ದಿನದ ಸುದ್ದಿ

ಪ್ರೀತಿಯ ಅಲೆಯೂ ಧರ್ಮ ಯುದ್ಧದ ಬಲೆಯೂ

Published

on

  • ನಾ ದಿವಾಕರ

ನುಕುಲದ ಇತಿಹಾಸದಲ್ಲಿ ಪ್ರೀತಿಸುವ ಹೃದಯಗಳು ಯಾವುದೇ ಕಾಲಘಟ್ಟದಲ್ಲೂ ಯುದ್ಧ ಬಯಸಿಲ್ಲ. ಆದರೆ ಪ್ರೀತಿ ಪ್ರೇಮದ ಭಾವನೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಪ್ರಯತ್ನಗಳು ಯುದ್ಧಗಳಿಗೆ ಕಾರಣವಾಗಿವೆ. ಪುರಾಣ ಮತ್ತು ಮಿಥ್ಯೆಗಳಲ್ಲಿ ಇಂತಹ ಕೆಲವು ಸಂದರ್ಭಗಳನ್ನು ಕಾಣುವಂತೆಯೇ ಆಧುನಿಕ ಇತಿಹಾಸದಲ್ಲೂ ಹಲವು ಮಿಥ್ಯೆಗಳು ಗಂಡು ಹೆಣ್ಣಿನ ನಡುವಿನ ಪ್ರೀತಿ ಯುದ್ಧಗಳಿಗೆ ಕಾರಣವಾಗಿರುವುದನ್ನು ಸೂಚಿಸುತ್ತವೆ. ಆದರೆ ಆಧುನಿಕ ಪ್ರಪಂಚ ಇವೆಲ್ಲ ಸಂಕುಚಿತತೆಯನ್ನೂ ಮೀರಿ ಮುನ್ನಡೆದಿದೆ. ವಿಶ್ವದ ಹಲವಾರು ಸಾಂಪ್ರದಾಯಿಕ ಸಮಾಜಗಳು ತಮ್ಮ ಜಡ್ಡುಗಟ್ಟಿದ ಸಂಪ್ರದಾಯ ಮತ್ತು ಪರಂಪರೆಯನ್ನು ಕೊಡವಿಕೊಂಡು ಆಧುನಿಕತೆಯತ್ತ ಮುನ್ನಡೆದಿವೆ.

ಪ್ರೀತಿ, ಪ್ರೇಮ ಮತ್ತು ಹೃದಯಗಳನ್ನು ಬೆಸೆಯುವ ಸೂತ್ರ ಇಲ್ಲದೆ ಹೋಗಿದ್ದರೆ ಭಾರತದಲ್ಲಿ ಕಮರ್ಷಿಯಲ್ ಸಿನಿಮಾ ಎಂದೋ ಅವಸಾನ ಹೊಂದುತ್ತಿತ್ತಲ್ಲವೇ ? ಏಕೆ ಹೀಗೆ ಎಂದು ಒಮ್ಮೆ ಯೋಚಿಸಿ ನೋಡಿದರೆ ನಮ್ಮ ಪರಂಪರೆಯಲ್ಲೇ ಪ್ರೀತಿ ಎನ್ನುವುದು ಒಂದು ಅಮೂರ್ತ ನೆಲೆಯಲ್ಲಿ ಹಾಸು ಹೊಕ್ಕಾಗಿದೆ. ಪುರಾಣ ಕಥನಗಳ ಋಷಿಮುನಿಗಳಿಂದ ಹಿಡಿದು ಮಹಾಭಾರತದ ಕೃಷ್ಣನವರೆಗೂ ಪ್ರೀತಿ ಎನ್ನುವುದು ಎರಡು ಮನಸುಗಳ, ಹೃದಯಗಳ ಬೆಸುಗೆಯ ಸೇತುವೆಯಾಗಿಯೇ ಬೆಳೆದುಬಂದಿದೆ. ಹಲವರ ಆರಾಧ್ಯ ದೈವ ಕೃಷ್ಣನನ್ನು ನೆನೆಯುವಾಗ ನಮಗೆ ನೆನಪಾಗುವುದು ರಾಧೆಯೇ ಹೊರತು ರುಕ್ಮಿಣಿ-ಸತ್ಯಭಾಮ ಅಲ್ಲ.

