ದಿನದ ಸುದ್ದಿ
ಹೊಸಪೇಟೆ |10 ಲಕ್ಷ ರೂ ಅನುದಾನ ದುರ್ಬಳಕೆ ; ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಶಿವಪ್ಪ ಮೇಲೆ ವಂಚನೆ ಆರೋಪ ; ಲೋಕಾಯುಕ್ತಕ್ಕೆ ದೂರು
ಸುದ್ದಿದಿನ,ಹೊಸಪೇಟೆ:ನಗರದ ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಕೆ.ಶಿವಪ್ಪ ಅವರು ನಕಲಿ ಜಿ.ಎಸ್.ಟಿ ಬಿಲ್ಲುಗಳನ್ನು ಸೃಷ್ಟಿಸಿ 10 ಲಕ್ಷ ರೂಪಾಯಿ ಸರ್ಕಾರದ ಅನುದಾನವನ್ನು ವಂಚಿಸಿರುವುದನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಂಶುಪಾಲರಾದ ಶ್ರೀ ಕೆ.ಶಿವಪ್ಪ ಇವರು ಕಾಲೇಜಿನ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ವಿಚಾರವು ಅಧಿಕೃತ ಮೂಲಗಳಿಂದ ನಮ್ಮ ಗಮನಕ್ಕೆ ಬಂದ ಕಾರಣದಿಂದಾಗಿ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ವೇತನೇತರ ಕಾಲೇಜು ನಿರ್ವಹಣೆಗಾಗಿ ಮಂಜೂರಾಗಿರುವ ಹಣಕಾಸಿ ವಹಿವಾಟಿಗೆ ಸಂಬಂಧಿಸಿದ 2023-24ನೇ ಸಾಲಿನಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದು ಪರಿಶೀಲನೆ ಮಾಡಿದ ಸಮಯದಲ್ಲಿ ಸಾಕಷ್ಟು ಅನುದಾನವನ್ನು ‘ಕಾನೂನುಬಾಹಿರವಾಗಿ ಬಳಸಿಕೊಳ್ಳುವ ಮೂಲಕ ಸರ್ಕಾರದ ಮಾಡಿಕೊಂಡಿರುವ ಅಂಶಗಳನ್ನು ನಮ್ಮ ಗಮನಕ್ಕೆ ಬಂದಿರುತ್ತವೆ ಎಂದರು.
2023-24ನೇ ಸಾಲಿನಲ್ಲಿ ಖಜಾನೆ-2ರ 62-ಬಿ ಗೆ ಸಂಬಂಧಿಸಿದಂತೆ ಒಟ್ಟು ರೂ. 17,10,891/- (ಹದಿನೇಳು ಲಕ್ಷದ ಹತ್ತು ಸಾವಿರದ ಎಂಟು ನೂರ ತೊಂಬತ್ತೊಂದು ರೂಪಾಯಿಗಳು) ಸರ್ಕಾರದ ಅನುದಾನವನ್ನು ಕಛೇರಿ ವೆಚ್ಚವಾಗಿ ಬಳಸಿಕೊಳ್ಳಲಾಗಿದೆ.
ಈ ಅನುದಾನದಲ್ಲಿ ದಿನಾಂಕ: 16-03-2024 ರಂದು ರೂ. 10.00000/- (ಹತ್ತು ಲಕ್ಷ ರೂಪಾಯಿ) ವೆಚ್ಚದಲ್ಲಿ ಕಾಲೇಜಿಗೆ ಆಗತ್ಯವಿರುವ ಪರಿಕರಗಳನ್ನು ಒಂದೇ ದಿನ ಕರ್ನಾಟಕದ ಮೂರು ಭಾಗಗಳಲ್ಲಿ ಅಂದರೆ, ಕೆ.ವಿ ಎಂಟರ್ ಪ್ರೈಸಸ್, ಕೆ.ಚನ್ನಸಂದ್ರ, ಬೆಂಗಳೂರು, ಅಂಜನ್ ಎಂಟರ್ ಪ್ರೈಸಸ್, ಯಲಹಂಕ, ಬೆಂಗಳೂರು ಹಾಗೂ ಎಸ್.ಎಸ್ ಎಂಟರ್ ಪ್ರೈಸಸ್, ಗುಬ್ಬಿ, ತುಮಕೂರು ಜಿಲ್ಲೆ ಈ ಮೂರು ಕಡೆಗಳಲ್ಲಿ ಏಕಕಾಲದಲ್ಲಿ ಖರೀದಿಸಿರುವುದಾಗಿ ಹಣ ಪಾವತಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಮೂರು ಬಿಲ್ಲುಗಳನ್ನು ಪರಿಶೀಲಿಸಿ ನೋಡಿದ ಸಂದರ್ಭದಲ್ಲಿ ಈ ಮೂರು ಜಿ.ಎಸ್.ಟಿ ಬಿಲ್ಲುಗಳು ನಕಲಿ ಬಿಲ್ಲುಗಳು ಎಂಬುದು ಈ ಬಿಲ್ಲುಗಳಲ್ಲಿ ನಮೂದಾಗಿರುವ ಸಂಖ್ಯೆಗಳನ್ನು ಪರಿಶೀಲನೆ ಮಾಡಿದಾಗ ಕಂಡುಬಂದಿರುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243