ಲೋಕಾರೂಢಿ

ಮನುಕುಲದ ಉಳಿವಿಗೆ ಮಾನವ ಪ್ರೇಮದ ಸಂಕಲ್ಪ

Published

on

  • ಗಂಗಾಧರ ಬಿ ಎಲ್ ನಿಟ್ಟೂರ್

ನಿಜ ನಾವೀಗ ಸಂದಿಗ್ಧ ಮತ್ತು ಸಂಕಟದ ಪರಿಸ್ಥಿತಿಯಲ್ಲಿದ್ದೇವೆ. ಹೌದು, ಇದು ನಮಗಷ್ಟೇ ಅಲ್ಲ ಇಡೀ ಲೋಕಕ್ಕೇ ಬಂದೆರಗಿರುವ ಕಂಟಕ. ಆದರೆ ಈ ಸಮಯದಲ್ಲಿ ನಾವು ಈ ವಿಷಮ ಪರಿಸ್ಥಿತಿಯನ್ನು ಗೆಲ್ಲುವ ಸಂಕಲ್ಪ ಮಾಡಬೇಕಿದೆ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮತ್ತು ಆ ಆಲೋಚನೆಯನ್ನು ಮಾತ್ರ ಮಾಡಬೇಕಿದೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ ಹೊರತು ಆ ವೈರಸ್ ನ ಭಯವನ್ನು ಉಲ್ಬಣಗೊಳಿಸುವ ಕಾರ್ಯವನ್ನಲ್ಲ.

ಇದು ಎಲ್ಲಿಂದ ಬಂತು, ಯಾರಿಂದ ಹರಡಿತು ಎಂಬುದನ್ನೇ ಚರ್ಚಿಸುತ್ತಾ ಥೂ ಅವರಿಗೆ ಹಾಗಾಗಲಿ ಹೀಗಾಗಲಿ ಎಂದು ದೂರಿದರೆ ಬಂದಿದ್ದೇನು ಫಲ ? ಆ ದೂರು ದುಮ್ಮಾನಗಳು ಈಗ ಅಗತ್ಯವೇ ? ಅದರಿಂದ ಕೊರೋನಾ ತೊಲಗಿ ಬಿಡುವುದೇ ಅಥವಾ ಸೋಂಕಿತರ ಸೋಂಕು ನಿವಾರಣೆಯಾಗಲಾದರೂ ಸಾಧ್ಯವೇ ?

ಅದರ ಬದಲು ವಿಶ್ವ ಪ್ರೇಮ, ಮಾನವ ಪ್ರೇಮ ಎಂದು ಉದ್ದುದ್ದ ಭಾಷಣದಲ್ಲಿ, ಬರಹದಲ್ಲಿ ಇಲ್ಲಿಯವರೆಗೂ ನಾವು ಹೇಳುತ್ತಾ, ಬರೆಯುತ್ತಾ ಸಾಗಿದ್ದೆವೆಲ್ಲಾ ಅದನ್ನು ಈಗ ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಾರ್ಯಗತಗೊಳಿಸುವ ಕಿಂಚಿತ್ತಾದರೂ ಪ್ರಯತ್ನ ಮಾಡೋಣ. ಅದಕ್ಕಾಗಿ ನಾವು ಮಾಡಬೇಕಾದ ಒಂದೇ ಒಂದು ಕೆಲಸವೆಂದರೆ ಶುದ್ಧ ಸಂಕಲ್ಪ. ಹೌದು, ಆತ್ಮೀಯರೇ ಈಗ ಹೇಗೂ ನಾವು ಹೊರ ಹೋಗದೆ ಮನೆಯಲ್ಲೇ ಕೂತು ಕಾಲ ನೂಕುತ್ತಿದ್ದೇವೆ.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅಥವಾ ರಾತ್ರಿ ಮಲಗುವ ವೇಳೆ ಮನಸ್ಸನ್ನು ತಿಳಿಯಾಗಿಸಿಕೊಂಡು ಪರಿಶುದ್ಧ ಹೃದಯದಿಂದ ” ಶೀಘ್ರ ಈ ಪರಿಸ್ಥಿತಿಯಿಂದ ನಾವೆಲ್ಲಾ ಪಾರಾಗುತ್ತೇವೆ. ಈ ಗೊಂದಲ ಆತಂಕದ ಪರಿಸ್ಥಿತಿಯಿಂದ ಪಾರಾಗಿ ಮತ್ತೆ ಇಡೀ ಜಗತ್ತು ಸಹಜ ಸ್ಥಿತಿಗೆ ಮರಳುತ್ತದೆ. ನಾವು ನಂಬಿದ ದೈವ ಅಥವಾ ಪ್ರಕೃತಿ ನಮಗೆ ಪರಿಹಾರ ಮಾರ್ಗವನ್ನು ತೆರೆಯುತ್ತದೆ. ಶೀಘ್ರಾತಿ ಶೀಘ್ರ ಜನಜೀವನ ಮತ್ತೇ ಸಹಜ ಸ್ಥಿತಿಗೆ ಬರಲಿದೆ. ” ಎಂಬಿತ್ಯಾದಿ ಶುಭ ಭಾವನೆ, ಶುಭಾಭಿಲಾಷೆಯ ಸಂಕಲ್ಪದೊಂದಿಗೆ ದಿನದ ಆದಿ ಅಂತ್ಯವನ್ನು ಮೂಲತ್ವಕ್ಕೆ ಸಮರ್ಪಿಸೋಣ.

