗಳಿಗೂ ನಮ್ಮ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಕೂಡ ಉಪೇಂದ್ರ ತಿಳಿಸಿದರು. ಜೊತೆಗೆ ಈಗಾಗಲೇ ಹದಿನಾಲ್ಕು ಅಭ್ಯರ್ಥಿಗಳು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ, ಇಷ್ಟೇ ಅಲ್ಲದೇ ಎರಡನೇ ಹಂತದ ಚುನಾವಣೆಯಿರುವ ಕ್ಷೇತ್ರಗಳಿಗೂ ನಾವು ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದೇವೆ ಎಂದರು.
ಇನ್ನು ಮಂಡ್ಯದಲ್ಲಿ ಸುಮಲತ ಹಾಗೂ ನಿಖಿಲ್ ಪರ ಉಪೇಂದ್ರ ಪ್ರಚಾರ ಮಾಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಒಂದು ಪಕ್ಷದಲ್ಲಿದ್ದು ಮತ್ತೊಂದು ಪಕ್ಷ ಅಥವಾ ವ್ಯಕ್ತಿಯ ಪರ ಪ್ರಚಾರಕ್ಕೆ ಹೋಗುವುದು ಹೇಗೆ ಸಾಧ್ಯ ಎಂದರು. ಈ ಮೂಲಕ ತಾನು ಪ್ರಕಾಶ್ ರೈ, ನಿಖಿಲ್, ಸುಮಲತಾ ಸೇರಿದಂತೆ ಯಾರ ಪರ ಪ್ರಚಾರಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401