ಈ ಒಂದು ಪರಂಪರೆಯಲ್ಲಿ ಬೆಳೆದು ಬಂದಿರುವ ಭಾರತದ ಇತಿಹಾಸದಲ್ಲಿ ಪ್ರೀತಿ ಪ್ರೇಮ ಎನ್ನುವುದಕ್ಕೆ ಒಂದು ವಿಶೇಷ ಅರ್ಥವನ್ನೂ ಕಲ್ಪಿಸಲಾಗಿದೆ. ಯಾವುದೇ ಕಾಲಘಟ್ಟದಲ್ಲೂ ಈ ಪ್ರೀತಿ ಪ್ರೇಮದ ಲಹರಿಗೆ ಲಂಗರು ಹಾಕಿರುವುದನ್ನು ಗುರುತಿಸಲಾಗುವುದಿಲ್ಲ. ಕಾಳಿದಾಸನ ಕಾವ್ಯಗಳಿಂದ ಹಿಡಿದು ಇತ್ತೀಚಿನ ಕವಿ ಪುಂಗವರ ಪದ್ಯಗಳವರೆಗೆ ಪ್ರೀತಿ ಮತ್ತು ಪ್ರೇಮ ಒಂದು ಭಾವುಕ ಸೇತುವೆಯಾಗಿ ನಮ್ಮ ಸಂಪ್ರದಾಯ ಮತ್ತು ಪರಂಪರೆಯಲ್ಲಿ ಸೇರಿಕೊಂಡಿದೆ.

ಜಾತಿ ಶ್ರೇಷ್ಠತೆ ಮತ್ತು ಶ್ರೇಣೀಕರಣದ ವ್ಯಸನದಿಂದ ಮಾನವೀಯ ಸಂವೇದನೆಯನ್ನೇ ಕಳೆದುಕೊಂಡಿರುವ ಭಾರತದಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಅಡ್ಡಗೋಡೆಗಳನ್ನು ದಾಟಿ ಮನುಜ ಸಂಬಂಧಗಳನ್ನು ಬೆಸೆಯಲು ಪ್ರೀತಿ ಮತ್ತು ಪ್ರೇಮ ಸುಭದ್ರ ಸೇತುವೆಯಾಗಿಯೇ ಕಾಣುತ್ತದೆ. ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲೂ ಅಂತರ್ಜಾತಿ ವಿವಾಹಗಳನ್ನು ಒಂದು ಪ್ರಬಲ ಅಸ್ತ್ರದಂತೆ ಬಳಸುತ್ತಿರುವುದನ್ನೂ ಕಾಣುತ್ತಿದ್ದೇವೆ.

ಪ್ರೀತಿಸುವ ಹೃದಯಗಳ ನಡುವೆಯೂ ಯುದ್ಧ ಸಂಭವಿಸುತ್ತದೆ. ಭಾವುಕ ನೆಲೆಯಲ್ಲಿ, ಸಂವೇದನೆಯ ನೆಲೆಯಲ್ಲಿ. ಎರಡು ಜೀವಗಳು ಒಂದಾಗುವಾಗ ತಮ್ಮ ನಡುವಿನ ಎಲ್ಲ ಅಡ್ಡಗೋಡೆಗಳನ್ನೂ ಕೆಡವಿ ಮುನ್ನುಗ್ಗಲು ಸಾತ್ವಿಕ ರೀತಿಯಲ್ಲೇ ತಾತ್ವಿಕ ಯುದ್ಧ ನಡೆಸಬೇಕಾಗುತ್ತದೆ. ಈ ಯುದ್ಧದಲ್ಲಿ ಅಂತ್ಯವಾಗುವುದು ಅಸ್ಮಿತೆಯ ಅಡಿಪಾಯ , ಸಾಮಾಜಿಕ ಕಟ್ಟುಪಾಡುಗಳ ತಡೆಗೋಡೆಗಳು, ಮನದಾಳದ ಸುಪ್ತ ಪೂರ್ವಗ್ರಹಗಳು ಮತ್ತು ಜಾತಿ ಪ್ರಜ್ಞೆ – ಮತಧರ್ಮ ಪ್ರಜ್ಞೆ. ಇದು ನಿಜವಾದ ಲವ್ ಜಿಹಾದ್. ಪ್ರೀತಿಗಾಗಿ ನಡೆಯುವ ಯುದ್ಧ. ಒಂದು ಪ್ರಜ್ಞಾವಂತ ಸಮಾಜ ಇದನ್ನು ಸ್ವೀಕರಿಸುವುದೇ ಅಲ್ಲ, ಸ್ವಾಗತಿಸಬೇಕು, ಅಪ್ಪಿಕೊಳ್ಳಬೇಕು.

