ದಿನದ ಸುದ್ದಿ

18ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭ

Published

on

ಸುದ್ದಿದಿನಡೆಸ್ಕ್:18ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದೆ. ಅಧಿವೇಶನದಲ್ಲಿ ನೂತನವಾಗಿ ಚುನಾಯಿತಗೊಂಡಿರುವ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಬಿಜೆಪಿಯ ಹಿರಿಯ ಸಂಸದ ಭತೃಹರಿ ಮೆಹತಾಬ್ ಅವರು, ಲೋಕಸಭೆಗೆ ಚುನಾಯಿತರಾಗಿರುವ ಸದಸ್ಯರುಗಳಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಬುಧವಾರ ಲೋಕಸಭೆಯ ಹೊಸ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಗುರುವಾರ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ.

ಗುರುವಾರ ರಾಜ್ಯಸಭೆಯ ಕಲಾಪ ಆರಂಭಗೊಳ್ಳಲಿದೆ. ಸಂಸತ್ತಿನ ಅಧಿವೇಶನ ಮುಂದಿನ ತಿಂಗಳ 3 ರಂದು ಸಮಾಪನಗೊಳ್ಳಲಿದೆ. ಲೋಕಸಭೆಯ ಸಮಾವೇಶಕ್ಕೆ ಮುನ್ನ ಹಂಗಾಮಿ ಸ್ಪೀಕರ್ ಭತೃಹರಿ ಮೆಹತಾಬ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಬೋಧಿಸಲಿದ್ದಾರೆ.

ಲೋಕಸಭೆ ಸಮಾವೇಶಗೊಂಡ ನಂತರ ಮೆಹತಾಬ್ ಅವರು, ಲೋಕಸಭೆಯ ನಾಯಕರು ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲು ಪ್ರಮಾಣವಚನ ಬೋಧಿಸಲಿದ್ದಾರೆ. ನಂತರ ಹೊಸದಾಗಿ ಚುನಾಯಿತರಾಗಿರುವ ಕೇಂದ್ರ ಸಚಿವರಿಗೆ ಪ್ರಮಾಣವಚನ ಬೋಧಿಸಲಾಗುವುದು. ಬಳಿಕ ಇತರ ಸದಸ್ಯರಿಗೆ ಪ್ರಮಾಣವಚನ ನೀಡಲಾಗುವುದು.

ನೂತನ ಸ್ಪೀಕರ್ ಆಯ್ಕೆಯವರೆಗೆ ಸಂಸತ್ತಿನಲ್ಲಿ ಕಲಾಪ ನಡೆಸಲು ಭತೃಹರಿ ಮೆಹತಾಬ್ ಅವರಿಗೆ ನೆರವು ನೀಡಲು ನೇಮಿಸಲಾಗಿರುವ ಸಭಾಧ್ಯಕ್ಷರ ಸಮಿತಿಯ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಗುವುದು. ನೀಟ್ ಹಾಗೂ ಇತರ ಪರೀಕ್ಷೆಗಳಿಗೆ ಸಂಬಂಧಿಸಿದ ವಿವಾದಗಳ ಹಿನ್ನೆಲೆಯಲ್ಲಿ ಅಧಿವೇಶನ ಸಮಾವೇಶಗೊಳ್ಳುತ್ತಿರುವ ಕಾರಣ ಹೊಸ ಲೋಕಸಭೆಯ ಮೊದಲ ಅಧಿವೇಶನದಲ್ಲೇ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷಗಳು ಆಲೋಚಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version