ಬಹಿರಂಗ
ನಮ್ಮ ಸಮಾಜವು ಅತಿಬುದ್ಧಿವಂತರ ಮತ್ತು ಅತಿನಾಯಕತ್ವದ ಭಾರದಲ್ಲಿ ನರಳುತ್ತಿದೆ..!
- ಹ.ರಾ.ಮಹಿಶ ಬೌದ್ಧ
ಒಂದು ದೃಷ್ಟಾಂತ: ಸಮೂಹ ನೃತ್ಯ ಅಭ್ಯಾಸದ ಸಂದರ್ಭದಲ್ಲಿ ತಂಡದವರೆಲ್ಲಾ ಮೊದಲು ಬಲಗಾಲ ಬಲಕ್ಕಿಟ್ಟು ಎಡಗಾಲೆತ್ತಿ ಕುಣಿಯಬೇಕೆಂದು ಅಭ್ಯಾಸ ಮಾಡಿದ್ದೆವು ಎಂದಿಟ್ಟುಕೊಳ್ಳಿ ವೇದಿಕೆಯ ಮೇಲೆ ಪ್ರದರ್ಶನ ಮಾಡುವಾಗ ಮರೆತು ಅಕಸ್ಮಾತ್ ತಂಡದ ಎಲ್ಲರೂ ಬಲಗಾಲಿನ ಬದಲು ಎಡಗಾಲ ಎಡಕ್ಕಿಟ್ಟು ಬಲಗಾಲೆತ್ತಿ ಕುಣಿದರೂ ನೃತ್ಯವು ಕೆಡುವುದಿಲ್ಲ..! ತಂಡದವರೂ ಕಸಿವಿಸಿಗೊಳ್ಳದೇ ನಕ್ಕು ನೃತ್ಯ ಮುಂದುವರಿಸುತ್ತಾರೆ ಪ್ರೇಕ್ಷಕರಿಗೂ ಅಲ್ಲಿ ತಪ್ಪಾಯಿತು ಎನಿಸುವುದಿಲ್ಲ..!!
ಆದರೆ, ಆ ತಪ್ಪನ್ನು (?) ತಂಡದ ಎಲ್ಲರೂ ಮಾಡಬೇಕು..! ಒಂದಿಬ್ಬರು ಅಭ್ಯಾಸದಂತೆಯೇ ಬಲಗಾಲು ಬಲಕ್ಕಿಟ್ಟು ಸರಿಯಾಗಿ ಮಾಡಿ ಇನ್ನೆಲ್ಲರೂ ಎಡಗಾಲ ಎಡಕ್ಕಿಟ್ಟರೂ ಅಥವಾ ಎಲ್ಲರೂ ಅಭ್ಯಾಸದಂತೆಯೇ ಬಲಗಾಲ ಬಲಕ್ಕಿಟ್ಟು ಸರಿಯಾಗಿ ಮಾಡಿ ಒಂದಿಬ್ಬರು ಮಾತ್ರ ಎಡಗಾಲ ಎಡಕ್ಕಿಟ್ಟರೆ ನೃತ್ಯ ಕೆಡುತ್ತದೆ..! ತಪ್ಪು ಮಾಡಿದವರಿಗೂ ಸರಿ ಮಾಡಿದವರಿಗೂ ವೇದಿಕೆಯ ಮೇಲೆಯೇ ಒಂಥರಾ ಕಸಿವಿಸಿಯಾಗುತ್ತದೆ. ಮತ್ತು ಆ ತಪ್ಪು ಪ್ರೇಕ್ಷಕರಿಗೂ ಎದ್ದು ಕಾಣುತ್ತದೆ..!