ಆದರೆ ಭಾರತ ತನ್ನ ಮೂಲ ಪರಂಪರೆಯ ಬೇರುಗಳನ್ನೇ ತೊರೆದು, ಬಹುಮುಖಿ ಸಂಸ್ಕೃತಿಯ ಬೇರುಗಳನ್ನು ಮರೆತು, ಏಕಮುಖಿ ಸಂಸ್ಕೃತಿಯತ್ತ ದಾಪುಗಾಲು ಹಾಕುತ್ತಿರುವುದರಿಂದ ಈ ಸಂವೇದನಾಶೀಲ ಪ್ರಜ್ಞೆಯನ್ನು ಕಳೆದುಕೊಂಡಿದೆ. ಶ್ರೇಷ್ಠತೆಯ ವ್ಯಸನದಲ್ಲಿ ಮೈಮರೆತಿರುವ ಭಾರತದ ಸಾಂಪ್ರದಾಯಿಕ ಮನಸುಗಳು ತಮ್ಮ ಬೇರುಗಳನ್ನು ಅರಸುತ್ತಾ ಹೋದಂತೆಲ್ಲಾ ವರ್ಣ ಸಂಕರದ ಸಣ್ಣ ಬೇರುಗಳೂ ಕಾಣುತ್ತಾ ಹೋಗುತ್ತದೆ.

ಈ ಸಣ್ಣ ಬೇರುಗಳನ್ನು ಕಿತ್ತೊಗೆಯುವ ಮೂಲಕ ನವ ಭಾರತವನ್ನು ನಿರ್ಮಿಸುವ ಪ್ರಯತ್ನಗಳನ್ನು ಈ ಹೊತ್ತಿನ ಸಮಾಜೋ ಸಾಂಸ್ಕೃತಿಕ ರಾಜಕಾರಣದಲ್ಲಿ ಕಾಣುತ್ತಿದ್ದೇವೆ. ಹಾಗೆಯೇ ಮತಧರ್ಮದ ಅಮಲು ಹೆಚ್ಚಾಗುತ್ತಿರುವಂತೆಲ್ಲಾ ಸಾಂಪ್ರದಾಯಿಕ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಈ ಹಿನ್ನೆಲೆಯಲ್ಲೇ ಭಾರತದ ಸಾಂಸ್ಕೃತಿಕ ರಾಜಕಾರಣ ಲವ್ ಜಿಹಾದ್ ಎನ್ನುವ ಒಂದು ಕಾಲ್ಪನಿಕ ಅಭಿವ್ಯಕ್ತಿಯನ್ನು ಸಾರ್ವತ್ರಿಕ ಪರಿಕಲ್ಪನೆಯನ್ನಾಗಿ ಮಾರ್ಪಡಿಸಲು ಯತ್ನಿಸುತ್ತಿದೆ. ಪ್ರೀತಿಸಿ ಮದುವೆಯಾಗುವ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕರ ನಡುವೆ ಒಂದು ಸಾಂಸ್ಕೃತಿಕ ಗೋಡೆಯನ್ನು ನಿರ್ಮಿಸುವ ಪ್ರಯತ್ನ ನಡೆದಿದೆ.

ಒಂದು ದಶಕದ ಹಿಂದೆ ಕೇರಳದಲ್ಲಿ ರೂಪುಗೊಂಡ ಈ ಕಲ್ಪನೆಗೆ ಈಗ ರೆಕ್ಕೆ ಪುಕ್ಕ ಬಂದಿದ್ದು ದೇಶವ್ಯಾಪಿಯಾಗಿ ಹರಡಿದೆ. ಎರಡು ಹೃದಯಗಳ ಬೆಸುಗೆಯನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಷ್ಕರ್ಷೆಗೊಳಪಡಿಸುವ ಮೂಲಕ ಮನುಜ ಸಂಬಂಧಗಳನ್ನು ವಿಭಜಕ ರಾಜಕಾರಣದ ಅಸ್ತ್ರಗಳಂತೆ ಬಳಸುವ ಈ ಪ್ರಯತ್ನಗಳಿಗೆ ಮತೀಯ ರಾಜಕಾರಣ ಮತ್ತಷ್ಟು ಪುಷ್ಟಿ ನೀಡುತ್ತಿದೆ.