“ಬಾಯಲ್ಲಿ ಆಡಿದ್ದು ಬೆನ್ನಿಗೆ ಮೂಲ” ಎಂಬ ಗಾದೆ ಕೇಳಿರಬಹುದಲ್ಲವೇ. ಅಂದರೆ ” ನಾವು ಈಗ ಏನಾಗಿದ್ದೇವೋ, ನಮಗೆ ಏನು ಲಭಿಸಿದೆಯೋ, ನಮ್ಮ ಕಷ್ಟ ನಷ್ಟ ಎಲ್ಲದಕ್ಕೂ ನಮ್ಮ ಯೋಚನೆಗಳೇ ಕಾರಣ ಎಂಬುದು ಅದರ ಅರ್ಥ. ” ಆದಾಗ್ಯೂ ಎಲ್ಲರೂ ಇಂತಹದ್ದೇ ಆಲೋಚನೆ ಮಾಡಿರಲಿಕ್ಕಿಲ್ಲ ಎಂಬ ಅಂಶ ನಿಜವಾದರೂ ಒಳಿತಿಗಾಗಲಿ ಕೆಡುಕಿಗಾಗಲಿ ಬಹುಪಾಲು ಜನರ ಆಲೋಚನೆಯ ಪ್ರತಿಫಲವಾಗಿ ಅದರ ಫಲವನ್ನು ಎಲ್ಲರೂ ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗುವುದು ಮಾತ್ರ ದುರ್ದೈವವೇ ಸರಿ. ಆದರೆ ಈಗ ನಾವು ಆಡುವ ಮಾತು ಅದು ಪರಿಹಾರದ ಮೂಲಕ್ಕೆ ತಲುಪಲಿ. ಒಳಿತಿನ ಫಲ ಕೊಡುವಂತಾಗಲಿ. ಶೀಘ್ರ ಪರಿಹಾರ ಲಭಿಸುವಂತಾಗಲಿ. ಕೋಟಿ ಕೋಟಿ ಸಂಖ್ಯೆಯಲ್ಲಿರುವ ನಮ್ಮೆಲ್ಲರ ಸಂಕಲ್ಪವೂ ಒಂದೇ ಆದಲ್ಲಿ, ಶುಭಾಕಾಂಕ್ಷೆಯೇ ಆಗಿದ್ದಲ್ಲಿ ಅಂತಹದ್ದೇ ಪ್ರತಿಫಲ ದೊರೆಯುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ !?

ನಿಜವಾಗಿಯೂ ನಮ್ಮೊಳಗೆ ಮಾನವ ಪ್ರೇಮ ಇದ್ದಲ್ಲಿ ಅದು ಮಾನವನೆದೆಗೆ ತಲುಪಲಿ. ಕೊರೋನಾ ಯಾರ ಶ್ವಾಸಕೋಶವನ್ನೂ ಭೇಧಿಸದಂತೆ ಆ ನಿರ್ಮಲ ಪ್ರೇಮ ಅಡ್ಡಗೋಡೆಯಾಗಿ ರಕ್ಷಣಾ ಕವಚ ನಿರ್ಮಿಸಲಿ. ನಮ್ಮ ಕುಟುಂಬದ ಅಥವಾ ಪ್ರೀತಿ ಪಾತ್ರ ವ್ಯಕ್ತಿಗಳು ಮಾತ್ರವಲ್ಲದೆ ಇಡೀ ಮನುಕುಲದ ಉಳಿವಿಗೆ ಆ ನಮ್ಮ ಸಂಕಲ್ಪ ಸೇತುವಾಗಲಿ. ಪರಿಶುದ್ಧ ಭಾವನೆಗೂ ಒಂದು ಸಶಕ್ತತೆ ಮತ್ತು ಬಲವಿದೆ ಎಂಬುದು ಸಾಬೀತಾಗಲಿ.

ಇದು ಸಾಧ್ಯವೇ ಎಂದು ಯೋಚಿಸುವ ಬದಲು, ಇದರಿಂದ ಏನಾದೀತು ಎಂದು ಮೂಗು ಮುರಿಯುವ ಬದಲು ಇದು ಸಾಧ್ಯ, ಸಾಧ್ಯವಾಗಬೇಕು, ಸಾಧ್ಯವಾಗುತ್ತದೆ ಎಂಬ ಶುಭ ನಿರೀಕ್ಷೆಯೊಂದಿಗೆ ಒಮ್ಮೆ ಮಾಡಿಯೇ ನೋಡುವ ಮನಸ್ಸು ಮಾಡಿ ಬಿಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version