ಬಂಧುಗಳೇ, ಅನೇಕ ವಿಚಾರಗಳಲ್ಲಿ ಈಗ ಆಗುತ್ತಿರುವುದು ಇದೇ. ನಾನು ಅಥವಾ ನಾವು ಮಾಡುವುದು ಬರೆಯುವುದು ಅರಿತಿರುವುದು ಮಾತ್ರ ಸರಿ ಆದರೆ ನಮ್ಮದೇ ಗುರಿಯಿರುವ ಇನ್ನೊಬ್ಬರು ಮಾಡುತ್ತಿರುವುದು ತಿಳಿದಿರುವುದು ಬರೆದಿರುವುದು ತಪ್ಪು. ಅದು ಸರಿಯಲ್ಲ ಸಮಂಜಸವಲ್ಲ..!! ಎಂಬ ಮನಸ್ಥಿತಿ..!
ಯಾಕೆ ಹೀಗೆ….!? ಯಾಕೆ, ಶತಮಾನಗಳಿಂದಲೂ ಸರ್ವವಿದ್ಯೆಗಳ ಗುತ್ತಿಗೆ ಹಿಡಿದು ಬಂದಿರುವ ಬ್ರಾಹ್ಮಣ ಪುರಯಷ ವಿದ್ಯಾವಂತ ಬುದ್ಧಿವಂತರಿಗೆ ಈ ದೇವರು-ಗೀವರೆಲ್ಲಾ ಸುಳ್ಳು ಶಾಸ್ತ್ರ ಪುರಾಣಗಳೆಲ್ಲಾ ಪೊಳ್ಳು ಎಂದು ಗೊತ್ತಿಲ್ಲವೇ..!? ಆದರೂ ಅವರು ಹಾಗೆ ಹೇಳುವರೇ..!? ತಾವೂ ನಂಬುವಂತೆ ನಟಿಸಿ ಇತರಕೋಟಿಕೋಟಿಜನರನ್ನೂ ನಿಜವಾಗಿಯೂ ನಂಬಿಸಿ ಲಾಭ ಮಾಡಿಕೊಳ್ಳುತ್ತಿಲ್ಲವೇ.. ನಿರಾಯಾಸವಾಗಿ ಗೌರವ ಪಡೆಯುತ್ತಿಲ್ಲವೇ ಅದೇ ಧರ್ಮದೇವರೆಂಬ ಸುಳ್ಳುಗಳ ಸೌಧದ ಮೇಲೆ ದೇಶ ಆಳುತ್ತಿಲ್ಲವೇ..!? ಅವರಿಗೆ ಗೊತ್ತಿಲ್ಲವೇ
“ಈ ದೇಶದಲ್ಲಿ ನಮ್ಮವರು ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿಬರೆದಿದ್ದಾರೆ ಎಂದು..!? ಎಲ್ಲಿಯಾದರೂ ಅವರು ಹೇಳುತ್ತಾರೆಯೇ…!? ಆ ಸುಳ್ಳು ಇತಿಹಾಸವನ್ನೇ ಸತ್ಯವೆಂದು ಪ್ರತಿಪಾದಿಸಲು ಸಾವಿರಾರು ಆಕರ ಗ್ರಂಥಗಳನ್ನು ಸೃಷ್ಟಿಸಿ ತಮಗೆ ಗೊತ್ತಿರುವ ಸತ್ಯವನ್ನು ಎದೆಯೊಳಗಿಟ್ಟುಕೊಂಡು ಪಠ್ಯದ ಮೂಲಕವೇ ದೇಶದ ಜನರ ಮೆದುಳಿಗೆ ಸುಳ್ಳುಗಳನ್ನೇ ತುರುಕಿ ತುಂಬಿ ಅಜ್ಞಾನದಿಂದ ಬೆಳೆದ ಬೆಳೆಯನ್ನು ಭರಪೂರ ಉಣ್ಣುತ್ತಿಲ್ಲವೇ..