ಪಿತೃಪ್ರಧಾನ ಧೋರಣೆ ಮತ್ತು ಪುರುಷಾಧಿಪತ್ಯದ ಅಹಮಿಕೆ ಆಳವಾಗಿ ಬೇರೂರಿರುವ ಭಾರತೀಯ ಸಮಾಜದಲ್ಲಿ, ಯಾವುದೇ ಸಮುದಾಯದಲ್ಲಾದರೂ, ಮಹಿಳೆ ವಿವಾಹಾನಂತರ ತನ್ನ ಪತಿಯ ಕೌಟುಂಬಿಕ ಸಂಪ್ರದಾಯಗಳನ್ನು ಅನುಸರಿಸುವುದನ್ನು ಕಾಣಬಹುದು. ಇದು ಅಂತರ್ಜಾತಿ ವಿವಾಹದಲ್ಲಿ ಹೇಗೆ ಹೇರಲ್ಪಡುವುದೋ ಅಂತರ್ಧಮೀಯ ಮದುವೆಗಳಲ್ಲೂ ಹಾಗೆಯೇ ಹೇರಲಾಗುತ್ತದೆ. ತಮ್ಮದಲ್ಲದ ಜಾತಿ ಅಥವಾ ಧರ್ಮದ ವ್ಯಕ್ತಿಯನ್ನು ಮದುವೆಯಾದ ನಂತರ ಮೂಲ ಜಾತಿ ಮತ್ತು ಧರ್ಮಗಳ ಅಸ್ಮಿತೆಗಳಿಂದ ಹೊರಬಂದರೆ ಮಾತ್ರವೇ ಇದು ಅನ್ವಯಿಸುವುದಿಲ್ಲ.

ಬ್ರಾಹ್ಮಣರಲ್ಲೇ ಉಪಪಂಗಡಗಳಲ್ಲಿ ಹೆಣ್ಣು ವಿವಾಹವಾದ ಕೂಡಲೇ ತನ್ನ ಮನೆದೇವರನ್ನು ಕಳೆದುಕೊಳ್ಳುತ್ತಾಳೆ, ಪೂಜಾ ಸಂಪ್ರದಾಯಗಳನ್ನು ಕಳೆದುಕೊಳ್ಳುತ್ತಾಳೆ ಮತ್ತು ತನ್ನ ಹುಟ್ಟಿನ ಗೋತ್ರವನ್ನೂ ಗಂಡಿಗೆ ಧಾರೆ ಎರೆದು ಕೊಡುತ್ತಾಳೆ. ಕನ್ಯಾದಾನ ಮತ್ತು ಧಾರೆ ಎನ್ನುವುದು ಹೆಣ್ಣಿನ ಪಾಲಿಗೆ ಈ ಕಳೆದುಕೊಳ್ಳುವ ಪ್ರಕ್ರಿಯೆಯೇ ಆಗಿರುತ್ತದೆ. ಹಾಲೆರೆದು ತಮ್ಮ ಹೆಣ್ಣು ಮಕ್ಕಳನ್ನು ಧಾರೆ ಎರೆದು ಕೊಡುವ ಪೋಷಕರು ತಾವು ಮಗಳಿಗೆ ನೀಡಿದ್ದ ಎಲ್ಲ ಅಸ್ಮಿತೆಗಳನ್ನೂ ಕಳಚಿ ಗಂಡಿನ ಕುಟುಂಬಕ್ಕೆ ಅರ್ಪಿಸುತ್ತಾರೆ.

ಇದಕ್ಕೆ ಸಾಕ್ಷೀಭೂತವಾಗಿರಲೆಂದು ಕುಟುಂಬದ ಮತ್ತು ನೆಂಟರಿಷ್ಟರ ಹಿರಿಯರು ಹಾಲೆರೆಯುವ ಸಂಪ್ರದಾಯವನ್ನೂ ಗುರುತಿಸಬಹುದು. ಬ್ರಾಹ್ಮಣ ಹುಡುಗಿ ಲಿಂಗಾಯತನನ್ನು ಮದುವೆಯಾದರೆ ಮದುವೆಗೂ ಮುಂಚೆಯೇ ಹುಡುಗಿಗೆ ಲಿಂಗಧಾರಣೆ ಮಾಡುವ ಮೂಲಕ ಮತಾಂತರಗೊಳಿಸಿ ನಂತರ ಧಾರೆ ಎರೆದುಕೊಡಲಾಗುತ್ತದೆ.

