ದಿನದ ಸುದ್ದಿ

ಮತದಾನ ಜಾಗೃತಿಗೆ ಬೃಹತ್ ಮಾನವ ಸರಪಳಿಯಲ್ಲಿ ಕರ್ನಾಟಕ ನಕ್ಷೆ : ಗಮನ ಸೆಳೆದ ಗೀತೆ,ನೃತ್ಯ

Published

on

ಸುದ್ದಿದಿನ,ಧಾರವಾಡ : ಏಪ್ರಿಲ್ 23 ರಂದು ಜರುಗುವ ಲೋಕಸಭಾ ಚುನಾವಣೆ ಮತದಾನದಲ್ಲಿ ಉತ್ತಮ ಮತದಾನ ದಾಖಲಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ನಿರಂತರವಾಗಿ ವೈವಿಧ್ಯಮಯ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ( ಸ್ವೀಪ್) ಸಮಿತಿಯ ಆಶ್ರಯದಲ್ಲಿಂದು ಬೆಳಿಗ್ಗೆ ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಂದ ಬೃಹತ್ ಮಾನವ ಸರಪಳಿ, ಚುನಾವಣಾ ಜಾಗೃತಿ ಗೀತೆ ,ನೃತ್ಯ ಕಾರ್ಯಕ್ರಮಗಳು ಜರುಗಿದವು.

ಆಂಗ್ಲ ವರ್ಣಮಾಲೆಯ DWD,SVEEP ಹಾಗೂ ಕರ್ನಾಟಕ ನಕಾಶೆಯ ಮಾದರಿಯಲ್ಲಿ ನಿಂತ ಸಹಸ್ರಾರು ವಿದ್ಯಾರ್ಥಿಗಳು, ಚುನಾವಣಾ ಜಾಗೃತಿ ಗೀತೆಗಳಿಗೆ ಆಕರ್ಷಕ ಹೆಜ್ಜೆಗಳನ್ನು ಹಾಕಿದರು. ಗ್ರಾಮೀಣ ಶಾಲಾ ಶಿಕ್ಷಕಿಯರು ಲೋಕಸಭಾ ಚುನಾವಣೆ 2019 ಎಂದು ಬರೆದ ಬಿಂದಿಗೆಗಳೊಂದಿಗೆ ಹ್ಯಾಪಿ ವೋಟರ್ಸ್ ಡೇ … ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು. ನೆರೆದ ಸಾವಿರಾರು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಇದೇ ಮೊದಲ ಬಾರಿಗೆ ಮತದಾನಕ್ಕೆ ಅರ್ಹತೆ ಪಡೆದಿರುವ ಯುವಜನರು, ಮತಚಲಾಯಿಸಿ ಬೆರಳಿಗೆ ಹಾಕಿಸಿಕೊಂಡ ಶಾಹಿ ಹಾಗೂ ಮತಗಟ್ಟೆ ಕಾಣುವ ಹಾಗೆ ಸೆಲ್ಫಿ ತೆಗೆದುಕೊಂಡು ಜಿಲ್ಲಾ ಸ್ವೀಪ್ ಸಮಿತಿಗೆ ಕಳಿಸಿದರೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವದು. ಮತದಾನಕ್ಕೆ ಅರ್ಹತೆ ಹೊಂದದೇ ಇರುವ ಮಕ್ಕಳು ತಮ್ಮ ಪಾಲಕರು,ಪೋಷಕರಿಗೆ ಯಾವುದೇ ಆಸೆ,ಆಮಿಷಗಳಿಗೆ ಒಳಗಾಗದೇ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಬೇಕು ಎಂದರು.

ಎಫ್.ಬಿ.ಕಣವಿ,ರಾಮು ಮೂಲಗಿ, ಪ್ರಕಾಶ ಕಂಬಳಿ ,ಬಾಬಾಜಾನ್ ಮುಲ್ಲಾ ಮತ್ತು ತಂಡದವರು ಸುಶ್ರಾವ್ಯವಾದ ಚುನಾವಣಾ ಜಾಗೃತಿ ಗೀತೆಗಳನ್ನು ಹಾಡಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ,ಜಿಪಂ ಸಿಇಓ ಡಾ.ಬಿ.ಸಿ.ಸತೀಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್. ಮುನಿರಾಜು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜ ವರವಟ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಎ.ಎಂ.ಮಿರ್ಜಣ್ಣವರ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ.ಖಾಜಿ,ವಿದ್ಯಾ ನಾಡಿಗೇರ, ಎಸ್.ಎಂ.ಹುಡೇದಮನಿ, ಸ್ವೀಪ್ ಸಮಿತಿಯ ಕೆ.ಎಂ.ಶೇಖ್, ಜಿ.ಎನ್.ನಂದನ ಮತ್ತಿತರರ ಅಧಿಕಾರಿಗಳು ಇದ್ದರು.

ಗಮನ ಸೆಳೆದ ವಿದ್ಯಾರ್ಥಿಗಳ ವಾದ್ಯಮೇಳ

ಕರ್ನಾಟಕ ಕಾಲೇಜು ಆವರಣದಲ್ಲಿ ಇಂದು ಬೆಳಿಗ್ಗೆ ನಡೆದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪ್ರೆಸೆಂಟೆಷನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ವಾದ್ಯವೃಂದ ( ಬ್ಯಾಂಡ್ ಟ್ರೂಪ್) ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದು ಕೊಟ್ಟು ಸಾರ್ವಜನಿಕರ ಗಮನ ಸೆಳೆಯಿತು. ವಾದ್ಯಮೇಳದ ಮೂಲಕ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಪಥಸಂಚಲನದಲ್ಲಿ ಬರಮಾಡಿಕೊಂಡ ತಂಡ ನಂತರ ಸಾರೇ ಜಹಾಂಸೆ ಅಚ್ಚಾ. ಹಾಗೂ ರಾಷ್ಟ್ರಗೀತೆಗಳನ್ನು ಲಯಬದ್ಧವಾಗಿ ನುಡಿಸಿತು. ಧಾರವಾಡದ ವಿವಿಧ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು,ಟ್ಯುಟೋರಿಯಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version