ಇಡೀ ದೇಶದ ಸಂಪತ್ತಿನ ಒಡೆಯರಾಗಿಲ್ಲವೇ..!? ತನ್ನವರ ಒಂದು ಕೂದಲೂ ಕೊಂಕದಂತೆ ನೋಡಿಕೊಳ್ಳತ್ತಿಲ್ಲವೇ ದೇಶ ಆಳುತ್ತಿಲ್ಲವೇ..!? ಇದು ತಂತ್ರಗಾರಿಕೆ ಅಲ್ಲವೇ…!? ಅವರು ಸುಳ್ಳು ಮೋಸ ಸ್ವಾರ್ಥಕ್ಕಾಗಿ ತಂತ್ರಗಾರಿಕೆ ಮಾಡುತ್ತಾ ಯಶಸ್ವಿಯಾಗಿರಬೇಕಾದರೆ ನಾವು ಬಹುಜನ ಸಮಾಜವರು ಸತ್ಯಸ್ಥಾಪನೆಗಾಗಿ ಯಾಕೆ ಪ್ರತಿತಂತ್ರಗಾರಿಕೆ ಮಾಡಬಾರದು..!? ಅವರು ಒಡೆಯಲು ಒಡೆದು ಆಳಲು ಸಾವಿರ ಸುಳ್ಳು ಹೇಳುತ್ತಾ ನಂಬಿಸುತ್ತಾ ಬೇರುಬಿಡಿಸಿರಬೇಕಾದರೆ ನಾವು ಕಟ್ಟಲು ಕಟ್ಟಿಆಳಲು ನೂರು ಸತ್ಯಗಳನ್ನು ಯಾಕೆ ಗಟ್ಟಿಯಾಗಿ ಹೇಳಬಾರದು..!?
ಬಾಬಾಸಾಹೇಬರು ಹೋರಾಟ ಆರಂಭಿಸಿದ ಆ ದಿನಗಳಲ್ಲಿ (1918) ಸೌತ್ ಬರೋ ಆಯೋಗ ಮುಂದೆ ಭಾರತದ ಶೋಷಿತರಿಗೆ ವಿಶೇಷ ಹಕ್ಕುಗಳನ್ನು ಕೊಡಿಸಿಕೊಡಲು ಅವರು ಗಟ್ಟಿದನಿ ಎತ್ತಿ ಒತ್ತಿಹೇಳಿದ ಮಾತು
“ಶೋಷಿತರು/ಅಸ್ಪೃಶ್ಯರು ಹಿಂದೂಗಳಲ್ಲ”
ಅವರು (1927) ಚೌಡರ್ ಕೆರೆ ನೀರು ಮುಟ್ಟವ ಚಳವಳಿ ಮಾಡಿದ್ದು (1930) ಕಾಳಾರಾಂ ದೇವಾಲಯ ಪ್ರವೇಶ ಚಳವಳಿ ಮಾಡಿದ್ದು “ಶೋಷಿತರು/ಅಸ್ಪೃಶ್ಯರು ಹಿಂದೂಗಳಲ್ಲ” ಎಂದು ಮರುಸಾಬೀತುಪಡಿಸಲು..! 1930-31 ರ ದುಂಡುಮೇಜಿನ ಸಭೆಯಲ್ಲಿ ಗಟ್ಟಿಯಾಗಿ ವಾದ ಮಂಡಿಸಿ ಎಲ್ಲಾ ಹಕ್ಕುಅಧಿಕಾರಗಳನ್ನು ಗಳಿಸಿ ತಂದ್ದದ್ದು ಸಹ ಇದೇ “ಶೋಷಿತರು/ಅಸ್ಪೃಶ್ಯರು ಹಿಂದೂಗಳಲ್ಲ” ಎಂಬ ವಿಚಾರದಿಂದಲೇ…!! ಆದರೆ ಇದೇ ಬಾಬಾಸಾಹೇಬರಿಗೆ ತಾನು ತನ್ನ ಸಮುದಾಯ ಅಷ್ಟೇ ಅಲ್ಲದೇ ಇಡಿ ದೇಶದ SC ST/OBC