ಇದು ಭಾರತೀಯ ಸಂಪ್ರದಾಯದಲ್ಲಿ ಬೆಳೆದುಬಂದಿರುವ ಪದ್ಧತಿ. ಇದನ್ನು ಜಾತಿಯಿಂದಾಚೆಗೆ ವಿಸ್ತರಿಸಿ ಅನ್ಯ ಧರ್ಮೀಯರನ್ನು ಗಮನಿಸಿದರೂ ಯಾವುದೇ ಕ್ರೈಸ್ತ , ಜೈನ, ಬೌದ್ಧ ಪುರುಷ ಹಿಂದೂ ಮಹಿಳೆಯನ್ನು ವಿವಾಹವಾದರೆ ತನ್ನ ಧರ್ಮವನ್ನು ಬದಲಿಸುವುದಿಲ್ಲ. ಮಹಿಳೆ ಹೊಸ ಧರ್ಮವನ್ನು ಒಪ್ಪಿಕೊಂಡು ಕೆಲವೊಮ್ಮೆ ತನ್ನ ಹೆಸರನ್ನೂ ಬದಲಾಯಿಸಬೇಕಾಗುತ್ತದೆ. ಕರಾವಳಿ ಮತ್ತು ದಕ್ಷಿಣ ಕನ್ನಡದ ಕಡೆ ಗೌಡ ಸಾರಸ್ವತ ಬ್ರಾಹ್ಮಣರಲ್ಲಿ, ಭಂಟರಲ್ಲಿಯೂ ಈ ಹೆಸರು ಬದಲಾವಣೆ ಅನಿವಾರ್ಯವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಈ ಸಂಪ್ರದಾಯಗಳು ತಪ್ಪು ಸರಿ ಎನ್ನುವುದಕ್ಕಿಂತಲೂ, ಎಲ್ಲ ಧರ್ಮಗಳಲ್ಲೂ ಪುರುಷಾಧಿಪತ್ಯ ಮತ್ತು ಪಿತೃಪ್ರಧಾನ ಧೋರಣೆ ಹೇಗೆ ಬೇರುಬಿಟ್ಟಿದೆ ಎನ್ನುವುದನ್ನು ಗಮನಿಸುವುದರೆ ಸಮಾಜ ಭಿನ್ನವಾಗಿ ಯೋಚಿಸಲು ಸಾಧ್ಯ.

ಇದೇ ಸಂಪ್ರದಾಯ ಮತ್ತು ಧೋರಣೆ ಇಸ್ಲಾಂ ಧರ್ಮದಲ್ಲೂ ಇದೆ. ಹಿಂದೂ ಹುಡುಗಿಯನ್ನು ವಿವಾಹವಾಗುವ ಮುಸ್ಲಿಂ ಪುರುಷ ತನ್ನ ಪತ್ನಿ ತನ್ನ ಧರ್ಮ, ತನ್ನ ಧರ್ಮಸೂಚಕ ಹೆಸರು ಮತ್ತು ಉಡುಪು ಹಾಗೂ ಸಂಪ್ರದಾಯವನ್ನು ಪಾಲಿಸಬೇಕು ಎಂದು ಅಪೇಕ್ಷಿಸುತ್ತಾನೆ. ಇದು ಸಂಘಪರಿವಾರದ ಕಣ್ಣಿಗೆ ಲವ್ ಜಿಹಾದ್ ಹಾಗೆ ಕಾಣುತ್ತದೆ. ಇಸ್ಲಾಂ ಧರ್ಮದಲ್ಲಿ ಬಳಸಲಾಗುವ ಜಿಹಾದ್ ಎನ್ನುವ ಪದಕ್ಕೆ ನಾನಾ ಅರ್ಥಗಳಿವೆ. ತನ್ನೊಳಗಿನ ದುಷ್ಟ ಭಾವನೆಗಳನ್ನು ತೊಡೆದುಹಾಕಲು ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಆಂತರ್ಯವನ್ನು ಶೋಧಿಸುವ ಮೂಲಕ ಮುಕ್ತನಾಗುವ ಪ್ರಕ್ರಿಯೆಯನ್ನೂ ಜಿಹಾದ್ ಎನ್ನಲಾಗುತ್ತದೆ.

