ದಿನದ ಸುದ್ದಿ

ಎಂಜಿ ರೋಡ್ ಶಾಂತಿ ಬದುಕು ಮತ್ತು ಬವಣೆ

Published

on

ಸುದ್ದಿದಿನ ವಿಶೇಷ:  ಸ್ಯಾಂಡಲ್‌ವುಡ್‌ನ ಜ್ಯೂನಿಯರ್ ಆರ್ಟಿಸ್ಟ್‌ಗಳಿಗೆ ಎಂಜಿ ರೋಡ್ ಆರ್ಟಿಸ್ಟ್‌ಗಳು ಎಂಬ ಅನ್ವರ್ಥ ನಾಮವೊಂದಿದೆ. ಸಿನಿಮಾದಲ್ಲಿ ಸಣ್ಣಪುಟ್ಟ ರೋಲ್ ಮಾಡುವವರ ಇಂಥ ಕಲಾವಿದರ ಬದುಕನ್ನು ಅನಾವರಣ ಮಾಡುವ ‘ಎಂಜಿ ರೋಡ್ ಶಾಂತಿ’ ನಾಟಕವು ಇದೇ 20ರಂದು ಬೆಂಗಳೂರಿನಲ್ಲಿ ಪ್ರದರ್ಶನವಾಗಲಿದೆ.

ಒಬ್ಬಳು ನಾಟಕದ ಮೂಲಕ ದೇಶಾದ್ಯಂತ ಹೆಸರು ಮಾಡಿದ ರಂಗ ಕಲಾವಿದ ಪ್ರಸನ್ನ ಡಿ. ಅವರು ಈ ನಾಟಕವನ್ನು ನಿರ್ದೇಶಿಸಿದ್ದು, ಮೇ.20ರ ಸಂಜೆ 7.15ಕ್ಕೆ ಬೆಂಗಳೂರಿನ ಮಲ್ಲಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಭಾರತೀಯ ಸಿನಿಮಾ ಹಾಗೂ ರಂಗಭೂಮಿ ಕ್ಷೇತ್ರದಿಂದ ಹತ್ತಿರದಿಂದ ಕಂಡು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಬರಹಗಾರ ವಿಜಯ್ ತೆಂಡೂಲ್ಕರ್ ಅವರ ‘ಬೇಬಿ’ ಮರಾಠಿ ಕಾಂದಂಬರಿಯ ಕನ್ನಡ ಅವತರಣಿಕೆಯು ಎಂಜಿ ರೋಡ್ ಶಾಂತಿ.

ಮರಾಠಿ ಕಾದಂಬರಿಯನ್ನು ಕನ್ನಡ ಮಣ್ಣಿಗೆ ಹೊಂದಿಕೊಳ್ಳುವಂತೆ ಕೆಲವು ಅಂಶಗಳನ್ನು ಸೇರಿಸಿ ನಾಟಕವನ್ನು ಕನ್ನಡಿಗನ ಮನ ಮುಟ್ಟುವಂತೆ ರೂಪಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ಪ್ರಸನ್ನ ಡಿ.

ಸಾಗರ ಮೂಲದವರಾದ ಪ್ರಸನ್ನ ಅವರು ಈವರೆಗೆ ಪೀರನೆಂಬ ಕಿರಾತಕನ ಪ್ರಸಂಗ, ಒಬ್ಬಳು, ಓವರ್ ಕೋಟ್, ಬಿಂಬಾಯಣ, ಪರಿಹಾರ  ಮೊದಲಾದ ನಾಟಕಗಳನ್ನು ನಿರ್ದೇಶಿಸಿದೆ. ಒಬ್ಬಳು ನಾಟಕವು ಇವರಿಗೆ ರಾಷ್ಟ್ರಮಟ್ಟದ ಹೆಸರು ತಂದುಕೊಟ್ಟಿದೆ.

ಮಂಡ್ಯದ ಪಾಂಡವಪುರ ತಾಲೂಕಿನ ಕಲಾವಿದೆ, ರಾಜ್ಯ ಪ್ರಶಸ್ತಿ ವಿಜೇತೆ ಅಕ್ಷತಾ ಪಾಂಡವಪುರ ಅವರು ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕು ಪಾತ್ರಗಳಿರುವ ಈ ನಾಟಕದಲ್ಲಿ ಅಕ್ಷತಾ ಅವರೊಂದಿಗೆ ಕಲಾವಿದರಾದ ಶಿವು, ಮುರುಳಿ, ಗೋಮಾರ್ದನಹಳ್ಳಿ ಮಂಜುನಾಥ್ ನಟಿಸಿದ್ದಾರೆ.

ಮೂಲ ನಾಟಕದಲ್ಲಿ ಬೇಬಿ ಎಂಬುವವಳು ಒಬ್ಬ ಜ್ಯೂನಿಯರ್ ಆರ್ಟಿಸ್ಟ್. ಆಕೆಯ ಬದುಕಿನಲ್ಲಿ ಘಟಿಸುವ ಘಟನೆಗಳೇ ಈ ನಾಟಕದ ಕಥಾವಸ್ತು. ಚಿಕ್ಕಾಸಿಗಾಗಿ ಸಣ್ಣಪುಟ್ಟ ಪಾತ್ರಗಳನ್ನೇ ಅವಲಂಬಿಸಿರುವ ಬೇಬಿ ಶಿವಪ್ಪ ಎಂಬುವವನ ಮನೆಯಲ್ಲಿ ಆಶ್ರಯ ಪಡೆದಿರುತ್ತಾಳೆ. ಬೇಬಿಯನ್ನು ತನ್ನ ತೃಷೆಗಾಗಿ ಬಳಸಿಕೊಳ್ಳುವ ಶಿವಪ್ಪ ಆಕೆಯ ತಮ್ಮನಿಗೆ ಕಿರುಕುಳ ನೀಡಿ ಹುಚ್ಚಾಸ್ಪತ್ರೆಗೆ ಸೇರಿಸುತ್ತಾನೆ. ಎರಡು ವರ್ಷಗಳ ನಂತರ ಆತ ವಾಪಸ್ ಮನೆಗೆ ಬಂದಾಗ ಶಿವಪ್ಪ ಆತನನ್ನು ಪಶುವಿನಂತೆ ಕಾಣುತ್ತಾನೆ ಇನ್ನಷ್ಟು ಚಿತ್ರಹಿಂಸೆ ಕೊಡುತ್ತಾನೆ. ಇದನ್ನು ಕಂಡೂ ಕೂಡ ಬೇಬಿಗೆ ಏನೂ ಮಾಡಲಾಗದ ಸ್ಥಿತಿ.