ಗಳು ಮುಲತಃ ಹಿಂದೂಗಳಲ್ಲ ಎಂಬ ಸತ್ಯ ಆ ಮಟ್ಟದ ಐತಿಹಾಸಿಕ ಆಧಾರಸಹಿತ ಸ್ಪಷ್ಟತೆ ಇದ್ದರೂ 1935 ರ ಯವೋಲಾ ಅಧಿವೇಶನದಲ್ಲಿ “ನಾನು ಹಿಂದುವಾಗಿ ಹುಟ್ಟಿದ್ದೇನೆ” ಎಂದು ಯಾಕೆ ಹೇಳಿದರು…!? ಇದು ತನ್ನ ಸಮುದಾಯದೊಂದಿಗೆ ಇಡೀ ದೇಶದ ಶೋಷಿತ ಮೂಲನಿವಾಸಿ ಸಮುದಾಯಗಳನ್ನು ವಿಮೋಚನೆ ಮಾಡುವ ತಂತ್ರಗಾರಿಕೆಯಲ್ಲವೇ…!? ಬಾಬಾಸಾಹೇಬರನ್ನು ಓದಿಕೊಂಡು ಬರೆಯುತ್ತಿರುವ ಬುದ್ಧಿವಂತರಿಗೆಲ್ಲಾ ಎಲ್ಲವನ್ನೂ ಬಿಡಿಸಿ ಹೇಳಬೇಕೆ..!? ಯಾಕೆ ಈ ಕೂದಲು ಸೀಳುವ ಸಾಹಸ..!? ಯಾಕೀ ಅತಿಬುದ್ಧಿವಂತಿಕೆ..!?
“ಮಹಿಶ ದಸರ” ದ ಹೆಸರಿನಲ್ಲಿ ಒಂದಷ್ಟು OBC/SC/ST/RM ಮೂಲನಿವಾಸಿ ಬಂಧುಗಳು ಕಳೆದ ಕೆಲವು ವರ್ಷಗಳಿಂದ ಮೂಲನಿವಾಸಿ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದಾರೆ. ಮಾಡಲಿ ಬಿಡಿ..! ಸಾಧ್ಯವಾದರೆ ಭಾಗವಹಿಸೋಣ ಇಲ್ಲದಿದ್ದರೆ ಸುಮ್ಮನಿರೋಣ..! ನಮ್ಮ ವಿರೋಧಿಗಳೆನಿಸಿಕೊಂಡಿರುವ ಮನುವಾದಿಗಳನ್ನಾದರೂ ನೋಡಿ ಕಲಿಯೋಣ ಎಂಬುದು ನನ್ನ ವಿನಮ್ರ ಮನವಿ..! ಯಾವುದಾದರೂ ನೆಪದಲ್ಲಿ ಯಾರ ಮೂಲಕವಾದರೂ ಸಾಮಾಜಿಕ ಪರಿವರ್ತನಾ ಚಳವಳಿ ಮುನ್ನಡೆದರೆ ಎಲ್ಲರೂ ಮನದಲ್ಲೇ ಖುಷಿಪಡೋಣ ಭಾಗಿಯಾಗೋಣ..! ವಿರೋಧಿಸಲೆಂದೇ ಹಾಳುಗೆಡವಲೆಂದೇ ಮನುವಾದಿಗಳಿದ್ದಾರೆ..! ನಾವು ಒಬ್ಬರನ್ನೊಬ್ಬರು ಒಪ್ಪೋಣ ಒಟ್ಟಿಗೆ ಸೇರಿ ಕಟ್ಟೋಣ..!
ಮಹಿಷದಸರಾವನ್ನು ಇನ್ನು ಮುಂದೆ ಮನೆಮನೆಯಲ್ಲಿಯೂ ಆಚರಿಸೋಣ…!
ಸುದ್ದಿದಿನ.ಕಾಂ|ವಾಟ್ಸಾಪ್|9980346243