ಇಸ್ಲಾಂ ಧರ್ಮದ ರಾಜಕೀಕರಣ ಮತ್ತು ರಾಜಕೀಯದ ಇಸ್ಲಾಮೀಕರಣ ಈ ಎರಡು ಜಾಗತಿಕ ವಿದ್ಯಮಾನಗಳು ಜಿಹಾದ್ ಪದಕ್ಕೆ ಅನ್ಯ ಅರ್ಥಗಳನ್ನೂ ಕಲ್ಪಿಸಿವೆ. ಇಸ್ಲಾಂ ಧರ್ಮವನ್ನು ವಿಸ್ತರಿಸಲು, ಅನ್ಯ ಧರ್ಮೀಯರನ್ನು ಇಸ್ಲಾಂ ಕಡೆಗೆ ಆಕರ್ಷಿಸಲು ನಡೆಸಲಾಗುವ ಸಮರವನ್ನೂ ಜಿಹಾದ್ ಎಂದೇ ಕರೆಯಲಾಗುತ್ತದೆ.

ಭಾರತದ ಸಂದರ್ಭದಲ್ಲಿ ಜಿಹಾದ್ ಎನ್ನುವ ಪದ ಬಳಕೆಗೆ ಬಂದಿರುವುದು ಜಾಗತಿಕ ಭಯೋತ್ಪಾದನೆ ಮತ್ತು ತಾಲಿಬಾನ್ ನಂತಹ ಉಗ್ರವಾದಿ ಚಟುವಟಿಕೆಗಳು ಮುನ್ನೆಲೆಗೆ ಬಂದ ನಂತರ, ಮೂರು ದಶಕಗಳಿಂದೀಚೆಗೆ. ಭೌಗೋಳಿಕ ಮತ್ತು ರಾಜಕೀಯ ವಿದ್ಯಮಾನಕ್ಕೆ ಸೀಮಿತವಾಗಿದ್ದ ಪರಿಕಲ್ಪನೆಯನ್ನು ಕೌಟುಂಬಿಕ ನೆಲೆಯಲ್ಲಿ ತಂದಿಟ್ಟು ನಿಷ್ಕರ್ಷೆ ಮಾಡುವುದರ ಮೂಲಕ ಮತೀಯವಾದಿ ರಾಜಕಾರಣಕ್ಕೆ ಮತ್ತಷ್ಟು ಬಲ ಒದಗಿಸುವ ಒಂದು ಪ್ರಕ್ರಿಯೆಯಾಗಿಯೇ ಲವ್ ಜಿಹಾದ್ ಪರಿಕಲ್ಪನೆಯೂ ರೂಪುಗೊಂಡಿದೆ.

ಅಲ್ಪ ಸಂಖ್ಯಾತ ಸಮುದಾಯದ ಪ್ರತ್ಯೇಕೀಕರಣದ ಮೂಲಕ “ ಅನ್ಯರ ” ಪರಿಕಲ್ಪನೆಯನ್ನು ಸಾರ್ವತ್ರೀಕರಿಸಿ, ಸಾಮುದಾಯಿಕ ಭೂತ ಸೃಷ್ಟಿಸುವ ಈ ಪ್ರಕ್ರಿಯೆಗೆ ಸುದೀರ್ಘ ಇತಿಹಾಸ ಭಾರತದಲ್ಲೂ ಇದೆ, ವಿಶ್ವದ ಇತರ ರಾಷ್ಟ್ರಗಳಲ್ಲೂ ಇದೆ. ಭಾರತದಲ್ಲಿ ಹಿಂದೂ ಧರ್ಮಕ್ಕೆ ಮುಸ್ಲಿಮರಿಂದ ಅಥವಾ ಇಸ್ಲಾಂ ಧರ್ಮದಿಂದ ಅಪಾಯ ಇದೆ ಎನ್ನುವ ಕಲ್ಪನೆಯನ್ನು ಮನೆಮನೆಯ ಅಂಗಳದಲ್ಲೂ ಬಿತ್ತನೆ ಮಾಡುವ ನಿಟ್ಟಿನಲ್ಲಿ ಲವ್ ಜಿಹಾದ್ ಒಂದು ಪ್ರಬಲ ಅಸ್ತ್ರವಾಗಿ ಪರಿಣಮಿಸಿರುವುದನ್ನು ಗಮನಿಸಬಹುದು.

