ದಿನದ ಸುದ್ದಿ
ಮಹಾಜನ್ ವರದಿಯೇ ಅಂತಿಮ ; ಉದ್ಭವ್ ಠಾಕ್ರೆ ಉದ್ಧಟ ನುಡಿಗೆ ಯಡಿಯೂರಪ್ಪ ತಿರುಗೇಟು
ಸುದ್ದಿದಿನ, ಬೆಂಗಳೂರು : ‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು,ಹೀಗಿರುವಾಗ ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ ಎಂದಿದ್ದಾರೆ.
ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ’. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243