ಸಂಗೀತಗಾರನೊಬ್ಬನ ಹಾಡುಗಳು ಆಕೆಯ ಬದುಕಿಗೆ ಸ್ಫೂರ್ತಿ. ಆತ ಬರೆಯುವ ಹಾಡುಗಳೇ ಆಕೆಯ ಬದುಕಿಗೆ ಶಕ್ತಿ. ಹೇಗಾದರೂ ಮಾಡಿ ಜೀವನದಲ್ಲಿ ಮುಂದೆ ಬರಬೇಕೆಂಬ ಹಂಬಲದಲ್ಲಿರುವ ಆಕೆಗೆ ಸಹಾಯಕ ನಿರ್ದೇಶಕನೊಬ್ಬ ತನ್ನ ಸಿನಿಮಾದ ನಾಯಕಿ ಮಾಡುವುದಾಗಿ ಭರವಸೆ ನೀಡುತ್ತಾನೆ. ಆತ ಒಬ್ಬ ಬೇಬಿ ಮನೆಗೆ ಬಂದಾಗ ಶಿವಪ್ಪ ಅದನ್ನು ಕಂಡು ಬೇಬಿಯನ್ನು ಮನೆಯಿಂದ ಹೊರ ಹಾಕುತ್ತಾನೆ. ಇದು ಸಿನಿಮಾದ ಮುಖ್ಯ ಕತೆ.

ಈ ಕತೆಯನ್ನು ಕನ್ನಡ ನೆಲಕ್ಕೆ ಹೊಂದಿಸುವ ನಿಟ್ಟಿನಲ್ಲಿ ನಿರ್ದೇಶಕರು ಡಬ್ಬಿಂಗ್ ಚರ್ಚೆ, ಕಾಸ್ಟಿಂಗ್ ಕೌಚ್ ಮೊದಲಾದ ವಿಷಯಗಳನ್ನು ಸ್ಪರ್ಶಿಸಿದ್ದಾರೆ.

ಜ್ಯೂನಿಯರ್ ಆರ್ಟಿಸ್ಟ್‌ಗಳು ಒಂದು ಸಿನಿಮಾದ ಬೆನ್ನೆಲುಬಾಗಿ ನಿಂತಿರುತ್ತಾರೆ. ಇವರಿಗೆ ನೀಡುವ ಸಂಭಾವನೆ ಅವರ ಪಾತ್ರಕ್ಕೆ ತಕ್ಕಂತಿರುತ್ತದೆ. ಮದುವೆ ಮನೆಯಲ್ಲಿ ಹೆಣ್ಣಿನ ಜತೆ ಇರುವ ಪಾತ್ರಕ್ಕೆ ಹೆಚ್ಚು, ಗ್ರಾಮೀಣ ಮಹಿಳೆ ಪಾತ್ರಕ್ಕೆ ಕಡಿಮೆ ಸಂಭಾವನೆ ಪಡೆಯುತ್ತಾರೆ. ಇಂಥ ಪಾತ್ರದಾರಿಗಳ ಬದುಕಿನ ಬವಣೆಗಳು ಹೇಳತೀರದು. ಅದನ್ನು ನಾಟಕವಾಗಿಸುವ ಪ್ರಯತ್ನ ನಮ್ಮದು ಎನ್ನುತ್ತಾರೆ ನಿರ್ದೇಶಕ ಪ್ರಸನ್ನ.

———————–……………………———————

“ಶ್ರೀ ರೆಡ್ಡಿ ಎಂಬ ಕಲಾವಿದೆ ಇತ್ತೀಚೆಗೆ ಸಾರ್ವಜನಿಕವಾಗಿ ಅರೆಬೆತ್ತಲಾಗಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಕಲಾವಿದೆ ಎಂದರೆ ಆಕೆಯನ್ನು ಕಾಮ ತೃಷೆ ತೀರಿಸಿಕೊಳ್ಳುವ ಗಂಡು ಮನಸ್ಥಿತಿಯ ಪ್ರತಿಭಟನೆಯ ರೂಪವೇ ಎಂಜಿ ರೋಡ್ ಶಾಂತಿ. ಒಬ್ಬ ಕಲಾವಿದೆಯಲ್ಲಿರುವ ಪ್ರತಿಭೆಯನ್ನು ಗಂಡು ಯಾವ ರೀತಿ ಅಪಾನಿಸುತ್ತಾನೆ ಎಂಬುದನ್ನು ಇದು ಪ್ರತಿಪಾದಿಸುತ್ತದೆ.”

                           |ಪ್ರಸನ್ನ ಡಿ. ರಂಗ ನಿದೇರ್ಶಕ

ಲೇಖಕ: ಚಾಣಕ್ಯ
ಪರ್ತಕರ್ತ
ಮೈಸೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version