ಇದು ಹಿಂದೂ ಎನ್ನಲಾಗುವ ಒಂದು ವೈದಿಕ ಧರ್ಮ ಮತ್ತು ಸಂಪ್ರದಾಯದ ಬೇರುಗಳನ್ನು ಗಟ್ಟಿಗೊಳಿಸುವ ಹಿಂದುತ್ವ ರಾಜಕಾರಣದ ಮಾದರಿ ಎನ್ನುವುದು ಸೂಕ್ತ. ಈಗ ಬಿಜೆಪಿ ಆಡಳಿತ ಇರುವ ಬಹುಪಾಲು ರಾಜ್ಯಗಳು ಲವ್‍ಜಿಹಾದ್ ಕಾನೂನುಗಳನ್ನು ಜಾರಿಗೊಳಿಸುತ್ತಿವೆ. ದೇಶದ ಸರ್ವೋಚ್ಚ ನ್ಯಾಯಾಲಯವೂ ಹಲವು ಪ್ರಕರಣಗಳ ವಿಚಾರಣೆಯ ನಂತರ ಲವ್ ಜಿಹಾದ್ ಎನ್ನುವ ಪರಿಕಲ್ಪನೆಯೇ ಹುರುಳಿಲ್ಲದ್ದು ಎಂದು ಹೇಳಿದೆ.

ಆದರೆ ಅಲಹಾಬಾದ್ ಹೈಕೋರ್ಟ್‍ನ ವಿಭಾಗೀಯ ಏಕ ಸದಸ್ಯ ಪೀಠ ಸೆಪ್ಟಂಬರ್ 2020ರಂದು ನೀಡಿದ ತೀರ್ಪಿನಲ್ಲಿ, ಮತಾಂತರದ ಉದ್ದೇಶದಿಂದ ನಡೆಯುವ ಅಂತರ್ಧರ್ಮೀಯ ವಿವಾಹಗಳು ಕಾನೂನು ಸಮ್ಮತವಲ್ಲ ಎಂದು ಹೇಳಿತ್ತು. ಆದರೆ ಈ ತೀರ್ಪನ್ನು ತಳ್ಳಿಹಾಕಿರುವ ಅಲಹಾಬಾದ್ ಹೈಕೋರ್ಟ್ ಇದು ವಯಸ್ಕ ಮಕ್ಕಳ ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳುವ ಮೂಲಕ ವಿವಾದಕ್ಕೆ ಇತಿಶ್ರೀ ಹಾಡಿದೆ. ಸೆಪ್ಟಂಬರ್ 2020ರ ತೀರ್ಪನ್ನು ಆಧರಿಸಿಯೇ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಲವ್ ಜಿಹಾದ್ ನಿಷೇಧಿಸಲು ಕಾನೂನು ಜಾರಿಗೊಳಿಸಲು ನಿರ್ಧರಿಸಿತ್ತು.

ಭಾರತದ ನ್ಯಾಯ ವ್ಯವಸ್ಥೆ ಇಂದು ಗಂಭೀರವಾಗಿ ಪರಿಗಣಿಸಬೇಕಿರುವುದು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮರ್ಯಾದಾ ಹತ್ಯೆ ಅಥವಾ ಗೌರವ ಹತ್ಯೆಯ ವಿಚಾರವನ್ನು. ಮೇಲ್ಜಾತಿಯವರನ್ನು ವಿವಾಹವಾಗುವ ಅಸ್ಪೃಶ್ಯ ಸಮುದಾಯದ, ದಲಿತ ಸಮುದಾಯದ ಯುವತಿಯರು ಕುಟುಂಬ ಗೌರವ, ಕುಲ ಮರ್ಯಾದೆಯ ಹೆಸರಿನಲ್ಲಿ ಹತ್ಯೆಗೊಳಗಾಗುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ.

ಇಂತಹ ನೂರಾರು ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿದ್ದು, ವರದಿಯಾಗದೆ ಇರುವ ಪ್ರಕರಣಗಳೂ ಹೇರಳವಾಗಿವೆ. ಜಾತಿ ಶ್ರೇಷ್ಠತೆಯ ಅಹಮಿಕೆಗೆ ಪ್ರೀತಿಸಿ ಮದುವೆಯಾಗುವ ಅಮಾಯಕ ಎಳೆ ಜೀವಗಳು ಬಲಿಯಾಗುತ್ತಿವೆ. ಈ ಮರ್ಯಾದಾ ಹತ್ಯೆಯ ರೂವಾರಿಗಳನ್ನು ನಾವು ಭಯೋತ್ಪಾದಕರಂತೆ ಏಕೆ ಕಾಣುತ್ತಿಲ್ಲ ಎಂಬ ಪ್ರಶ್ನೆಯೂ ನಮ್ಮ ಪ್ರಜ್ಞೆಯನ್ನು ಕಾಡಬೇಕಲ್ಲವೇ ?

ಲವ್ ಜಿಹಾದ್ ಪರಿಕಲ್ಪನೆಯೇ ಈ ಮರ್ಯಾದಾ ಹತ್ಯೆಗಳನ್ನು ಸಮರ್ಥಿಸುವ ಒಂದು ಸೂತ್ರ ಎನಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ಮೂಲ ವೈದಿಕ ಧರ್ಮವನ್ನು ಸಂರಕ್ಷಿಸಲು, ಅಂತರ್ಜಾತಿ ವಿವಾಹಗಳನ್ನು ತಡೆಗಟ್ಟುವುದು, ವರ್ಣಸಂಕರವನ್ನು ತಡೆಗಟ್ಟುವುದು ಸಾಂಸ್ಕೃತಿಕ ರಾಜಕಾರಣದ ಒಂದು ಆಯಾಮವೂ ಆಗಿದೆ. ಹಿಂದೂ ಮಹಿಳೆಯರು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವುದರ ವಿರುದ್ಧ ಹುಯಿಲೆಬ್ಬಿಸುವ ಹಿಂದುತ್ವ ಪಡೆಗಳು, ಮೇಲ್ಜಾತಿಗಳ ಪೈಶಾಚಿಕ ಪ್ರವೃತ್ತಿಗೆ ಬಲಿಯಾಗುತ್ತಿರುವ ದಲಿತ ಮಹಿಳೆಯರ ಬಗ್ಗೆ ಸೊಲ್ಲೆತ್ತದಿರುವುದು ಬೌದ್ಧಿಕ ದಾರಿದ್ರ್ಯದ ಸಂಕೇತವಾಗಿದೆ.

21ನೆಯ ಶತಮಾನದ ನವ ಭಾರತ ಬೌದ್ಧಿಕವಾಗಿ ಮುನ್ನಡೆಯಬೇಕಾದರೆ ಹೃದಯಗಳನ್ನು ಬೆಸೆಯುವ ಪ್ರವೃತ್ತಿ ಹೆಚ್ಚಾಗಬೇಕಿದೆ. ಪ್ರೀತಿಸುವ ಹೃದಯಗಳನ್ನು ಬೇರ್ಪಡಿಸುವ ಕ್ರೌರ್ಯ ಅಮಾನುಷ ವ್ಯವಸ್ಥೆಗೆ ಬುನಾದಿಯಾಗುತ್ತದೆ. ಭಾರತ ತನ್ನ ಬಹುಮುಖಿ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದರ ಹಿಂದೆ ಮನುಜ ಜೀವಗಳ ನಡುವಿನ ಪರಸ್ಪರ ಪ್ರೀತಿಯ ಪರಂಪರೆ ಇದೆ. ಈ ಪರಂಪರೆಯನ್ನು ಇನ್ನೂ ಬಲಪಡಿಸುವುದು ಪ್ರಜ್ಞಾವಂತ ಸಮಾಜದ ಆದ್ಯತೆಯಾಗಬೇಕಿದೆ.

ಜಾತಿ ಧರ್ಮಗಳ ನಡುವಿನ ಗೋಡೆಗಳನ್ನು ಕೆಡವುವತ್ತ ನಮ್ಮ ಹೆಜ್ಜೆಗಳು ಕ್ರಮಿಸಬೇಕಿದೆ. ಇಂದು ನಾವು ಹೋರಾಡಬೇಕಿರುವುದು ಮಹಿಳೆಯ ಅಸ್ಮಿತೆ, ಅಸ್ತಿತ್ವ, ಮತ್ತು ಹೆಣ್ತನವನ್ನು ಕಟ್ಟಿಹಾಕುವ ಪುರುಷ ಪ್ರಧಾನ ಧೋರಣೆ ಮತ್ತು ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧ. ಕಟ್ಟಿಹಾಕಬೇಕಿರುವುದು ಈ ಪುರುಷ ಪ್ರಧಾನ ಧೋರಣೆಯ ಶ್ರೇಷ್ಠತೆ ಮತ್ತು ಅಹಮಿಕೆಯ ಮನೋಭಾವವನ್ನು. ಪ್ರೀತಿಸುವ ಹೃದಯಗಳನ್ನಲ್ಲ. ಲವ್ ಜಿಹಾದ್ ಎನ್ನುವ ಕಲ್ಪನೆ ಈ ಉದಾತ್ತ ಚಿಂತನೆಯನ್ನು ಭಗ್ನಗೊಳಿಸುವ ಒಂದು ವಿಕೃತಿಯಾಗಿ ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version